ADVERTISEMENT

ಕೂಚ್‌ ಬಿಹಾರ್‌ ಟ್ರೋಫಿ: ಅಕ್ಷತ್‌ ದಾಳಿಗೆ ಉತ್ತರಾಖಂಡ ತತ್ತರ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 17:47 IST
Last Updated 18 ನವೆಂಬರ್ 2025, 17:47 IST
<div class="paragraphs"><p>ಕ್ರಿಕೆಟ್</p></div>

ಕ್ರಿಕೆಟ್

   

ಬೆಂಗಳೂರು: ಬಿಗುವಿನ ದಾಳಿ ನಡೆಸಿದ ಅಕ್ಷತ್‌ ಪ್ರಭಾಕರ್‌ (20ಕ್ಕೆ5), 19 ವರ್ಷದೊಳಗಿನವರ ಕೂಚ್‌ ಬಿಹಾರ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಉತ್ತರಾಖಂಡ ವಿರುದ್ಧದ ಪಂದ್ಯದಲ್ಲಿ ಕರ್ನಾಟಕದ ಗೆಲುವಿನ ಕನಸಿಗೆ ಬಲ ತುಂಬಿದರು. 

ಇಲ್ಲಿನ ಆಲೂರಿನ ಕೆಎಸ್‌ಸಿಎ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಉತ್ತರಾಖಂಡ 77.1 ಓವರ್‌ಗಳಲ್ಲಿ 191ರನ್‌ಗಳಿಗೆ ಆಲೌಟ್‌ ಆಯಿತು. ಆಯುಷ್‌ ದೇಸ್ವಾಲ್‌ ಬಳಗ ಮೊದಲ ಇನಿಂಗ್ಸ್‌ನಲ್ಲಿ 202ರನ್‌ಗಳನ್ನು ಕಲೆ ಹಾಕಿತ್ತು. 159 ರನ್‌ಗಳ ಗುರಿ ಬೆನ್ನಟ್ಟಿರುವ ಆತಿಥೇಯರು ಮಂಗಳವಾರದ ದಿನದಾಟದ ಅಂತ್ಯಕ್ಕೆ 7 ಓವರ್‌ಗಳಲ್ಲಿ 1 ವಿಕೆಟ್‌ಗೆ 44ರನ್‌ ಗಳಿಸಿದ್ದಾರೆ. ಇನ್ನೂ ಎರಡು ದಿನಗಳ ಆಟ ಬಾಕಿ ಇದ್ದು, ಗೆಲುವಿಗೆ ರಾಜ್ಯ ತಂಡ 115ರನ್‌ಗಳನ್ನು ದಾಖಲಿಸಬೇಕಿದೆ.

ADVERTISEMENT

ಮೂರನೇ ದಿನದಾಟದ 16ನೇ ಓವರ್‌ನ ಮೊದಲ ಎಸೆತದಲ್ಲಿ ಭವ್ಯ್‌ (30) ವಿಕೆಟ್‌ ಉರುಳಿಸಿದ ಅಕ್ಷತ್‌, ನಂತರವೂ ಮಾರಕ ದಾಳಿ ನಡೆಸಿದರು. 22ರನ್‌ಗಳ ಅಂತರದಲ್ಲಿ ಎದುರಾಳಿ ತಂಡದ ನಾಯಕ ಸೇರಿ ಒಟ್ಟು ಮೂವರು ಬ್ಯಾಟ್ಸ್‌ಮನ್‌ಗಳಿಗೆ ಪೆವಿಲಿಯನ್‌ ದಾರಿ ತೋರಿಸಿ ಸಂಭ್ರಮಿಸಿದರು. ಇತರ ಬೌಲರ್‌ಗಳೂ ಅವರಿಗೆ ಉತ್ತಮ ಬೆಂಬಲ ನೀಡಿದ್ದರಿಂದ ಆಯುಷ್‌ ಬಳಗವನ್ನು 200ರ ಗಡಿಯೊಳಗೆ ಕಟ್ಟಿಹಾಕಲು ಸಾಧ್ಯವಾಯಿತು. 

ಸಂಕ್ಷಿಪ್ತ ಸ್ಕೋರ್‌: ಉತ್ತರಾಖಂಡ; ಮೊದಲ ಇನಿಂಗ್ಸ್‌: 81.2 ಓವರ್‌ಗಳಲ್ಲಿ 202 ಮತ್ತು 77.1 ಓವರ್‌ಗಳಲ್ಲಿ 191 (ಭವ್ಯ್‌ 30, ರಕ್ಷಿತ್‌ ದಲಕೋಟಿ 88, ಆಯುಷ್‌ ದೇಸ್ವಾಲ್‌ 30, ಮಾನವ್‌ 12: ಈಶ ಪುತ್ತಿಗೆ 35ಕ್ಕೆ2, ವೈಭವ್‌ ಶರ್ಮಾ 55ಕ್ಕೆ1, ರತನ್ ಬಿ.ಆರ್‌. 37ಕ್ಕೆ1, ಅಕ್ಷತ್‌ ಪ್ರಭಾಕರ್‌ 20ಕ್ಕೆ5, ಮಣಿಕಂಠ ಶಿವಾನಂದ್‌ 2ಕ್ಕೆ1). 

ಕರ್ನಾಟಕ: ಪ್ರಥಮ ಇನಿಂಗ್ಸ್‌; 90 ಓವರ್‌ಗಳಲ್ಲಿ 235 ಮತ್ತು 7 ಓವರ್‌ಗಳಲ್ಲಿ 1 ವಿಕೆಟ್‌ಗೆ 44 (ನಿತೀಶ್‌ ಆರ್ಯ ಬ್ಯಾಟಿಂಗ್‌ 18, ಧ್ರುವ್‌ ಕೃಷ್ಣನ್‌ ಬ್ಯಾಟಿಂಗ್‌ 22; ಪ್ರಿಯಾಂಶು ಸಿಂಗ್‌ 21ಕ್ಕೆ1). 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.