ADVERTISEMENT

ಹೃದಯದ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಪಾರ್ಶ್ವವಾಯುವಿಗೆ ತುತ್ತಾದ ಕ್ರಿಸ್ ಕೇನ್ಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಆಗಸ್ಟ್ 2021, 11:35 IST
Last Updated 27 ಆಗಸ್ಟ್ 2021, 11:35 IST
ಮಾಜಿ ಕ್ರಿಕೆಟಿಗ ಕ್ರಿಸ್ ಕೇನ್ಸ್
ಮಾಜಿ ಕ್ರಿಕೆಟಿಗ ಕ್ರಿಸ್ ಕೇನ್ಸ್    

ಹೃದಯದ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಮಾಜಿ ಕ್ರಿಕೆಟಿಗ ಕ್ರಿಸ್ ಕೇನ್ಸ್ ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ ಎಂದು ಅವರ ಕುಟುಂಬ ಶುಕ್ರವಾರ ಹೇಳಿದೆ.

'ಹೃದಯದ ಶಸ್ತ್ರಚಿಕಿತ್ಸೆ ಸಮಯದಲ್ಲಿ ಕ್ರಿಸ್ ಅವರ ಬೆನ್ನುಮೂಳೆಗೆ ಪಾರ್ಶ್ವವಾಯು ತಗುಲಿತು. ಇದರಿಂದ ಅವರ ಕಾಲುಗಳು ನಿಷ್ಕ್ರಿಯಗೊಂಡಿವೆ. ಚೇತರಿಸಿಕೊಳ್ಳಲು ಅವರಿಗೆ ದೀರ್ಘ ಸಮಯಬೇಕು. ಅದಕ್ಕೆ ಅವರು ಆಸ್ಟ್ರೇಲಿಯಾದಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ' ಎಂದು ಕೇನ್ಸ್‌ ಕುಟುಂಬ ಮಾಹಿತಿ ನೀಡಿದೆ.

ನ್ಯೂಜಿಲೆಂಡ್ ಕ್ರಿಕೆಟ್‌ನಲ್ಲಿ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಕ್ರಿಸ್ ಕೂಡ ಒಬ್ಬರು. 1989 ರಿಂದ 2006ರ ಅವಧಿಯಲ್ಲಿ ಅವರು 62 ಟೆಸ್ಟ್‌, 215 ಏಕದಿನ ಮತ್ತು ಎರಡು ಟಿ20 ಪಂದ್ಯಗಳನ್ನು ಆಡಿದ್ದಾರೆ.

ADVERTISEMENT

2008ರಲ್ಲಿ ಇಂಡಿಯನ್ ಕ್ರಿಕೆಟ್‌ ಲೀಗ್ (ಐಸಿಎಲ್) ನಲ್ಲಿ ಆಡಿದ್ದ ಅವರು ಮ್ಯಾಚ್ ಫಿಕ್ಸಿಂಗ್ ಆರೋಪವನ್ನು ಎದುರಿಸಿದ್ದರು. ತಮ್ಮನ್ನು ನಿರಪರಾಧಿ ಎಂದು ಸಾಬೀತು ಮಾಡಲು ಅವರು ಕಾನೂನು ಹೋರಾಟ ನಡೆಸಿದ್ದರು. 2012ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಂಸ್ಥಾಪಕ ಲಲಿತ್ ಮೋದಿ ವಿರುದ್ಧ ಲಂಡನ್‌ನಲ್ಲಿ ಪ್ರಕರಣ ದಾಖಲಿಸಿದ್ದರು.

2015ರಲ್ಲಿ ಕೇನ್ಸ್‌ ವಿರುದ್ಧ ಸಹಆಟಗಾರರಾದ ಲೂ ವಿನ್ಸೆಂಟ್ ಮತ್ತು ಬ್ರೆಂಡನ್ ಮೆಕಲಮ್ ಅವರೂ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಈ ಕುರಿತು ಲಂಡನ್ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆದಿತ್ತು. ಕಾನೂನು ಹೋರಾಟಕ್ಕಾಗಿ ತಮ್ಮಲ್ಲಿದ್ದ ಹಣವನ್ನು ಖರ್ಚು ಮಾಡಿದ್ದ ಕ್ರಿಸ್, ತೀವ್ರ ಆರ್ಥಿಕ ಸಂಕಷ್ಟ ಅನುಭವಿಸಿದ್ದರು.

ಅದರಿಂದಾಗಿ ಅವರು ಆಕ್ಲೆಂಡ್ ಕೌನ್ಸಿಲ್‌ನಲ್ಲಿ ಟ್ರಕ್ ಡ್ರೈವರ್ ಆಗಿದ್ದರು. ಬಸ್‌ ಶೆಲ್ಟರ್‌ಗಳನ್ನು ಸ್ವಚ್ಛಗೊಳಿಸುವ ಕೆಲಸ ಕೂಡ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.