ADVERTISEMENT

ಕೋವಿಡ್ ವಿರುದ್ಧ ಹೋರಾಟ: ವಿಶ್ವಕಪ್ ಫೈನಲ್ ಜರ್ಸಿ ಹರಾಜಿಗಿಟ್ಟ ಬಟ್ಲರ್!

ಪಿಟಿಐ
Published 1 ಏಪ್ರಿಲ್ 2020, 17:33 IST
Last Updated 1 ಏಪ್ರಿಲ್ 2020, 17:33 IST
ಜೋಸ್ ಬಟ್ಲರ್
ಜೋಸ್ ಬಟ್ಲರ್   

ಲಂಡನ್: ಕೊವಿಡ್ ವಿರುದ್ಧದ ಹೋರಾಟದ ನೆರವು ನಿಧಿಗೆ ಹಣ ನೀಡಲು ಇಂಗ್ಲೆಂಡ್ ಕ್ರಿಕೆಟಿಗ ಜೊಸ್ ಬಟ್ಲರ್ ಅವರು ತಾವು ವಿಶ್ವಕಪ್ ಫೈನಲ್‌ನಲ್ಲಿ ಬಳಸಿದ್ದ ಜರ್ಸಿಯನ್ನು ಹರಾಜು ಮಾಡಲಿದ್ದಾರೆ.

ಮಂಗಳವಾರ ರಾತ್ರಿ ಟ್ವಿಟರ್‌ನಲ್ಲಿ ವಿಡಿಯೊ ಸಂದೇಶ ಹಾಕಿರುವ ಬಟ್ಲರ್, ‘ನಮಗೆಲ್ಲ ಗೊತ್ತಿರುವಂತೆ ಆಸ್ಪತ್ರೆಗಳು, ವೈದ್ಯರು, ದಾದಿಯರು ಮತ್ತು ರಾಷ್ಟ್ರೀಯ ಆರೋಗ್ಯ ಸೇವೆಯ ಸಿಬ್ಬಂದಿಯು ಕೊರೊನಾ ಸೋಂಕಿತರ ಚಿಕಿತ್ಸೆಗ ಶ್ರಮಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಅವರಿಗೆ ನಮ್ಮ ಬೆಂಬಲ ಅತ್ಯಗತ್ಯವಾಗಿ ಬೇಕು. ಅದಕ್ಕಾಗಿ ನಾನು ನೆರವು ನೀಡಲಿದ್ದೇನೆ’ ಎಂದಿದ್ದಾರೆ.

ಹೋದ ವರ್ಷ ಲಾರ್ಡ್ಸ್‌ನಲ್ಲಿನಡೆದಿದ್ದ ಏಕದಿನ ವಿಶ್ವಕಪ್ ಕ್ರಿಕೆಟ್‌ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಜಯಿಸಿತ್ತು. ಇತಿಹಾಸದಲ್ಲಿ ಮೊದಲ ಬಾರಿ ಚಾಂಪಿಯನ್ ಆಗಿತ್ತು. ಆ ಪಂದ್ಯದಲ್ಲಿ ತಾವು ಜಯಿಸಿದ್ದ ತಿಳಿನೀಲಿ ಬಣ್ಣದ ಪೋಷಾಕನ್ನು ಬಟ್ಲರ್ ಹರಾಜಿಗಿಡಲಿದ್ದಾರೆ.

ADVERTISEMENT

‘ಹೆಚ್ಚಿನ ಮೊತ್ತದ ಹಣವನ್ನು ಸಂಗ್ರಹಿಸಲು ಟೀ ಶರ್ಟ್‌ ಹರಾಜಿಗೆ ಮುಂದಾಗಿದ್ದೇನೆ. ಇದನ್ನು ನಾನು ಫೈನಲ್‌ನಲ್ಲಿ ಧರಿಸಿದ್ದೆ. ಇದರ ಮೇಲೆ ನಮ್ಮ ತಂಡದ ಎಲ್ಲ ಆಟಗಾರರ ಹಸ್ತಾಕ್ಷರವೂ ಇದೆ’ ಎಂದು ಬಟ್ಲರ್ ಟ್ವೀಟ್ ಮಾಡಿದ್ದಾರೆ. ತಮ್ಮ ಸಂದೇಶವನ್ನು ಅವರು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ತಮ್ಮಸಹ ಆಟಗಾರ ಏಯಾನ್ ಮಾರ್ಗನ್ ಸೇರಿದಂತೆ ಹಲವು ಆಟಗಾರರಿಗೆ ಟ್ಯಾಗ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.