ADVERTISEMENT

ವಿಶ್ವತಂಡದ ಜೊತೆ ಡ್ರಾಕ್ಕೆ ಒಪ್ಪಿದ ಕಾರ್ಲ್‌ಸನ್‌

ಪಿಟಿಐ
Published 20 ಮೇ 2025, 14:43 IST
Last Updated 20 ಮೇ 2025, 14:43 IST
ಮ್ಯಾಗ್ನಸ್‌ ಕಾರ್ಲ್‌ಸನ್‌
ಮ್ಯಾಗ್ನಸ್‌ ಕಾರ್ಲ್‌ಸನ್‌   

ಬರ್ಲಿನ್: ‘ಮ್ಯಾಗ್ನಸ್‌ ಕಾರ್ಲ್‌ಸನ್‌ vs ದಿ ವರ್ಲ್ಡ್‌’ ಹೆಸರಿನ ಹಣಾಹಣಿಯ ಮೊದಲ ಪಂದ್ಯದಲ್ಲಿ ನಾರ್ವೆಯ ದಿಗ್ಗಜ ಆಟಗಾರ ಸೋಮವಾರ ‘ಡ್ರಾ’ಕ್ಕೆ ಒಪ್ಪಿಕೊಳ್ಳಬೇಕಾಯಿತು. ವೆಬ್‌ಸೈಟ್‌ ‘ಚೆಸ್‌.ಕಾಮ್‌ನಲ್ಲಿ’ ನಡೆದ ಈ ‘ಫ್ರೀಸ್ಟೈಲ್‌ ಆನ್‌ಲೈನ್‌’ ಪಂದ್ಯದಲ್ಲಿ ಕಾರ್ಲ್‌ಸನ್ 1,43,000 ಜನರ ಜೊತೆ ಆಡಿದ್ದರು.

ಏ. 4ರಂದು ಈ ಪಂದ್ಯ ಆರಂಭವಾಗಿತ್ತು. ವಿಶ್ವ ತಂಡವು (ಟೀಮ್‌ ವರ್ಲ್ಡ್‌), ಕಾರ್ಲ್‌ಸನ್‌ ರಾಜನಿಗೆ ಮೂರನೇ ಸಲ ‘ಚೆಕ್‌’ ನೀಡಿದ ನಂತರ ಪಂದ್ಯವು ‘ನಡೆಗಳ ಪುನರಾವರ್ತನೆ’ (ರಿಪಿಟೇಶನ್ ಆಫ್‌ ಮೂವ್ಸ್‌) ಆಧಾರದಲ್ಲಿ ಡ್ರಾ ಆಯಿತು. ಚೆಸ್‌ ನಿಯಮದಂತೆ ಒಂದೇ ರೀತಿಯ ನಡೆ ಮೂರು ಸಲ ಪುನರಾವರ್ತನೆ ಆದಲ್ಲಿ ಅದನ್ನು ಡ್ರಾ ಎಂದು ಪರಿಗಣಿಸಲಾಗುತ್ತದೆ.

34 ವರ್ಷ ವಯಸ್ಸಿನ ಕಾರ್ಲ್‌ಸನ್‌ ಸುಲಭವಾಗಿ ಗೆಲ್ಲಬಹುದು ಎಂದು ಚೆಸ್‌.ಕಾಂ ಒಂದು ಹಂತದಲ್ಲಿ ಭವಿಷ್ಯ ನುಡಿದಿತ್ತು.

ADVERTISEMENT

ವಿಶ್ವ ಚಾಂಪಿಯನ್ ಆಟಗಾರನೊಬ್ಬ ಆನ್‌ಲೈನ್‌ನಲ್ಲಿ ಫ್ರೀಸ್ಟೈಲ್ ಪಂದ್ಯ ಆಡಿದ ಮೊದಲ ದೃಷ್ಟಾಂತ ಇದು.

ಫ್ರೀಸ್ಟೈಲ್‌ ಚೆಸ್‌ನಲ್ಲಿ ಕೊನೆಯ ಸಾಲಿನಲ್ಲಿರುವ ಪಡೆಗಳು ಸಾಂಪ್ರದಾಯಿಕ ಸಂಯೋಜನೆಯಲ್ಲಿ (ಮಾಮೂಲಿ ಚೆಸ್‌ ಆಟದ) ಇರುವುದಿಲ್ಲ. ಅಂದರೆ ಬಿಷಪ್‌, ನೈಟ್‌, ರೂಕ್‌, ಕ್ವೀನ್‌, ಕಿಂಗ್ ಸ್ಥಾನಗಳು ಪಲ್ಲಟವಾಗಿರುತ್ತವೆ. ರೂಕ್‌ (ಆನೆ) ಸ್ಥಾನದಲ್ಲಿ ನೈಟ್‌ (ಕುದುರೆ), ಕ್ವೀನ್ (ಮಂತ್ರಿ) ಸ್ಥಾನದಲ್ಲಿ ಬಿಷಪ್‌ (ರಥ) ಇರುತ್ತದೆ.

ಅದರೆ ಉಭಯ ಆಟಗಾರರ ಎದುರು ಕಾಲಾಳುಗಳ ಸಾಲು ಯಥಾಪ್ರಕಾರ ಇರುತ್ತದೆ. ಹೀಗಾಗಿ ಫ್ರೀಸ್ಟೈಲ್‌ನಲ್ಲಿ ಆಟಗಾರಿಗೆ ಸೈದ್ಧಾಂತಿಕ ಆಟದ ಬದಲು ಸೃಜನಶೀಲತೆಗೆ ಅವಕಾಶವಿದೆ. ಕಾರ್ಲ್‌ಸನ್‌ ಈ ರೀತಿಯ ಫ್ರೀಸ್ಟೈಲ್ ಆಟದ ಪ್ರಬಲ ಪ್ರತಿಪಾದಕರಾಗಿದ್ದಾರೆ.

ವಿಶ್ವ ತಂಡವು, ಮತದಾನದ ನೆರವು ಪಡೆದು ಉತ್ತಮ ಎನಿಸುವ ನಡೆಗಳನ್ನು ಇರಿಸುತಿತ್ತು. ಒಂದು ನಡೆಗೆ 24 ಗಂಟೆಗಳ ಅವಕಾಶವಿತ್ತು. ಕಾರ್ಲ್‌ಸನ್‌ ಬಿಳಿ ಕಾಯಿಗಳಲ್ಲಿ ಆಡಿದ್ದರು.

ಈ ಹಿಂದೆ 1999ರಲ್ಲಿ ರಷ್ಯಾದ ಗ್ಯಾರಿ ಕ್ಯಾಸ್ಪರೋವ್‌ ಅವರು ಮೈಕ್ರೊಸಾಫ್ಟ್‌ ನೆಟ್‌ವರ್ಕ್‌ನಲ್ಲಿ 50,000ಕ್ಕೂ ಹೆಚ್ಚು ಮಂದಿ ಜೊತೆ ಆಡಿದ್ದರು. ನಾಲ್ಕು ತಿಂಗಳ ನಂತರ ಜಯಿಸಿದ್ದರು.

2024ರಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ವಿಶ್ವನಾಥನ್ ಆನಂದ್ ಅವರು ‘ದಿ ವರ್ಲ್ಡ್‌’ ತಂಡದ ಜೊತೆ ಆಡಿದ್ದರು. ಚೆಸ್‌.ಕಾಂನಲ್ಲಿ ನಡೆದ ಈ ಪಂದ್ಯದಲ್ಲಿ 70,000 ಆಟಗಾರರು ಆಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.