12 ವರ್ಷಗಳ ಹಿಂದಿನ ಮಾತು. ಒಡಿಶಾ ರಾಜಧಾನಿ ಕಟಕ್ ನಗರದಿಂದ ಸುಮಾರು 30 ಕಿ.ಮೀ ದೂರದ ಡ್ರೀಮ್ಸ್ ಮೈದಾನದಲ್ಲಿ ಮಾಧ್ಯಮ ಪ್ರತಿನಿಧಿಗಳಿಗಾಗಿ ಹಾಕಿದ್ದ ಪೆಂಡಾಲ್‌ನಲ್ಲಿದ್ದ ಕರ್ನಾಟಕದ ಪತ್ರಕರ್ತರೊಂದಿಗೆ ಮಾತಿಗಿಳಿದಿದ್ದರು ಕಣ್ಣಾವುರ್ ಲೋಕೇಶ್ ರಾಹುಲ್. ಚಿಗುರು ಗಡ್ಡ, ಮೀಸೆ, ಗುಳಿ ಬೀಳುವ ಕೆನ್ನೆ ಮತ್ತು ಬೆವರಲ್ಲಿ ಮಿಂದ ಕೂದಲುಗಳ ರಾಶಿ ಗಮನ ಸೆಳೆಯುತ್ತಿದ್ದವು. ಇಡೀ ದಿನ ಬಿಸಿಲಿನ ಧಗೆಯಲ್ಲಿ ಆಡಿದ್ದರೂ ಕಂಗಳಲ್ಲಿ ಮಾತ್ರ ಕನಸುಗಳ ಸಾಲು.
‘ಭಾರತ ತಂಡದಲ್ಲಿ ಆಡುವುದೇ ನನ್ನ ಗುರಿ. ಅಷ್ಟೇ ಅಲ್ಲ. ಬಹಳಷ್ಟು ವರ್ಷಗಳವರೆಗೆ ರಾಷ್ಟ್ರೀಯ ತಂಡದಲ್ಲಿ ಆಡಬೇಕು. ನಮ್ಮ ತಂಡದಲ್ಲಿ ನನ್ನಂತೆ ಕನಸು ಕಾಣುವ ಹುಡುಗರು ಬಹಳಷ್ಟಿದ್ದಾರೆ. ಅದು ಕರ್ನಾಟಕ ತಂಡದ ಶಕ್ತಿ’ ಎಂದು ಪೆವಿಲಿಯನ್‌ನತ್ತ ದೃಷ್ಟಿ ಹಾಯಿಸಿದರು. ಅಲ್ಲಿ ರಾಬಿನ್ ಉತ್ತಪ್ಪ, ಮಯಂಕ್ ಅಗರವಾಲ್, ಮನೀಷ್ ಪಾಂಡೆ, ಅಭಿಮನ್ಯು ಮಿಥುನ್ ಅವರೆಲ್ಲ ಫುಟ್‌ಬಾಲ್ ಆಟದಲ್ಲಿ ಮಗ್ನರಾಗಿದ್ದರು. ರಾಹುಲ್ ರಣಜಿ ಕ್ರಿಕೆಟ್‌ಗೆ ಪ್ರವೇಶಿಸಿದ್ದ ಕಾಲಘಟ್ಟದಲ್ಲಿ ರಾಜ್ಯ ತಂಡವೇ ಮಿನಿ ಭಾರತ ಬಳಗದಂತೆ ಇತ್ತು. ಆದರೆ ರಾಹುಲ್ ಆ ದಿನ ಹೇಳಿದ್ದನ್ನು ಅಕ್ಷರಶಃ ಸಾಧಿಸಿದ್ದಾರೆ. ತಮ್ಮ ಸಮಕಾಲೀನ ಆಟಗಾರರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ.
2014ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ರಾಹುಲ್, ಎರಡು ವರ್ಷಗಳ ನಂತರ ಏಕದಿನ ಕ್ರಿಕೆಟ್ ಗೆ ಕಾಲಿಡುವ ಅವಕಾಶ ಪಡೆದಿದ್ದರು. ಅಲ್ಲಿಂದ ಇಲ್ಲಿಯವರೆಗೆ ಅವರು ಹಲವು ಬಾರಿ ಫಾರ್ಮ್ ಕಳೆದುಕೊಂಡಿದ್ದಾರೆ. ಗಾಯಗೊಂಡಿದ್ದಾರೆ, ಘಾಸಿಯಾಗಿದ್ದಾರೆ. ಆದರೂ ಪ್ರತಿ ಬಾರಿಯೂ ಪುಟಿದೆದ್ದು ನಿಂತಿದ್ದಾರೆ. ತಾವಂದುಕೊಂಡಂತೆ ಸುಮಾರು ಒಂದು ದಶಕದಿಂದ ತಂಡದ ಭಾಗವಾಗಿ ಉಳಿದಿದ್ದಾರೆ. ಈ ಹಾದಿಯಲ್ಲಿ ಅವರು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್ ಅವರಂತಹ ಸೀನಿಯರ್‌ಗಳ ಸ್ಪರ್ಧೆಯನ್ನೂ ಎದುರಿಸಿದ್ದಾರೆ. ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಪೃಥ್ವಿಶಾ ಅವರಂತಹ ಜೂನಿಯರ್‌ಗಳ ಪೈಪೋಟಿಗೂ ಎದೆಗೊಟ್ಟಿದ್ದಾರೆ.
ಆದರೆ ಕೆ.ಎಲ್. ರಾಹುಲ್ ತಮ್ಮೆದುರಿಗೆ ಬಂದ ಸ್ಪರ್ಧೆಗಳನ್ನು ದಿಟ್ಟವಾಗಿ ಎದುರಿಸಿದ್ದಾರೆ. ಅವರಲ್ಲಿರುವ ತಾಳ್ಮೆ, ಛಲ ಮತ್ತು ಯಾವುದೇ ಅಳತೆಯ ಪಾತ್ರೆಗೂ ಹೊಂದಿಕೊಂಡು ಬಿಡುವ ಚಲನಶಕ್ತಿ ಅವರದ್ದು. ಕಳೆದ ನಾಲ್ಕು ತಿಂಗಳುಗಳ ಅವರ ವೃತ್ತಿಜೀವನವೇ ಇದಕ್ಕೆ ಉದಾಹರಣೆ. ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಗೈರು ಹಾಜರಾದ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದ್ದ ರಾಹುಲ್ ನಂತರದ ಕೆಲವು ಪಂದ್ಯಗಳಲ್ಲಿ 5ನೇ ಕ್ರಮಾಂಕದಲ್ಲಿ ಆಡಿದ್ದರು.
ಈಗ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿಯೂ ಅಷ್ಟೇ. ಆರಂಭದಲ್ಲಿ 5ನೇ ಕ್ರಮಾಂಕ ನೀಡಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ಅಕ್ಷರ್ ಪಟೇಲ್ ಅವರಿಗೆ ಬಡ್ತಿ ನೀಡಿದ್ದರಿಂದ, ರಾಹುಲ್ 6ನೇ ಕ್ರಮಾಂಕದಲ್ಲಿ ಆಡಬೇಕಾಗಿದೆ. ವಿಕೆಟ್‌ಕೀಪಿಂಗ್‌ನಲ್ಲಿಯೂ ಚುರುಕಾಗಿರುವ ರಾಹುಲ್ ಅವರಿಂದಾಗಿ ತಂಡದಲ್ಲಿ ಒಬ್ಬ ಹೆಚ್ಚುವರಿ ಬೌಲರ್ ಅಥವಾ ಆಲ್‌ರೌಂಡರ್ ಆಡಲು ಸಾಧ್ಯವಾಗಿದೆ. ಪರಿಣತ ವಿಕೆಟ್‌ಕೀಪರ್ ರಿಷಭ್ ಪಂತ್ ಅವರಷ್ಟೇ ಪರಿಣಾಮಕಾರಿಯಾಗಿರುವ ರಾಹುಲ್ ತಮ್ಮ ಹೊಣೆಯನ್ನು ನಿಭಾಯಿಸುತ್ತಿದ್ದಾರೆ. ಬಹುಶಃ ಬ್ಯಾಟಿಂಗ್ ಕ್ರಮಾಂಕ ಮತ್ತು ವಿಕೆಟ್‌ಕೀಪಿಂಗ್ ಪ್ರಯೋಗಗಳಿಗೆ ರಾಹುಲ್ ಪರೀಕ್ಷೆಗೊಳಗಾದಷ್ಟು ಇನ್ನಾರೂ ಆಗಿರಲಿಕ್ಕಿಲ್ಲ. ದಶಕಗಳ ಹಿಂದೆ ರಾಹುಲ್ ದ್ರಾವಿಡ್ ಅವರಿಗೆ ವಿಕೆಟ್‌ಕೀಪಿಂಗ್ ಹೊಣೆ ನೀಡಲಾಗಿತ್ತು. ಆದರೆ, ಬ್ಯಾಟಿಂಗ್ ಕ್ರಮಾಂಕದಲ್ಲಿ ಅವರಿಗೆ ಕೆ.ಎಲ್. ರಾಹುಲ್‌ಗಾದಷ್ಟು ಪರೀಕ್ಷೆ ಆಗಿರಲಿಲ್ಲ.
ಆರಂಭಿಕ ಬ್ಯಾಟರ್ ಆಗಿ ಭಾರತ ತಂಡದಲ್ಲಿ ಪದಾರ್ಪಣೆ ಮಾಡಿದವರು ರಾಹುಲ್. ಆದರೆ ಮಂಗಳವಾರ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಸೆಮಿಫೈನಲ್ ಎದುರಿನ ಪಂದ್ಯದಲ್ಲಿ ಫಿನಿಷರ್ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಹಾರ್ದಿಕ್ ಪಾಂಡ್ಯ ಅವರು ಭಾರತದ ಜಯಕ್ಕೆ ತಮ್ಮದೇ ಆದ ಕಾಣಿಕೆ ನೀಡಿ ಪೆವಿಲಿಯನ್‌ಗೆ ಮರಳಿದ್ದರು. ಆರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ 32 ವರ್ಷದ ರಾಹುಲ್ ಪ್ರಬುದ್ಧವಾದ ಆಟವಾಡಿದರು.
ಅವರ ಹೊಡೆತಗಳ ಆಯ್ಕೆ ನಿಖರವಾಗಿತ್ತು. ಅದರಲ್ಲೂ ಅವರು 43ನೇ ಓವರ್‌ನಲ್ಲಿ ಸ್ಪಿನ್ನರ್ ಆ್ಯಡಂ ಜಂಪಾ ಅವರ ಎಸೆತವನ್ನು ಕ್ರೀಸ್‌ನಿಂದ ಕುಣಿಯುತ್ತ ಮುನ್ನುಗಿ ಬಂದ ರಾಹುಲ್ ಸಿಕ್ಸರ್‌ಗೆತ್ತಿದ್ದ ರೀತಿ ಇನಿಂಗ್ಸ್‌ಗೆ ಬಲ ತುಂಬಿತು. 84 ಮೀಟರ್ ಎತ್ತರಕ್ಕೆ ಹಾರಿದ ಚೆಂಡು ಸ್ಟ್ಯಾಂಡ್‌ಗಳಲ್ಲಿ ಹೋಗಿ ಬಿತ್ತು. ಆ ಹೊಡೆತ ಅವರ ತಾಂತ್ರಿಕ ಕೌಶಲದ ನೈಪುಣ್ಯತೆ ಮತ್ತು ಆತ್ಮವಿಶ್ವಾಸದ ಎತ್ತರವೂ ಹೌದು. ವಿಜಯದ ಸಿಕ್ಸರ್ ಹೊಡೆದ ರಾಹುಲ್ ತಂಡವು ಫೈನಲ್ ಪ್ರವೇಶಿಸಿದ ಸಂತಸವನ್ನು ಸರಳವಾಗಿಯೇ ಆಚರಿಸಿದರು. 2020ರ ನಂತರ ಅವರನ್ನು ಬೇರೆ ಬೇರೆ ಕ್ರಮಾಂಕದಲ್ಲಿ ಆಡಿಸಲಾಗುತ್ತಿದೆ. ಆದರೆ ಇದರಿಂದ ಅವರ ಏಕಾಗ್ರತೆಗೆ ಭಂಗ ಬಂದಿಲ್ಲ.
ಎರಡು ವರ್ಷಗಳ ಹಿಂದೆ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿಯೂ ವಿಕೆಟ್‌ಕೀಪಿಂಗ್ ಹೊಣೆಯನ್ನು ನಿಭಾಯಿಸಿದ್ದರು. ಆದರೆ ಅವರಿಗೆ ಹೋದ ವರ್ಷ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ.
‘ಅಗ್ರಕ್ರಮಾಂಕದಲ್ಲಿ ಆಡುವುದನ್ನು ನಾನು ಎಂಜಾಯ್ ಮಾಡುತ್ತೇನೆ. ಆದರೆ ತಂಡದ ಗೆಲುವಿಗಾಗಿ ಯಾವುದೇ ಕ್ರಮಾಂಕದಲ್ಲಿ ಆಡುವುದು ತೃಪ್ತಿಕರ ಸಂಗತಿ’ ಎಂದು ರಾಹುಲ್ ಮಂಗಳವಾರ ಪಂದ್ಯದ ನಂತರ ಟಿ.ವಿ. ಸಂದರ್ಶನದಲ್ಲಿ ಹೇಳಿದ್ದರು.
ಇದೀಗ ಅವರು 84 ಏಕದಿನ ಪಂದ್ಯಗಳಲ್ಲಿ 3009 ರನ್ ಗಳಿಸಿದ ಸಾಧನೆಯನ್ನೂ ಮಾಡಿದ್ದಾರೆ. 48.53ರ ಸರಾಸರಿಯಲ್ಲಿ ಅವರು ಈ ರನ್‌ಗಳನ್ನು ಕಲೆ ಹಾಕಿದ್ದಾರೆ. 3 ಮಾದರಿಗಳಲ್ಲಿಯೂ ಶತಕ ಹೊಡೆದ ಕೆಲವೇ ಕೆಲವು ಭಾರತೀಯ ಆಟಗಾರರ ಪೈಕಿ ರಾಹುಲ್ ಕೂಡ ಒಬ್ಬರು. ರನ್ ಗಳಿಕೆ, ಕೀಪಿಂಗ್ ಪ್ರದರ್ಶನ ಏನೇ ಇರಲಿ. ಶಾಂತಚಿತ್ತದಿಂದ ಸಾಧನೆ ಮಾಡುವ ಛಲ ಅವರದ್ದು. ಕರ್ನಾಟಕದ ಕ್ರಿಕೆಟ್‌ನ ಪರಂಪರೆಯ ಪ್ರಮುಖ ಕೊಂಡಿಯೂ ಅವರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.