ADVERTISEMENT

ಕೋಚ್‌ ಆಗಿ ರಾಮನ್‌ ನೇಮಕ: ಪರಿಶೀಲನೆಗೆ ಸಿಒಎ ಸೂಚನೆ

ಸಾಕಷ್ಟು ಕಾದ ನಂತರ ನಿರ್ಧಾರ

ಪಿಟಿಐ
Published 24 ಜುಲೈ 2019, 14:36 IST
Last Updated 24 ಜುಲೈ 2019, 14:36 IST

ನವದೆಹಲಿ: ‌ಡಬ್ಲ್ಯು.ವಿ.ರಾಮನ್‌ ಅವರನ್ನು ಭಾರತ ಮಹಿಳಾ ತಂಡದ ಮುಖ್ಯ ಕೋಚ್‌ ಆಗಿ ನೇಮಕ ಮಾಡಿದ್ದನ್ನು ಪರಿಶೀಲಿಸುವಂತೆ, ದೇಶದ ಕ್ರಿಕೆಟ್‌ ವ್ಯವಹಾರ ನೋಡಿಕೊಳ್ಳುತ್ತಿರುವ ಆಡಳಿತಾಧಿಕಾರಿಗಳ ಸಮಿತಿ (ಸಿಒಎ), ಬಿಸಿಸಿಐ ಒಂಬುಡ್ಸ್‌ಮನ್‌ ಹಾಗೂ ಸಂಹಿತೆ ಅಧಿಕಾರಿ ಡಿ.ಕೆ. ಜೈನ್‌ ಅವರಿಗೆ ಸೂಚಿಸಿದೆ.

ಸಾಕಷ್ಟು ಕಾಲ ತೆಗೆದುಕೊಂಡ ನಂತರ ಸಿಒಎ ಈ ನಿರ್ಧಾರಕ್ಕೆ ಬಂದಿದೆ. ರಾಮನ್‌ ನೇಮಕ ಬಗ್ಗೆ ತಾತ್ವಿಕವಾಗಿ ಪುನರ್‌ಪರಿಶೀಲನೆಗೆ ಸಿಒಎ ತೀರ್ಮಾನಿಸಿದ್ದರೂ, ಕೆಲವು ದಿನಗಳ ಹಿಂದೆ ಈ ಬಗ್ಗೆ ಸುಪ್ರೀಂ ಕೋರ್ಟ್‌ ವಿಶ್ರಾಂತ ನ್ಯಾಯಮೂರ್ತಿಯೂ ಆಗಿರುವ ಜೈನ್‌ ಅವರಿಗೆ ಪತ್ರ ಬರೆದಿದೆ.

ಕಪಿಲ್‌ ದೇವ್‌, ಅಂಶುಮಾನ್‌ ಗಾಯಕವಾಡ್‌ ಮತ್ತು ಶಾಂತಾ ರಂಗಸ್ವಾಮಿ ಅವರನ್ನೊಳಗೊಂಡ ಅಡ್‌ಹಾಕ್‌ ಸಮಿತಿ ಕಳೆದ ವರ್ಷದ ಕೊನೆಯಲ್ಲಿ ರಾಮನ್‌ ಅವರನ್ನು ಕೋಚ್‌ ಆಗಿ ನೇಮಕ ಮಾಡಿತ್ತು. ಈ ನೇಮಕ ಪ್ರಕ್ರಿಯೆ ಬಗ್ಗೆ ಸಿಒಎದ ಇಬ್ಬರು ಸದಸ್ಯರಾದ ವಿನೋದ್‌ ರೈ ಮತ್ತು ಡಯಾನಾ ಎಡುಲ್ಜಿ ನಡುವೆ ತೀವ್ರ ಭಿನ್ನಾಭಿಪ್ರಾಯ ಮೂಡಿತ್ತು. ನಂತರ ಈ ವರ್ಷ ಲೆ.ಜ. ರವಿ ತೊಡಗೆ ಅವರನ್ನು ಮೂರನೇ ಸದಸ್ಯರಾಗಿ ನೇಮಕ ಮಾಡಲಾಗಿತ್ತು.

ADVERTISEMENT

ಎಡುಲ್ಜಿ, ಕೋಚ್‌ ನೇಮಕ ಪ್ರಕ್ರಿಯೆ ‘ಸೋಗಿನದ್ದು ಮತ್ತು ಅಸಾಂವಿಧಾನಿಕ’ ಎಂದು ಟೀಕಿಸಿದ್ದರಲ್ಲದೇ, ಸಚಿನ್‌ ತೆಂಡೂಲ್ಕರ್‌, ವಿ.ವಿ.ಎಸ್‌.ಲಕ್ಷ್ಮಣ್‌ ಮತ್ತು ಸೌರವ್‌ ಗಂಗೂಲಿ ಅವರನ್ನೊಳಗೊಂಡ ಕ್ರಿಕೆಟ್‌ ಸಲಹಾ ಸಮಿತಿಗೆ (ಸಿಎಸಿ) ಮಾತ್ರ ಕೋಚ್‌ ನೇಮಕ ಮಾಡುವ ಅಧಿಕಾರವಿದೆ ಎಂದಿದ್ದರು.

ಸಿಎಸಿ ಈಗ ನಿಷ್ಕ್ರ್ರಿಯವಾಗಿರುವ ಕಾರಣ ಅಡ್‌ಹಾಕ್‌ ಸಮಿತಿಗೇ ಪುರುಷರ ತಂಡದ ಕೋಚ್‌ ಆಯ್ಕೆ ಜವಾಬ್ದಾರಿ ವಹಿಸಲಾಗಿದ್ದು, ಅರ್ಜಿ ಆಹ್ವಾನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.