ಕ್ಯಾಪ್ಟನ್ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಪ್ರಶಸ್ತಿಯೊಂದಿಗೆ ಮಧ್ಯಪ್ರದೇಶ ತಂಡದ ಆಟಗಾರರು.
ಬೆಂಗಳೂರು: ಮಧ್ಯಪ್ರದೇಶ ತಂಡವು ಸೋಮವಾರ ಕ್ಯಾಪ್ಟನ್ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕೆಎಸ್‌ಸಿಎ ಕಾರ್ಯದರ್ಶಿ ಇಲೆವೆನ್ ವಿರುದ್ಧದ ಫೈನಲ್ ಪಂದ್ಯವು ಡ್ರಾನಲ್ಲಿ ಮುಕ್ತಾಯಗೊಂಡಿತು. ಮೊದಲ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ಮಧ್ಯಪ್ರದೇಶ ಪ್ರಶಸ್ತಿ ಗೆದ್ದಿತು.
ಮೊದಲ ಇನಿಂಗ್ಸ್‌ನಲ್ಲಿ 20 ರನ್‌ಗಳ ಮುನ್ನಡೆ ಪಡೆದಿದ್ದ ಮಧ್ಯಪ್ರದೇಶ ತಂಡವು, ಕೊನೆಯ ದಿನ ಎರಡನೇ ಇನಿಂಗ್ಸ್‌ನಲ್ಲಿ 85.1 ಓವರ್‌ಗಳಲ್ಲಿ 242 ರನ್ ಗಳಿಸಿ ಆಲೌಟ್ ಆಯಿತು. ಭಾನುವಾರ 4 ವಿಕೆಟ್‌ಗೆ 96 ರನ್ ಗಳಿಸಿದ್ದ ತಂಡಕ್ಕೆ ವೆಂಕಟೇಶ್ ಅಯ್ಯರ್ (79) ಆಸರೆಯಾದರು. ಇಲೆವೆನ್ ತಂಡದ ಧ್ರುವ್ ಪಿ. ಮತ್ತು ಮಾಧವ್ ಪಿ. ಬಜಾಜ್ ಕ್ರಮವಾಗಿ ನಾಲ್ಕು ಮತ್ತು ಮೂರು ವಿಕೆಟ್ ಪಡೆದರು.
ಗೆಲುವಿಗೆ 263 ರನ್‌ಗಳ ಗುರಿ ಪಡೆದ ಇಲೆವೆನ್ ತಂಡವು ಆತ್ಮವಿಶ್ವಾಸದಿಂದ ಬ್ಯಾಟಿಂಗ್ ಇಳಿಯಿತು. ಆದರೆ, ರನ್ ವೇಗವನ್ನು ಹೆಚ್ಚಿಸುವ ಭರದಲ್ಲಿ ನಿಯಮಿತವಾಗಿ ವಿಕೆಟ್ ಕಳೆದುಕೊಂಡಿತು. ದಿನದಾಟದ ಅಂತ್ಯಕ್ಕೆ 29 ಓವರ್‌ಗಳಲ್ಲಿ 7 ವಿಕೆಟ್‌ಗೆ 168 ರನ್ ಗಳಿಸಿ ಡ್ರಾ ಮಾಡಿಕೊಂಡಿತು. ವೆಂಕಟೇಶ್ ಎಂ. (38), ಕೃತಿಕ್ ಕೃಷ್ಣ (34) ಕೊಂಚ ಹೋರಾಟ ತೋರಿದರು. ಎದುರಾಳಿ ತಂಡದ ಆರ್ಯನ್ ಮತ್ತು ಅರ್ಷದ್ ಖಾನ್ ಕ್ರಮವಾಗಿ ಮೂರು ಮತ್ತು ಎರಡು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್: ಮಧ್ಯಪ್ರದೇಶ: 338 ಮತ್ತು 85.1 ಓವರ್‌ಗಳಲ್ಲಿ 242 (ರಿಷಭ್ ಚವ್ಹಾಣ್ 35, ವೆಂಕಟೇಶ್ ಅಯ್ಯರ್ 79, ಆರ್ಯನ್ ಪಾಂಡೆ 42; ಧ್ರುವ್ ಪಿ. 52ಕ್ಕೆ 4, ಮಾಧವ್ ಪಿ. ಬಜಾಜ್ 86ಕ್ಕೆ 3). ಕೆಎಸ್‌ಸಿಎ ಕಾರ್ಯದರ್ಶಿ ಇಲೆವೆನ್: 318 ಮತ್ತು 29 ಓವರ್‌ಗಳಲ್ಲಿ 7 ವಿಕೆಟ್‌ಗೆ 168 (ವೆಂಕಟೇಶ್ ಎಂ. 38, ರಾಜವೀರ್ ವಾಧ್ವಾ 32, ಕೃತಿಕ್ ಕೃಷ್ಣ 34; ಆರ್ಯನ್ ಪಾಂಡೆ 46ಕ್ಕೆ 3, ಅರ್ಷದ್ ಖಾನ್ 46ಕ್ಕೆ 2). ಫಲಿತಾಂಶ: ಪಂದ್ಯ ಡ್ರಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.