ADVERTISEMENT

ಕ್ರಿಕೆಟಿಗ ಯಜುವೇಂದ್ರ ಚಾಹಲ್– ಧನಶ್ರೀ ವಿಚ್ಛೇದನಕ್ಕೆ ನ್ಯಾಯಾಲಯ ಅನುಮತಿ

ಪಿಟಿಐ
Published 20 ಮಾರ್ಚ್ 2025, 10:28 IST
Last Updated 20 ಮಾರ್ಚ್ 2025, 10:28 IST
   

ಮುಂಬೈ:  ಕ್ರಿಕೆಟಿಗ ಯಜುವೇಂದ್ರ ಚಾಹಲ್ ಮತ್ತು ಅವರಿಂದ ದೂರವಾಗಿರುವ ಪತ್ನಿ ಧನಶ್ರೀ ವರ್ಮಾ ಅವರಿಗೆ ಇಲ್ಲಿನ ಬಾಂದ್ರಾದ ಕುಟುಂಬ ನ್ಯಾಯಾಲಯವು ವಿಚ್ಛೇದನಕ್ಕೆ  ಗುರುವಾರ ಅನುಮತಿ ನೀಡಿದೆ.

ಇವರಿಬ್ಬರು ಸಮ್ಮತಿಯ ಮೇರೆಗೆ ವಿಚ್ಛೇದನ ಕೋರಿ ಜಂಟಿಯಾಗಿ ಅರ್ಜಿ ಸಲ್ಲಿಸಿದರು. ಇದರೊಡನೆ ಇವರಿಬ್ಬರ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ತೆರೆಬಿದ್ದಿದೆ.

2020ರ ಡಿಸೆಂಬರ್‌ನಲ್ಲಿ ಇಬ್ಬರ ವಿವಾಹ ನಡೆದಿತ್ತು. ಅರ್ಜಿಯ ಪ್ರಕಾರ 2022ರ ಜೂನ್‌ನಿಂದ ಇಬ್ಬರೂ ಪ್ರತ್ಯೇಕ ವಾಗಿದ್ದಾರೆ. ಫೆ. 5ರಂದು ವಿಚ್ಛೇದನ ಕೋರಿ ಚಾಹಲ್ ಮತ್ತು ಧನಶ್ರೀ ಕುಟುಂಬಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿವೆ.

ADVERTISEMENT

ಆದರೆ ಕೂಲಿಂಗ್ ಆಫ್‌ (ಕಡ್ಡಾಯ ಕಾಯುವಿಕೆ) ಅವಧಿಗೆ ವಿನಾಯಿತಿ ನೀಡಲು ನ್ಯಾಯಾಲಯ ನಿರಾಕರಿಸಿದ ಕಾರಣ ಇಬ್ಬರೂ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಹಿಂದೂ ವಿವಾಹ ಕಾಯ್ದೆ ‍ಪ್ರಕಾರ ವಿಚ್ಛೇದನ ಅರ್ಜಿ ಸಲ್ಲಿಸಿದ ಬಳಿಕ ದಂಪತಿಗೆ ಆರು ತಿಂಗಳ ಕಾಯುವಿಕೆ ಕಡ್ಡಾಯವಾಗಿದೆ.

ಕಾಯುವಿಕೆ ಅವಧಿಗೆ ವಿನಾಯಿತಿ ನೀಡಿದ ಹೈಕೋರ್ಟ್‌ ಚಾಹಲ್‌ ಅವರು ಐಪಿಎಲ್‌ನಲ್ಲಿ ಆಡಬೇಕಿರುವ ಕಾರಣ ಗುರುವಾರವೇ ಅರ್ಜಿ ಇತ್ಯರ್ಥ ಪಡಿಸುವಂತೆ ಸೂಚಿಸಿತ್ತು. ಹೋದ ಸಲ ರಾಜಸ್ಥಾನ ರಾಯಲ್ಸ್‌ಗೆ ಆಡಿದ್ದ ಚಾಹಲ್ ಈ ಸಲ ಪಂಜಾಬ್ ಕಿಂಗ್ಸ್ ಪರ ಆಡಲಿದ್ದಾರೆ.

ಚಾಹಲ್ ಅವರು ಒಪ್ಪಂದದ ಪ್ರಕಾರ ಧನಶ್ರೀಗೆ ನೀಡಬೇಕಾಗಿದ್ದ ₹4.75 ಕೋಟಿ ಮೊತ್ತದಲ್ಲಿ ಭಾಗಶಃ  ಮೊತ್ತ (₹2.37 ಕೋಟಿ) ಮಾತ್ರ ಪಾವತಿಸಿದ್ದ ಕಾರಣ ಕೂಲಿಂಗ್ ಆಫ್‌ ಅವಧಿಗೆ ರಿಯಾಯಿತಿ ನೀಡಲಾಗದು ಎಂದು ಕುಟುಂಬ ನ್ಯಾಯಾಲಯ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.