ADVERTISEMENT

ವಿಲಿಯಮ್ಸನ್ ಆಡದಿದ್ದರೆ ರೈಸರ್ಸ್ ಬ್ಯಾಟಿಂಗ್ ವಿಭಾಗ ದುರ್ಬಲ: ಆಕಾಶ್ ಚೋಪ್ರಾ

ಏಜೆನ್ಸೀಸ್
Published 27 ಸೆಪ್ಟೆಂಬರ್ 2020, 11:02 IST
Last Updated 27 ಸೆಪ್ಟೆಂಬರ್ 2020, 11:02 IST
ಕೇನ್‌ ವಿಲಿಯಮ್ಸನ್‌
ಕೇನ್‌ ವಿಲಿಯಮ್ಸನ್‌   

ನ್ಯೂಜಿಲೆಂಡ್‌ ಕ್ರಿಕೆಟ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡದಿದ್ದರೆ ಸನ್‌ರೈಸರ್ಸ್‌ ಹೈದರಾಬಾದ್‌ (ಎಸ್‌ಆರ್‌ಎಚ್‌) ತಂಡದ ಬ್ಯಾಟಿಂಗ್‌ ವಿಭಾಗ ದುರ್ಬಲವಾಗುತ್ತದೆ ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಮತ್ತು ವೀಕ್ಷಕ ವಿವರಣೆಗಾರ ಆಕಾಶ್‌ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ಸನ್‌ರೈಸರ್ಸ್‌ ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ಎರಡು ಪಂದ್ಯಗಳನ್ನಾಡಿದ್ದು, ಎರಡರಲ್ಲೂ ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ನೀಡಿದ್ದ 164 ರನ್‌ ಗುರಿ ಬೆನ್ನತ್ತುವಲ್ಲಿ ವಿಫಲವಾಗಿದ್ದ ರೈಸರ್ಸ್‌, ಹತ್ತು ರನ್‌ಗಳಿಂದ ಸೋಲು ಕಂಡಿತ್ತು. ಎರಡನೇ ಪಂದ್ಯದಲ್ಲಿ ಕೋಲ್ಕತ್ತ ನೈಟ್‌ರೈಡರ್ಸ್ (ಕೆಕೆಆರ್‌)‌ ಎದುರು ಮೊದಲು ಬ್ಯಾಟ್‌ ಮಾಡಿ ಕೇವಲ 142 ರನ್‌ ಗಳಿಸಿತ್ತು. ಈ ಗುರಿಯನ್ನು ಇನ್ನೂ ಎರಡು ಓವರ್‌ ಬಾಕಿ ಇರುವಂತೆಯೇ ಮುಟ್ಟಿದ್ದಕೆಕೆಆರ್‌ ಜಯದ ನಗೆ ಬೀರಿತ್ತು. ಈ ಪಂದ್ಯಗಳಲ್ಲಿ ವಿಲಿಯಮ್ಸನ್‌ ಆಡಿರಲಿಲ್ಲ.

ಕೆಕೆಆರ್‌–ಎಸ್‌ಆರ್‌ಎಚ್‌ ಪಂದ್ಯದ ನಡುವೆ ನಡೆಸಿದ ಸಂದರ್ಶನದಲ್ಲಿ ವಿಲಿಯಮ್ಸನ್ ಮಾತನಾಡಿದ್ದರು. ಈ ವೇಳೆ ಅವರು,‌ ‘ಈ ಮೊದಲು ಸಣ್ಣ ಗಾಯದ ಸಮಸ್ಯೆಯಾಗಿತ್ತು. ಇದೀಗ ಫಿಟ್‌ ಆಗಿದ್ದೇನೆ’ ಎಂದು ಹೇಳಿದ್ದರು. ಜೊತೆಗೆ ಮುಂದಿನ ಪಂದ್ಯಕ್ಕೆ ಲಭ್ಯರಿರುವುದಾಗಿಯೂ ತಿಳಿಸಿದ್ದರು. ಇದನ್ನು ಉಲ್ಲೇಖಿಸಿ ಚೋಪ್ರಾ ಮಾತನಾಡಿದ್ದಾರೆ.

ADVERTISEMENT

ಆರ್‌ಸಿಬಿ ವಿರುದ್ಧದ ಮೊದಲ ಪಂದ್ಯದ ವೇಳೆ ಆಸ್ಟ್ರೇಲಿಯಾ ಆಟಗಾರ ಮಿಚೇಲ್‌ ಮಾರ್ಷ್‌ ಗಾಯಗೊಂಡಿದ್ದರು. ಅವರ ಬದಲು ಅಫ್ಗಾನಿಸ್ತಾನದ ಮೊಹಮ್ಮದ್‌ ನಬಿಗೆ ಸ್ಥಾನ ನೀಡಲಾಗಿದೆ. ಉಳಿದಂತೆ ಜಾನಿ ಬೇರ್ಸ್ಟ್ರೋವ್‌, ಡೇವಿಡ್‌ ವಾರ್ನರ್‌ ಮತ್ತು ರಶೀದ್‌ ಖಾನ್‌ ವಿದೇಶಿ ಆಟಗಾರರಾಗಿ ಆಡುತ್ತಿದ್ದಾರೆ.

‘ಆ ತಂಡ ಮಿಚೇಲ್‌ ಮಾರ್ಷ್‌ ಅವರನ್ನು ಕಳೆದುಕೊಂಡಿದೆ. ಹಾಗಾಗಿ ನಬಿಗೆ ಅವಕಾಶ ನೀಡಲಾಗಿದೆ. ಪಂದ್ಯದ ವೇಳೆ ನಡೆದ ಸಂದರ್ಶನದಲ್ಲಿ ಮಾತನಾಡಿದ ವಿಲಿಯಮ್ಸನ್‌ ಯಾವುದೇ ಗಾಯದ ಸಮಸ್ಯೆಯನ್ನು ಹೇಳಿಕೊಂಡಿಲ್ಲ. ಹಾಗಾಗಿ ಅವರೂ ಫಿಟ್ ಆಗಿದ್ದಾರೆ. ಅವರು ಫಿಟ್‌ ಆಗಿ ಲಭ್ಯರಿರುವಾಗ ಅವರಿಗೆ ಅವಕಾಶ ನೀಡದಿರುವುದು ಏಕೆ? ಎಂದು ಯುಟ್ಯೂಬ್‌ ಕಾರ್ಯಕ್ರಮದಲ್ಲಿ ಪ್ರಶ್ನಿಸಿದ್ದಾರೆ.

‘ಅವರು (ಎಸ್‌ಆರ್‌ಎಚ್‌) ವಿಲಿಯಮ್ಸನ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಬೇಕು. ವಿಲಿಯಮ್ಸನ್‌ ಇಲ್ಲದೆ ಆ ತಂಡ ಬಲಿಷ್ಠವಾಗಿ ಕಾಣುವುದಿಲ್ಲ. ಅವರಿಲ್ಲದೆ ಬ್ಯಾಟಿಂಗ್‌ ವಿಭಾಗ ಸಮರ್ಥವೆನಿಸದು. ವಿಲಿಯಮ್ಸನ್‌ಗೆ ಸ್ಥಾನ ನೀಡಲು ಸಾಧ್ಯವಾಗದಿದ್ದರೆ, ನೀವು 180ರ ಬದಲು 140 ರನ್‌ ಗಳಿಸಲಷ್ಟೇ ಸಾಧ್ಯವಾಗುತ್ತದೆ’ ಎಂದಿದ್ದಾರೆ.

‘ಎಸ್‌ಆರ್‌ಎಚ್‌ ಬೌಲಿಂಗ್‌ ವಿಭಾದಲ್ಲಿಯೂ ಸಮಸ್ಯೆಗಳಿವೆ. ಭುವನೇಶ್ವರ್‌ ಕುಮಾರ್ ಒಬ್ಬರೇ ಅಲ್ಲ. ರಶೀದ್ ಖಾನ್‌ ಒಬ್ಬರೇ ಅಲ್ಲ. ಬೇರೆಯವರೂ ಅವರಿಗೆ ಸರಿಯಾಗಿ ಬೆಂಬಲ ನೀಡದಿದ್ದರೆ, ದುರ್ಬಲ ತಂಡವಾಗಿ ಮತ್ತು ಅಂಕಪಟ್ಟಿಯಲ್ಲಿ ಕೆಳಗಿನ ನಾಲ್ಕು ತಂಡಗಳಲ್ಲಿ ಒಂದಾಗಿ ಕಾಣುತ್ತದೆ’ ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.