ADVERTISEMENT

ಆಟಗಾರರನ್ನು ಚಾರ್ಟರ್ಡ್‌ ವಿಮಾನದಲ್ಲಿ ಕರೆತನ್ನಿ: ಬ್ರಾಡ್ ಹಾಗ್

ಟಿ20 ವಿಶ್ವಕಪ್ ನಿಲ್ಲಿಸುವುದು ಬೇಡ ಎಂದು ಸಲಹೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2020, 2:43 IST
Last Updated 16 ಏಪ್ರಿಲ್ 2020, 2:43 IST
‌ಬ್ರಾಡ್ ಹಾಗ್
‌ಬ್ರಾಡ್ ಹಾಗ್   

ಮೆಲ್ಬರ್ನ್: ಟ್ವೆಂಟಿ–20 ವಿಶ್ವಕಪ್ ಟೂರ್ನಿಯನ್ನು ನಿಲ್ಲಿಸಬೇಡಿ. ತಂಡಗಳನ್ನು ಚಾರ್ಟರ್‌ ವಿಮಾನಗಳಲ್ಲಿ ಕರೆತನ್ನಿ. ಅವರನ್ನು ಕೊರೊನಾ ವೈರಸ್‌ ಪರೀಕ್ಷೆಗೆ ಒಳಪಡಿಸಿ. ಟೂರ್ನಿ ನಡೆಸಬಹುದು ಎಂದು ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ಬ್ರಾಡ್ ಹಾಗ್ ಸಲಹೆ ನೀಡಿದ್ದಾರೆ.

ಅಕ್ಟೋಬರ್ 18 ರಿಂದ ನವೆಂಬರ್‌ 15ರವರೆಗೆ ವಿಶ್ವಕಪ್ ಟಿ20 ಕ್ರಿಕೆಟ್ ಟೂರ್ನಿಯನ್ನು ಆಸ್ಟ್ರೇಲಿಯಾದಲ್ಲಿ ಆಯೋಜಿಸಲಾಗುತ್ತಿದೆ. ಆದರೆ, ಕೊರೊನಾ ವೈರಸ್‌ ಸೋಂಕು ಬಹಳಷ್ಟು ರಾಷ್ಟ್ರಗಳಲ್ಲಿ ಹರಡಿದೆ. ಒಂದು ಲಕ್ಷಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಇದರಿಂದಾಗಿ ಅಕ್ಟೋಬರ್‌ವರೆಗೂ ಪರಿಸ್ಥಿತಿ ಸುಧಾರಣೆಯಾಗುವುದು ಅನಿಶ್ಚಿತವಾಗಿದೆ. ಆದ್ದರಿಂದ ಟೂರ್ನಿಯನ್ನು ರದ್ದು ಪಡಿಸುವ ಅಥವಾ ಪ್ರೇಕ್ಷಕರಿಲ್ಲದ ಕ್ರೀಡಾಂಗಣದಲ್ಲಿ ನಡೆಸುವ ಕುರಿತು ಐಸಿಸಿ ಚಿಂತನೆ ನಡೆಸುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಾಗ್, ‘ರದ್ದು ಪಡಿಸುವುದು ಅಥವಾ ವೇಳಾಪಟ್ಟಿ ಬದಲಿಸುವುದಕ್ಕೆ ನನ್ನ ವಿರೋಧವಿದೆ. ಆದರೆ, ಕೆಲವು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅದರ ಕುರಿತು ನನ್ನ ಸಹಮತವಿದೆ’ ಎಂದು 49 ವರ್ಷದ ಹಾಗ್ ಟ್ವೀಟ್ ಮಾಡಿದ್ದಾರೆ.

ADVERTISEMENT

‘ಟೂರ್ನಿಗಿಂತ ಮೂರು ವಾರಗಳ ಮೊದಲೇ ಆಟಗಾರರನ್ನು ತಮ್ಮ ದೇಶದಿಂದ ಪ್ರಯಾಣ ಬೆಳೆಸುವ ಮುನ್ನ ಕೋವಿಡ್ –19 ಪರೀಕ್ಷೆಗೆ ಒಳಪಡಿಸಬೇಕು. ಚಾರ್ಟರ್ಡ್‌ ವಿಮಾನಗಳನ್ನೇ ಬಳಸಬೇಕು. ಅದರಲ್ಲಿ ತಂಡಗಳ ಆಟಗಾರರು ಮತ್ತು ಸಿಬ್ಬಂದಿ ಪ್ರಯಾಣಿಸಬೇಕು. ಇಲ್ಲಿಗೆ ಬಂದ ಮೇಲೆ ಅವರಿಗೆ ಎರಡು ವಾರ ಕ್ವಾರಂಟೈನ್ ಮಾಡಬೇಕು. ನಂತರ ಮತ್ತೆ ಪರೀಕ್ಷೆ ಮಾಡಿ, ಅಭ್ಯಾಸ ಮಾಡಲು ಅನುವು ಮಾಡಿಕೊಡಬೇಕು’ ಎಂದು ಸಲಹೆ ನೀಡಿದ್ದಾರೆ.

‘ಕ್ರಿಕೆಟ್‌ನಲ್ಲಿ ಸಾಮಾಜಿಕ ಅಂತರವನ್ನು ಪಾಲಿಸುವುದು ಸುಲಭ. ಆಟಗಾರರು ಹೆಚ್ಚು ಒತ್ತು ತಮ್ಮ ನಡುವೆ ಬಹಳಷ್ಟು ಅಂತರದಲ್ಲಿಯೇ ಇರುತ್ತಾರೆ. ಸ್ಲಿಪ್ ಫೀಲ್ಡಿಂಗ್‌ನಲ್ಲಿ ಮಾತ್ರ ಸ್ವಲ್ಪ ಸಮಸ್ಯೆಯಾಗಬಹುದು. ಅಲ್ಲಿಯೂ ಫೀಲ್ಡರ್‌ಗಳ ನಡುವೆ ಎರಡು ಮೀಟರ್ ಅಂತರ ಕಾಪಾಡಿಕೊಳ್ಳುವಂತೆ ಸೂಚಿಸಬೇಕು’ ಎಂದು ಬ್ರಾಡ್ ಹೇಳಿದ್ದಾರೆ.

‘ಟೂರ್ನಿಯನ್ನು ಮುಂದೂಡುವುದು ಕೂಡ ಒಳ್ಳೆಯದಲ್ಲ. ಮುಂದಿನ ವರ್ಷದಾರಂಭದಲ್ಲಿ ಮಾಡಿದರೆ, ಅದೇ ವರ್ಷ ನವೆಂಬರ್‌ನಲ್ಲಿ ಭಾರತವು ಟಿ20 ವಿಶ್ವಕಪ್ ಟೂರ್ನಿ ಆಯೋಜಿಸುತ್ತಿದೆ. ಒಂದೇ ವರ್ಷದಲ್ಲಿ ಎರಡೂ ವಿಶ್ವಕಪ್ ಟೂರ್ನಿಗಳನ್ನು ನಡೆಸುವುದು ಸಮಂಜಸವಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.