ADVERTISEMENT

ಕ್ರಿಕೆಟ್‌ ಕೋಚ್‌ ನೇಮಕಕ್ಕೆ ದಾರಿ ಸುಗಮ

ಹಿತಾಸಕ್ತಿ ಸಂಘರ್ಷದಿಂದ ಸಿಎಸಿ ಮುಕ್ತ

ಪಿಟಿಐ
Published 5 ಆಗಸ್ಟ್ 2019, 18:52 IST
Last Updated 5 ಆಗಸ್ಟ್ 2019, 18:52 IST
   

ನವದೆಹಲಿ: ಭಾರತದ ಕ್ರಿಕೆಟ್‌ ವ್ಯವಹಾರ ನೋಡಿಕೊಳ್ಳುತ್ತಿರುವ ಆಡಳಿತಾಧಿಕಾರಿಗಳ ಸಮಿತಿ (ಸಿಒಎ), ಕಪಿಲ್‌ ದೇವ್‌ ನೇತೃತ್ವದ ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ)ಯನ್ನು ಹಿತಾಸಕ್ತಿ ಸಂಘರ್ಷದ ಅಪವಾದದಿಂದ ಮುಕ್ತಗೊಳಿಸಿದೆ. ಹೀಗಾಗಿ ಸಲಹಾ ಸಮಿತಿಗೆ, ಭಾರತ ತಂಡದ ಮುಂದಿನ ಕೋಚ್‌ ಆಯ್ಕೆ ಮಾಡಲು ಹಾದಿ ಸುಗಮವಾಗಿದೆ.

ಈ ತಿಂಗಳ ಮಧ್ಯದಲ್ಲಿ ಕೋಚ್‌ ಆಯ್ಕೆ ಆಗಬೇಕಾಗಿದೆ. ಸಲಹಾ ಸಮಿತಿಯಲ್ಲಿ, ಮಾಜಿ ಆಲ್‌ರೌಂಡರ್ ಕಪಿಲ್‌ ದೇವ್ ಜೊತೆ ಮಾಜಿ ಓಪನರ್‌ ಅನ್ಷುಮನ್‌ ಗಾಯಕ್‌ವಾಡ್‌ ಮತ್ತು ಮಹಿಳಾ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಅವರಿದ್ದಾರೆ.

ಸಿಎಸಿ ಮುಂದಿನ ಚೀಫ್‌ ಕೋಚ್‌ ಆಯ್ಕೆ ಮಾಡುವುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಒಎ ಮುಖ್ಯಸ್ಥ ವಿನೋದ್‌ ರಾಯ್‌, ‘ನಾವು ಮೂವರ ಘೋಷಣಾ ಪತ್ರಗಳನ್ನು ಪರಿಶೀಲಿಸಿದ್ದೇವೆ. ಎಲ್ಲವೂ ಸರಿಯಾಗಿದೆ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

ಆದರೆ ಸಿಒಎ ಸದಸ್ಯರಲ್ಲಿ ಒಬ್ಬರಾದ ಡಯಾನಾ ಎಡುಲ್ಜಿ ಮಾತ್ರ ಅಪಸ್ವರ ಎತ್ತಿದರು. ಹೀಗಾಗಿ ಸಿಎಸಿ ಪರ 2–1ರಲ್ಲಿ ತೀರ್ಪು ಬಂತು. ಎಡುಲ್ಜಿ ಮೊದಲಿನಿಂದಲೂ ರೈ ಮತ್ತು ಇನ್ನೊಬ್ಬ ಸದಸ್ಯ ರವಿ ತೋಡ್ಗೆ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಸಿಒಎಗೆ ಅಡ್‌ಹಾಕ್‌ ಸಮಿತಿ ನೇಮಕ ಮಾಡುವ ಅಧಿಕಾರವಿಲ್ಲ. ಜೊತೆಗೆ ಹಿತಾಸಕ್ತಿ ಸಂಘರ್ಷದಿಂದ ಮುಕ್ತ ಮಾಡುವ ಅಧಿಕಾರವೂ ಇಲ್ಲ ಎಂದು ಎಡುಲ್ಜಿ ವಾದಿಸಿದರು.

‘ಹಿತಾಸಕ್ತಿ ಸಂಘರ್ಷ ವಿಷಯ ನೀತಿಸಂಹಿತೆ ಅಧಿಕಾರಿ ಡಿ.ಕೆ.ಜೈನ್‌ ಅವರಿಂದ ಇತ್ಯರ್ಥವಾಗಬೇಕು ಎಂದು ನಾನು ಹೇಳಿದ್ದೆ. ಸಂವಿಧಾನದಲ್ಲಿ ಅಡ್‌ಹಾಕ್‌ ಸಮಿತಿಗೆ ಆಸ್ಪದವಿಲ್ಲ. ಹೀಗಾಗಿ ನಾನು ಅಪಸ್ವರ ಎತ್ತಿದ್ದೆ’ ಎಂದರು ಎಡುಲ್ಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.