ಮಿಚೆಲ್ ಸ್ಟಾರ್ಕ್
ಚಿತ್ರ ಕೃಪೆ: cricbuzz
ಅಡಿಲೇಡ್: ಆಸ್ಟ್ರೇಲಿಯಾ ತಂಡದವರು ಆ್ಯಷಸ್ ಸರಣಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾನುವಾರ ಇಂಗ್ಲೆಂಡ್ ತಂಡದ ಮೇಲೆ 82 ರನ್‌ಗಳ ಜಯ ಪಡೆದರು. ಎರಡು ಟೆಸ್ಟ್‌ಗಳು ಉಳಿದಿರುವಂತೆ ಆತಿಥೇಯರು 3–0 ಅಂತರದಿಂದ ಸರಣಿಯನ್ನು ತಮ್ಮ ಕೈವಶ ಮಾಡಿಕೊಂಡರು.
ಗೆಲುವಿಗೆ ವಿಶ್ವದಾಖಲೆಯ 435 ರನ್‌ಗಳ ಗುರಿ ಎದುರಿಸಿದ್ದ ಇಂಗ್ಲೆಂಡ್ ತಂಡ (ಶನಿವಾರ: 6 ವಿಕೆಟ್‌ಗೆ 207) ಅಂತಿಮ ದಿನ ಪ್ರತಿರೋಧ ತೋರಿತು. ಆದರೆ 352 ರನ್‌ಗಳಿಗೆ ಆಲೌಟ್ ಆಯಿತು. ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಮೂರು ವಿಕೆಟ್ ಪಡೆದರೆ, ಸ್ಕಾಟ್ ಬೋಲ್ಯಾಂಡ್ ಅವರು ಚಹ ವಿರಾಮಕ್ಕೆ ಮೊದಲು ಕೊನೆಯ ವಿಕೆಟ್ (ಜೋಶ್ ಟಂಗ್) ಗಳಿಸಿದರು.
‘ಹಲವು ಕಾರಣಗಳಿಂದ 3–0 ಸರಣಿ ಜಯ ತೃಪ್ತಿದಾಯಕ’ ಎಂದು ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಹೇಳಿದರು. ಬೆನ್ನು ನೋವಿನಿಂದ ಚೇತರಿಸಿ ಈ ಪಂದ್ಯಕ್ಕೆ ಪುನರಾಗಮನ ಮಾಡಿದ್ದ ಅವರು ಒಟ್ಟು ಆರು ವಿಕೆಟ್ ಗಳಿಸಿದರು. ಸರಣಿಗೆ ಮೊದಲು ಆಸ್ಟ್ರೇಲಿಯಾ ತಂಡದ ಅನುಭವಿ ಆಟಗಾರರ ವಯಸ್ಸಿನ ಬಗ್ಗೆ ಬಹಳಷ್ಟು ಚರ್ಚೆಗಳು ನಡೆದಿದ್ದವು.
ಪರ್ತ್ ಮತ್ತು ಬ್ರಿಸ್ಬೇನ್‌ನಲ್ಲಿ ನಡೆದ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ಎಂಟು ವಿಕೆಟ್‌ಗಳ ಸೋಲನುಭವಿಸಿತ್ತು. ಇಂಗ್ಲೆಂಡ್, ಕಾಂಗರೂ ನಾಡಿನಲ್ಲಿ ಆಡಿದ ಕೊನೆಯ 18 ಟೆಸ್ಟ್‌ಗಳಲ್ಲಿ ಒಂದರಲ್ಲೂ ಜಯಗಳಿಸಲು ಸಾಧ್ಯವಾಗಿಲ್ಲ. ತವರಿನಲ್ಲಿ ಸತತ ನಾಲ್ಕನೇ ಬಾರಿ ಆಸ್ಟ್ರೇಲಿಯಾ ಆ್ಯಷಸ್ ಸರಣಿ ಜಯಿಸಿದಂತಾಯಿತು.
ಅಡಿಲೇಡ್ ಓವಲ್‌ನಲ್ಲಿ 2013 ರಿಂದೀಚೆಗೆ ಆಡಿದ 13 ಟೆಸ್ಟ್ ಪಂದ್ಯಗಳಲ್ಲಿ 12ರಲ್ಲಿ ಆಸ್ಟ್ರೇಲಿಯಾ ಜಯಗಳಿಸಿದೆ. 2018ರಲ್ಲಿ ಭಾರತ ಎದುರು ಒಂದು ಪಂದ್ಯದಲ್ಲಿ ಸೋಲನುಭವಿಸಿತ್ತು.
ಮೊದಲ ಇನಿಂಗ್ಸ್‌ನಲ್ಲಿ ಶತಕ (106) ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಅರ್ಧ ಶತಕ (72) ಬಾರಿಸಿದ ಅಲೆಕ್ಸ್ ಕ್ಯಾರಿ ಪಂದ್ಯದ ಆಟಗಾರನಾದರು. ಮೊದಲ ಎರಡು ಪಂದ್ಯಗಳಲ್ಲಿ ಸ್ಟಾರ್ಕ್ ಈ ಗೌರವ ಪಡೆದಿದ್ದರು.
ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ: 371 ಮತ್ತು 349; ಇಂಗ್ಲೆಂಡ್: 286 ಮತ್ತು 102.5 ಓವರುಗಳಲ್ಲಿ 352 (ಜೇಮಿ ಸ್ಮಿತ್ 60, ವಿಲ್ ಜಾಕ್ಸ್ 47, ಬ್ರೈಡನ್ ಕಾರ್ಸ್ ಔಟಾಗದೇ 39; ಮಿಚೆಲ್ ಸ್ಟಾರ್ಕ್ 62ಕ್ಕೆ3, ಪ್ಯಾಟ್ ಕಮಿನ್ಸ್ 48ಕ್ಕೆ3, ನೇಥನ್ ಲಯನ್ 77ಕ್ಕೆ3).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.