ADVERTISEMENT

ಅಮಾನತು ನಿರ್ಣಯಕ್ಕೆ ಕ್ರಿಕೆಟ್ ದಕ್ಷಿಣ ಆಫ್ರಿಕಾ ತಿರುಗೇಟು

ರಾಯಿಟರ್ಸ್
Published 11 ಸೆಪ್ಟೆಂಬರ್ 2020, 12:44 IST
Last Updated 11 ಸೆಪ್ಟೆಂಬರ್ 2020, 12:44 IST
ಕೇಪ್‌ ಟೌನ್ ಕ್ರೀಡಾಂಗಣ –ಎಎಫ್‌ಪಿ ಚಿತ್ರ
ಕೇಪ್‌ ಟೌನ್ ಕ್ರೀಡಾಂಗಣ –ಎಎಫ್‌ಪಿ ಚಿತ್ರ   

ಕೇಪ್‌ಟೌನ್: ಅಮಾನತುಗೊಳಿಸಲು ಮುಂದಾಗಿರುವ ದಕ್ಷಿಣ ಆಫ್ರಿಕಾ ಕ್ರೀಡಾ ಕಾನ್ಫೆಡರೇಷನ್ ಮತ್ತು ಒಲಿಂಪಿಕ್ ಸಮಿತಿಯ (ಸಾಸ್ಕೊಕ್) ನಿರ್ಧಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ದಕ್ಷಿಣ ಆಫ್ರಿಕಾಕ್ರಿಕೆಟ್ ಮಂಡಳಿ (ಸಿಎಸ್‌ಎ) ಆ ನಿರ್ಣಯವನ್ನು ಒಪ್ಪಿಕೊಳ್ಳಲು ನಿರಾಕರಿಸಿದೆ.

ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ತಬಂಗ್ ಮೋರೆ ಅವರನ್ನು ಅಮಾನತುಗೊಳಿಸಿದ ಒಂಬತ್ತು ತಿಂಗಳ ನಂತರ ಪದಚ್ಯುತಗೊಳಿಸಲಾಗಿತ್ತು. ಈ ಪ್ರಸಂಗವೂ ಸೇರಿದಂತೆ ಆಡಳಿತದಲ್ಲಿ ಅನೇಕ ಲೋಪಗಳನ್ನು ಎಸಗಿರುವುದರಿಂದ ಮಂಡಳಿಯನ್ನು ಸಾಸ್ಕೊಸ್ ಗುರುವಾರ ರಾತ್ರಿ ಅಮಾನತುಗೊಳಿಸಿತ್ತು.

ಕ್ರಿಕೆಟ್ ಮಂಡಳಿಯ ಆಡಳಿತದ ಲೋಪಗಳನ್ನು ಪ್ರಾಯೋಜಕರು ಮತ್ತು ರಾಷ್ಟ್ರೀಯ ತಂಡದ ಆಟಗಾರರು ಟೀಕಿಸಿದ್ದರು. ತನಿಖಾ ವರದಿಯನ್ನು ಬಹಿರಂಗ ಮಾಡದೇ ಇರುವುದು ಮತ್ತು ಸೆಪ್ಟೆಂಬರ್ ಐದರಂದು ನಡೆಯಬೇಕಾಗಿದ್ದ ವಾರ್ಷಿಕ ಸಭೆಯನ್ನು ಮುಂದೂಡಿರುವುದು ಮಂಡಳಿಯ ಸ್ವಾರ್ಥಕ್ಕೆ ಹಿಡಿದ ಕನ್ನಡಿ ಎಂದು ಆಟಗಾರರು ಆರೋಪಿಸಿದ್ದರು. ಕಳೆದ ತಿಂಗಳಲ್ಲಿ ರಾಜೀನಾಮೆ ನೀಡಿದ ಅಧ್ಯಕ್ಷ ಕ್ರಿಸ್ ನೆಂಜಾನಿ ಅವರ ಸ್ಥಾನಕ್ಕೆ ಹೊಸ ಅಧ್ಯಕ್ಷರನ್ನು ನೇಮಕ ಮಾಡುವುದು ವಾರ್ಷಿಕ ಸಭೆಯ ಪ್ರಮುಖ ಅಂಶವಾಗಿತ್ತು.

ADVERTISEMENT

’ಸಾಸ್ಕೊ ಕೈಗೊಂಡ ನಿರ್ಣಯಗಳಿಗೆ ಬದ್ಧರಾಗಲು ಕ್ರಿಕೆಟ್ ಮಂಡಳಿಗೆ ಸಾಧ್ಯವಿಲ್ಲ. ಅಮಾನತಿಗೆ ಸಂಬಂಧಿಸಿ ನೀಡಿದ ವಿವರಗಳನ್ನು ಒಪ್ಪಿಕೊಳ್ಳುವುದೂ ಸಾಧ್ಯವಿಲ್ಲ. ವ್ಯಾವಹಾರಿಕ ವಿಷಯಗಳಲ್ಲಿ ಸಾಸ್ಕೊಸ್ ಮೂಗು ತೂರಿಸಿರುವುದರಿಂದ ಕಾನೂನು ಸಲಹೆ ಪಡೆದುಕೊಳ್ಳಲಾಗುವುದು‘ ಎಂದು ಸಿಎಸ್‌ಎ ಶುಕ್ರವಾರ ಹೇಳಿದೆ.

’ಸಿಎಸ್‌ಎಯ ಆರ್ಥಿಕ ಚಟುವಟಿಕೆಗಳ ಬಗ್ಗೆ ಟೀಕೆಗಳು ಕೇಳಿಬಂದಿವೆ. ಅದರ ಬಗ್ಗೆ ವಿಸ್ತೃತ ತನಿಖೆ ಆಗಬೇಕು. ಹೀಗಾಗಿ ಮೂಗು ತೂರಿಸುವುದು ಅನಿವಾರ್ಯ ಆಗಿದೆ‘ ಎಂದು ಸಾಸ್ಕೊಸ್ ಪ್ರಭಾರಿ ಮುಖ್ಯ ಕಾರ್ಯನಿರ್ವಾಹಕ ರವಿ ಗೋವಿಂದರ್ ಸ್ಪಷ್ಟಪಡಿಸಿದರು.

’ಸಿಎಸ್‌ಎ ದುರಾಡಳಿತದ ಬಗ್ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ಕೂಡ ಬೇಸರ ವ್ಯಕ್ತಪಡಿಸಿದೆ. ಆದ್ದರಿಂದ ನಮ್ಮ ನಿರ್ಧಾರ ಸರಿ. ಮಂಡಳಿಯ ಪ್ರಮುಖರು ಸೋಮವಾರ ಭೇಟಿ ನೀಡಿ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ. ಅಲ್ಲಿಯ ವರೆಗೆ ನಮ್ಮ ನಿರ್ಧಾರದಲ್ಲಿ ಬದಲಾವಣೆ ಇಲ್ಲ‘ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.