ನವದೆಹಲಿ (ಪಿಟಿಐ): ಅನುಭವಿ ವೇಗಿ ಮಿಚೆಲ್ ಸ್ಟಾರ್ಕ್ ಅವರ ಅಮೋಘ ಬೌಲಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸೂಪರ್ ಓವರ್‌ವರೆಗೆ ಬೆಳೆದ ಐಪಿಎಲ್‌ನ ರೋಚಕ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿ ಗೆಲುವಿನ ಹಳಿಗೆ ಮರಳಿತು.
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 189 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ರಾಯಲ್ಸ್ ತಂಡವು ಒಂದು ಹಂತದಲ್ಲಿ 19 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 180 ರನ್ ಗಳಿಸಿ ಗೆಲುವಿನ ಹಾದಿಯಲ್ಲಿತ್ತು. ಆದರೆ, ಕೊನೆಯ ಓವರ್‌ನಲ್ಲಿ ಕರಾರುವಾಕ್ ಯಾರ್ಕರ್‌ಗಳ ಮೂಲಕ ಸ್ಟಾರ್ಕ್ ಅವರು ಹೆಟ್ಮೆಯರ್- ಧ್ರುವ್ ಜುರೇಲ್ ಜೋಡಿಗೆ ಕೇವಲ ಎಂಟು ರನ್ ಅಷ್ಟೇ ಕೊಟ್ಟರು. ಕೊನೆಯ ಎಸೆತದಲ್ಲಿ ಗೆಲುವಿಗೆ ಬೇಕಾಗಿದ್ದ ಎರಡನೇ ರನ್ನಿಗೆ ಓಡಿ ಜುರೆಲ್ ರನ್ಔಟ್ ಆಗಿ ಪಂದ್ಯ ಸಮಬಲಗೊಂಡಿತು.
ಸೂಪರ್ ಓವರ್‌ನಲ್ಲಿ ಮತ್ತೆ ದಾಳಿಗಿಳಿದ ಸ್ಟಾರ್ಕ್ ಮತ್ತೆ ಯಾರ್ಕರ್‌ಗಳ ಮೂಲಕ ಬರೀ 11 ರನ್‌ಗೆ ರಾಯಲ್ಸ್ ತಂಡವನ್ನು ಕಟ್ಟಿಹಾಕಿದರು. ಜೊತೆಗೆ ಎರಡು ರನೌಟ್‌ಗಳು ಆದವು. ಇದಕ್ಕೆ ಉತ್ತರವಾಗಿ ಡೆಲ್ಲಿ ತಂಡದ ಕೆ.ಎಲ್. ರಾಹುಲ್ ಮತ್ತು ಟ್ರಿಸ್ಟನ್ ಸ್ಟಬ್ಸ್ ಅವರು ಸಂದೀಪ್ ಶರ್ಮಾ ಮಾಡಿದ ಸೂಪರ್ ಓವರಿನ ನಾಲ್ಕೇ ಎಸೆತಗಳಲ್ಲಿ 13 ರನ್ ಗಳಿಸಿದರು. ನಾಲ್ಕನೇ ಎಸೆತವನ್ನು ಸ್ಟಬ್ಸ್ ಅವರು ಮಿಡ್‌ವಿಕೆಟ್ ಮೇಲೆ ಸಿಕ್ಸರ್ ಎತ್ತಿ ತವರಿನ ಪ್ರೇಕ್ಷಕರನ್ನು ಮುದಗೊಳಿಸಿದರು.
ಈ ಗೆಲುವಿನೊಂದಿಗೆ ಡೆಲ್ಲಿ ತಂಡವು ಮತ್ತೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿತು. ರಾಜಸ್ಥಾನ ತಂಡಕ್ಕೆ ಇದು ಏಳು ಪಂದ್ಯಗಳಲ್ಲಿ ಐದನೇ ಸೋಲಾಗಿದೆ.
ಪಂದ್ಯದ ಬಳಿಕ ಪ್ರತಿಕ್ರಿಯಿಸಿದ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರು ಮಿಚೆಲ್ ಸ್ಟಾರ್ಕ್ ಅವರ ಬೌಲಿಂಗ್ ಅನ್ನು ಪ್ರಶಂಸಿಸಿ, 'ಅವರು ಪಂದ್ಯವನ್ನು ನಮ್ಮ ಕೈಯಿಂದ ಕಿತ್ತುಕೊಂಡರು’ ಎಂದರು.
ಸ್ಟಾರ್ಕ್ 18ನೇ ಓವರಿನಲ್ಲಿ ನಿತೀಶ್ ರಾಣಾ ಅವರನ್ನು ಯಾರ್ಕರ್ ಮೂಲಕ ಎಲ್‌ಬಿ ಬಲೆಗೆ ಕೆಡವಿದ್ದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅಭಿಷೇಕ್ ಪೊರೆಲ್ (49;37ಎ, 4x5, 6x1) ಮತ್ತು ಕೆ.ಎಲ್. ರಾಹುಲ್ (38;32ಎ, 4x2, 6x2) ಅವರ ಉಪಯುಕ್ತ ಜೊತೆಯಾಟದ ಬಲದಿಂದ 5 ವಿಕೆಟ್‌ಗಳಿಗೆ 188 ರನ್ ಗಳಿಸಿತು.
ರಾಹುಲ್ ಮತ್ತು ಅಭಿಷೇಕ್ 3ನೇ ವಿಕೆಟ್ ಜೊತೆಯಾಟದಲ್ಲಿ 63 ರನ್ ಸೇರಿಸಿದರು. ನಂತರದಲ್ಲಿ ಟ್ರೆಸ್ಟನ್ ಸ್ಟಬ್ಸ್ (ಔಟಾಗದೇ 34; 18ಎ, 4X2, 6X2) ಮತ್ತು ಅಕ್ಷರ್ ಪಟೇಲ್ (34; 14ಎ, 4X4, 6X2) ಕೂಡ ತಂಡದ ಮೊತ್ತ ಬೆಳೆಯಲು ಕಾರಣರಾದರು. ಜೋಫ್ರಾ ಆರ್ಚರ್ ಎರಡು ವಿಕೆಟ್ ಕಬಳಿಸಿದ್ದರು.
ಗುರಿ ಬೆನ್ನಟ್ಟಿದ ರಾಯಲ್ಸ್ ತಂಡಕ್ಕೆ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (51;37, 4x3, 6x4) ಮತ್ತು ನಾಯಕ ಸಂಜು ಸ್ಯಾಮ್ಸನ್ (31) ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ತಂಡದ ಮೊತ್ತ 61 ಆಗಿದ್ದಾಗ ಸಂಜು ಅವರು ಗಾಯಗೊಂಡು ನಿವೃತ್ತರಾದರು. ನಂತರ ಬಂದ ರಿಯಾನ್ ಪರಾಗ್ (8) ನಿರಾಸೆ ಮೂಡಿಸಿದರು.
ಆದರೆ, ನಿತೀಶ್ ರಾಣಾ (51;28ಎ, 4x6, 6x2) ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾದರು. ಅವರ ನಿರ್ಗಮನದ ನಂತರ ಡೆಲ್ಲಿ ಬೌಲರ್‌ಗಳು ಹಿಡಿತ ಸಾಧಿಸಿದರು. ಧ್ರುವ್ ಜುರೇಲ್ (ಔಟಾಗದೇ 26;17ಎ) ಮತ್ತು ಶಿಮ್ರಾನ್ ಹೆಟ್ಮೆಯರ್ (ಔಟಾಗದೇ 15;9ಎ) ಅವರು ಮುರಿಯದ ಮೂರನೇ ವಿಕೆಟ್‌ಗೆ 27 (14ಎ) ರನ್ ಸೇರಿದರು.
ಸಂಕ್ಷಿಪ್ತ ಸ್ಕೋರು:
ಡೆಲ್ಲಿ ಕ್ಯಾಪಿಟಲ್ಸ್: 20 ಓವರ್‌ಗಳಲ್ಲಿ 5ಕ್ಕೆ188 (ಅಭಿಷೇಕ್ ಪೊರೆಲ್ 49, ಕೆ.ಎಲ್. ರಾಹುಲ್ 38, ಟ್ರಿಸ್ಟನ್ ಸ್ಟಬ್ಸ್ ಔಟಾಗದೇ 34, ಅಕ್ಷರ್ ಪಟೇಲ್ 34, ಜೋಫ್ರಾ ಆರ್ಚರ್ 32ಕ್ಕೆ2).
ರಾಜಸ್ಥಾನ ರಾಯಲ್ಸ್: 20 ಓವರ್‌ಗಳಲ್ಲಿ 4ಕ್ಕೆ 188 (ಯಶಸ್ವಿ ಜೈಸ್ವಾಲ್ (51, ಸಂಜು ಸ್ಯಾಮ್ಸನ್ 31 (ಗಾಯಗೊಂಡು ನಿವೃತ್ತಿ), ನಿತೀಶ್ ರಾಣಾ 51, ಧ್ರುವ್ ಜುರೇಲ್ ಔಟಾಗದೇ 26, ಶಿಮ್ರಾನ್ ಹೆಟ್ಮೆಯರ್ ಔಟಾಗದೇ 15; ಮಿಚೆಲ್ ಸ್ಟಾರ್ಕ್ 36ಕ್ಕೆ 1, ಅಕ್ಷರ್ ಪಟೇಲ್ 23ಕ್ಕೆ 1). ಫಲಿತಾಂಶ: ಸೂಪರ್ ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಜಯ. ಪಂದ್ಯದ ಆಟಗಾರ: ಮಿಚೆಲ್ ಸ್ಟಾರ್ಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.