ADVERTISEMENT

IND VS SA Test: ರಾಹುಲ್ ಶತಕ; ಎಲ್ಗರ್‌ ತಿರುಗೇಟು

ದಕ್ಷಿಣ ಆಫ್ರಿಕಾ ತಂಡಕ್ಕೆ ಮೊದಲ ಇನಿಂಗ್ಸ್‌ ಮುನ್ನಡೆ; ಬೂಮ್ರಾ, ಸಿರಾಜ್‌ಗೆ ತಲಾ 2 ವಿಕೆಟ್

ಪಿಟಿಐ
Published 27 ಡಿಸೆಂಬರ್ 2023, 19:27 IST
Last Updated 27 ಡಿಸೆಂಬರ್ 2023, 19:27 IST
<div class="paragraphs"><p>ದಕ್ಷಿಣ ಆಫ್ರಿಕಾ ವಿರುದ್ಧ ಕೆ.ಎಲ್. ರಾಹುಲ್ ಶತಕ ಸಾಧನೆ</p></div>

ದಕ್ಷಿಣ ಆಫ್ರಿಕಾ ವಿರುದ್ಧ ಕೆ.ಎಲ್. ರಾಹುಲ್ ಶತಕ ಸಾಧನೆ

   

(ರಾಯಿಟರ್ಸ್ ಚಿತ್ರ)

ಸೆಂಚುರಿಯನ್: ಕನ್ನಡಿಗ ಕೆ.ಎಲ್. ರಾಹುಲ್ ಮತ್ತು ತಮ್ಮ ವೃತ್ತಿಜೀವನದ ಕೊನೆಯ ಟೆಸ್ಟ್ ಸರಣಿ ಆಡುತ್ತಿರುವ ದಕ್ಷಿಣ ಆಫ್ರಿಕಾದ ಡೀನ್ ಎಲ್ಗರ್ ಅವರ ಶತಕಗಳ ಭರಾಟೆಗೆ ಸೂಪರ್ ಸ್ಪೋರ್ಟ್ಸ್ ಪಾರ್ಕ್ ವೇದಿಕೆಯಾಯಿತು. 

ADVERTISEMENT

ಇಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಎರಡನೇ ದಿನವಾದ ಬುಧವಾರ ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ  ರಾಹುಲ್ (101; 137ಎ, 4X14, 6X4)ಶತಕದ ನೆರವಿನಿಂದ 245 ರನ್ ಗಳಿಸಿತು. ಅದಕ್ಕುತ್ತರವಾಗಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವು ದಿನದಾಟದ ಕೊನೆಗೆ 66 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 256 ರನ್ ಗಳಿಸಿತು. ಮಂದಬೆಳಕಿನ ಕಾರಣ ಪಂದ್ಯವು ಸ್ಥಗಿತಗೊಂಡಾಗ ತಂಡವು 11 ರನ್‌ಗಳ ಮುನ್ನಡೆ ಗಳಿಸಿತ್ತು. 

ಶತಕ ಬಾರಿಸಿರುವ ಡೀನ್ ಎಲ್ಗರ್ (ಔಟಾಗದೆ 140; 211ಎ) ಮತ್ತು ಮಾರ್ಕೊ ಯಾನ್ಸೆನ್ (ಬ್ಯಾಟಿಂಗ್ 3) ಕ್ರೀಸ್‌ನಲ್ಲಿದ್ದಾರೆ.

ರಾಹುಲ್ ಶತಕ ಸೊಬಗು: ಪಂದ್ಯದ ಮೊದಲ ದಿನದಾಟದಲ್ಲಿ ಭಾರತ ತಂಡವು 8 ವಿಕೆಟ್‌ಗಳಿಗೆ 208 ರನ್ ಗಳಿಸಿತ್ತು. ಅಗ್ರಕ್ರಮಾಂಕದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದ್ದ ಸಂದರ್ಭದಲ್ಲಿ ರಾಹುಲ್ ಏಕಾಂಗಿ ಹೋರಾಟ ಮಾಡಿ ತಂಡವು ಅಲ್ಪಮೊತ್ತಕ್ಕೆ ಕುಸಿಯದಂತೆ ನೋಡಿಕೊಂಡಿದ್ದರು.

ಆರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಅವರು 70 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದರು. ಎರಡನೇ ದಿನ ಬೆಳಿಗ್ಗೆ ತುಸು ವೇಗವಾಗಿ ರನ್‌ ಗಳಿಸಿದರು.  ಅವರು ಮೊಹಮ್ಮದ್ ಸಿರಾಜ್ (5; 22ಎ) ಅವರೊಂದಿಗೆ ಒಂಬತ್ತನೇ ವಿಕೆಟ್ ಪಾಲುದಾರಿಕೆಯಲ್ಲಿ 30 ರನ್‌ ಸೇರಿಸಿದರು. 

‍‍‍ಪದಾರ್ಪಣೆ ಪಂದ್ಯವಾಡುತ್ತಿರುವ ಕನ್ನಡಿಗ ಪ್ರಸಿದ್ಧ ಕೃಷ್ಣ ರನ್‌ ಖಾತೆ ತೆರೆಯಲಿಲ್ಲ. ಆದರೆ ಎಂಟು ಎಸೆತ ಎದುರಿಸಿ ರಾಹುಲ್‌ಗೆ ಉತ್ತಮ ಜೊತೆ ನೀಡಿದರು. ರಾಹುಲ್ 133 ಎಸೆತಗಳಲ್ಲಿ ಶತಕದ ಗಡಿ ದಾಟಿದರು. ಸೆಂಚುರಿಯನ್‌ನಲ್ಲಿ ಅವರು ಎರಡನೇ ಬಾರಿ ನೂರರ ಗಡಿ ದಾಟಿ ದಾಖಲೆ ಬರೆದರು. ಒಟ್ಟಾರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಇದು ಅವರಿಗೆ ಎಂಟನೇ ಶತಕವಾಗಿದೆ. ಬ್ಯಾಟರ್‌ಸ್ನೇಹಿ ಅಲ್ಲದ ಪಿಚ್‌ನಲ್ಲಿ ಅವರು ಈ ಸಾಧನೆ ಮಾಡಿದರು.

ಎಲ್ಗರ್ ಅಬ್ಬರ: ತಮ್ಮ ವೃತ್ತಿಜೀವನದ 85ನೇ ಟೆಸ್ಟ್ ಪಂದ್ಯ ಆಡುತ್ತಿರುವ  ಎಡಗೈ ಬ್ಯಾಟರ್ ಡೀನ್ ಎಲ್ಗರ್ 14ನೇ ಶತಕ ದಾಖಲಿಸಿದರು.

ಪದಾರ್ಪಣೆ ಪಂದ್ಯ ಆಡುತ್ತಿರುವ ಡೇವಿಡ್ ಬೆಡಿಂಗ್‌ಹ್ಯಾಮ್ (56; 87ಎ) ಅವರೊಂದಿಗೆ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 131 ರನ್ ಸೇರಿಸಿ ತಂಡವು ಮುನ್ನಡೆ ಸಾಧಿಸಲು ಕಾರಣರಾದರು. ಬೆಡಿಂಗ್‌ಹ್ಯಾಮ್ ವಿಕೆಟ್ ಗಳಿಸಿದ ಮೊಹಮ್ಮದ್ ಸಿರಾಜ್ ಜೊತೆಯಾಟವನ್ನು ಮುರಿದರು.

ಮೊಹಮ್ಮದ್ ಶಮಿ ಅನುಪಸ್ಥಿತಿಯಲ್ಲಿ ಶಾರ್ದೂಲ್ ಠಾಕೂರ್ (12 ಓವರ್‌ಗಳಲ್ಲಿ 57 ರನ್) ಅಷ್ಟೇನೂ ಪರಿಣಾಮಕಾರಿಯಾಗಲಿಲ್ಲ.  ಅನುಭವಿ ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಸಿರಾಜ್ ತಲಾ ಎರಡು ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಭಾರತ: 67.4 ಓವರ್‌ಗಳಲ್ಲಿ 245 (ಕೆ.ಎಲ್. ರಾಹುಲ್ 101, ಮೊಹಮ್ಮದ್ ಸಿರಾಜ್ 5, ಕಗಿಸೊ ರಬಾಡ 59ಕ್ಕೆ5, ನಾಂದ್ರೆ ಬರ್ಗರ್ 50ಕ್ಕೆ3) ದಕ್ಷಿಣ ಆಫ್ರಿಕಾ: 66 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 256 (ಡೀನ್ ಎಲ್ಗರ್ ಬ್ಯಾಟಿಂಗ್ 140, ಟೋನಿ ಡಿ ಝಾರ್ಜಿ 28, ಡೇವಿಡ್ ಬೆಡಿಂಗಾಮ್ 56, ಜಸ್‌ಪ್ರೀತ್ ಬೂಮ್ರಾ 48ಕ್ಕೆ2, ಮೊಹಮ್ಮದ್ ಸಿರಾಜ್ 63ಕ್ಕೆ2, ಪ್ರಸಿದ್ಧ ಕೃಷ್ಣ 61ಕ್ಕೆ1)

ವಿಕೆಟ್ ಖಾತೆ ತೆರೆದ ಪ್ರಸಿದ್ಧ ಕೃಷ್ಣ

ಚೊಚ್ಚಲ ಟೆಸ್ಟ್ ಪಂದ್ಯ ಆಡುತ್ತಿರುವ ಪ್ರಸಿದ್ಧ ಕೃಷ್ಣ ತಮ್ಮ ವಿಕೆಟ್ ಖಾತೆ ತೆರೆದರು.

ಕರ್ನಾಟಕದ ವೇಗಿ ಪ್ರಸಿದ್ಧ ಇನಿಂಗ್ಸ್‌ನ 62ನೆ ಓವರ್‌ನಲ್ಲಿ ಕೈಲ್ ವೆರಿಯನ್ (4 ರನ್) ವಿಕೆಟ್ ಗಳಿಸಿದರು.

ಪ್ರಸಿದ್ಧ ಎಸೆತವನ್ನು ಆಡುವ ಯತ್ನದಲ್ಲಿ ಕೈಲ್ ಅವರು, ವಿಕೆಟ್‌ಕೀಪರ್ ಕೆ.ಎಲ್. ರಾಹುಲ್‌ಗೆ ಕ್ಯಾಚಿತ್ತರು.

ನಾಲ್ಕನೇ ಬೌಲರ್‌ ಆಗಿ ಪ್ರಸಿದ್ಧ (15–1–61–1) ಕಣಕ್ಕಿಳಿದರು.

ಡೀನ್‌ ಎಲ್ಗರ್‌

ರನ್‌ 140*

ಎಸೆತ 211

ಬೌಂಡರಿ 23

ಸಿಕ್ಸರ್‌ 0

ಸ್ಟ್ರೈಕ್‌ರೇಟ್‌ 66.35

ಕೆ.ಎಲ್‌. ರಾಹುಲ್‌

ರನ್‌ 101

ಎಸೆತ 137

ಬೌಂಡರಿ 14

ಸಿಕ್ಸರ್‌ 4

ಸ್ಟ್ರೈಕ್‌ರೇಟ್‌ 73.72

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.