ADVERTISEMENT

ಧೋನಿ ನೇಮಕ: ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆ

ಅಪೆಕ್ಸ್‌ ಕೌನ್ಸಿಲ್‌ಗೆ ದೂರು ನೀಡಿದ ಸಂಜೀವ್ ಗುಪ್ತಾ

ಪಿಟಿಐ
Published 9 ಸೆಪ್ಟೆಂಬರ್ 2021, 19:31 IST
Last Updated 9 ಸೆಪ್ಟೆಂಬರ್ 2021, 19:31 IST
ಮಹೇಂದ್ರಸಿಂಗ್ ಧೋನಿ
ಮಹೇಂದ್ರಸಿಂಗ್ ಧೋನಿ   

ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಟ್ವೆಂಟಿ–20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಮಾರ್ಗದರ್ಶಕರಾಗಿ ನೇಮಕವಾಗಿರುವ ಮಹೇಂದ್ರಸಿಂಗ್ ಧೋನಿ ವಿರುದ್ಧ ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆಯ ದೂರು ದಾಖಲಾಗಿದೆ.

ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿರುವ ಧೋನಿಯನ್ನು ಭಾರತ ತಂಡದ ಮೆಂಟರ್ ಆಗಿ ನೇಮಕ ಮಾಡಿರುವುದು ನಿಯಮಾವಳಿಯ ಉಲ್ಲಂಘನೆಯಾಗಿದೆ ಎಂದು ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ ಮಾಜಿ ಸದಸ್ಯ ಸಂಜೀವ್ ಗುಪ್ತಾ ಅವರು ಬಿಸಿಸಿಐ ಅಪೆಕ್ಸ್‌ ಕೌನ್ಸಿಲ್‌ಗೆ ದೂರು ನೀಡಿದ್ದಾರೆ.

‘ಗುಪ್ತಾ ಅವರು ದೂರು ಪತ್ರ ಬರೆದಿದ್ದಾರೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಸೇರಿದಂತೆ ಅಪೆಕ್ಸ್‌ ಕೌನ್ಸಿಲ್‌ಗೆ ಪತ್ರ ಹಾಕಿದ್ದಾರೆ. 38 (4) ನಿಯಮ ಉಲ್ಲಂಘನೆ ಆಗಿದೆ ಎಂದು ಅವರು ದೂರಿದ್ದಾರೆ. ಈ ನಿಯಮದ ಪ್ರಕಾರ ಒಬ್ಬ ವ್ಯಕ್ತಿಯು ಎರಡು ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವಂತಿಲ್ಲ. ಈ ಕುರಿತು ಅಪೆಕ್ಸ್‌ ಕೌನ್ಸಿಲ್ ಕಾನೂನು ತಜ್ಞರ ನೆರವು ಪಡೆಯಲಿದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ADVERTISEMENT

ಇದೇ 19ರಿಂದ ಐಪಿಎಲ್ ಪಂದ್ಯಗಳು ಯುಎಇಯಲ್ಲಿ ಆರಂಭವಾಗಲಿವೆ. ಅದರಲ್ಲಿ ಧೋನಿ ನಾಯಕತ್ವದ ಚೆನ್ನೈ ಆಡಲಿದೆ. ಅಕ್ಟೋಬರ್‌ನಲ್ಲಿ ವಿಶ್ವಕಪ್ ಟೂರ್ನಿ ನಡೆಯಲಿದೆ.

ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಧೋನಿ 90 ಟೆಸ್ಟ್, 350 ಏಕದಿನ ಮತ್ತು 98 ಅಂತರರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ. ಹೋದ ವರ್ಷ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.