ADVERTISEMENT

2023ರವರೆಗೆ ಕ್ರಿಕೆಟ್‌ ವೇಳಾಪಟ್ಟಿ ಪರಿಷ್ಕರಣೆ: ಐಸಿಸಿ

ಪಿಟಿಐ
Published 23 ಏಪ್ರಿಲ್ 2020, 20:15 IST
Last Updated 23 ಏಪ್ರಿಲ್ 2020, 20:15 IST
   

ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್‌ ವೇಳಾಪಟ್ಟಿಯನ್ನು 2023ರವರೆಗೆ ಪರಿಷ್ಕರಿಸಲು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಸರ್ವಾನುಮತದಿಂದ ಸಮ್ಮತಿಸಲಾಯಿತು.

ಗುರುವಾರ ಕಾಲ್‌ ಕಾನ್ಫರೆನ್ಸ್‌ನಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಕೊರೊನಾ ವೈರಸ್‌ ಸೋಂಕು ತಡೆಯುವ ನಿಟ್ಟಿನಲ್ಲಿ ವಿಶ್ವದ ಬಹುತೇಕ ಎಲ್ಲ ದೇಶಗಳಲ್ಲಿ ದಿಗ್ಬಂಧನ ವಿಧಿಸಲಾಗಿದೆ. ಇದರಿಂದಾಗಿ ಕ್ರಿಕೆಟ್‌ ಚಟುವಟಿಕೆಗಳು ಸ್ಥಗಿತವಾಗಿವೆ. ಭವಿಷ್ಯದ ಟೂರ್ನಿಗಳು ಮತ್ತು ಸರಣಿಗಳ ಆಯೋಜನೆ ಕುರಿತು ವೇಳಾಪಟ್ಟಿ ಪರಿಷ್ಕರಣೆಗೆ ಈ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್, ಜೂನ್‌ನಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಏಕದಿನ ಕ್ರಿಕೆಟ್ ಲೀಗ್ ಮತ್ತಿತರ ಟೂರ್ನಿಗಳ ಕುರಿತು ಚರ್ಚಿಸಲಾಯಿತು.

ADVERTISEMENT

‘ಭವಿಷ್ಯದ ವೇಳಾಪಟ್ಟಿ (ಎಫ್‌ಟಿಪಿ)ಯನ್ನು 2023ರವರೆಗೆ ಪರಿಷ್ಕರಿಸಲಾಗುವುದು. ಈಗ ಮುಂದೂಡಲಾಗಿರುವ ಟೂರ್ನಿಗಳು ಮತ್ತು ಕಾರ್ಯಕ್ರಮಗಳ ಆಯೋಜನೆಗೆ ಆದ್ಯತೆ ನೀಡಲಾಗುವುದು. ಎಷ್ಟು ಸಾಧ್ಯವೋ ಅಷ್ಟು ಟೂರ್ನಿಗಳನ್ನು ನಡೆಸಲಾಗುವುದು’ ಎಂದು ಐಸಿಸಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಟಿ20 ವಿಶ್ವಕಪ್, 2021ರಲ್ಲಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಗಳ ಕುರಿತು ಈಗಾಗಲೇ ತಿಳಿಸಲಾಗಿದೆ. ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ’ ಎಂದು ಮೂಲಗಳು ತಿಳಿಸಿವೆ.

ವಿಶ್ವಕಪ್ ಆಯೋಜನೆಗೆ ಸರ್ವಪ್ರಯತ್ನ: ‘ಅಕ್ಟೋಬರ್‌ನಲ್ಲಿ ಟಿ20 ವಿಶ್ವಕಪ್ ಟೂರ್ನಿಯ ಆಯೋಜನೆಗೆ ಎಲ್ಲ ಸಾಧ್ಯತೆಗಳನ್ನು ಬಳಸಿಕೊಳ್ಳುತ್ತಿದ್ದೇವೆ. ಆಸ್ಟ್ರೇಲಿಯಾ ಸರ್ಕಾರ ಮತ್ತು ಆಯೋಜನೆ ಸಮಿತಿಯೊಂದಿಗೆ ನಿರಂತರ ಚರ್ಚೆ ನಡೆಯುತ್ತಿದೆ. ಈಗ ಇರುವ ವೇಳಾಪಟ್ಟಿಯಲ್ಲಿಯೇ ಟೂರ್ನಿಯನ್ನು ಮಾಡಲು ಸಾಧ್ಯವೇ ಎಂಬುದನ್ನು ನೋಡಲಾಗುತ್ತಿದೆ. ಸಾಧ್ಯವಾದಷ್ಟೂ ಟೂರ್ನಿಯನ್ನು ಆಯೋಜಿಸುವ ಉದ್ದೇಶವಿದೆ’ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಸಿಇಒ ಕೆವಿನ್ ರಾಬರ್ಟ್ಸ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.