ADVERTISEMENT

WTC ಫೈನಲ್‌ನಲ್ಲಿ ಸೋಲು: ಆಸ್ಟ್ರೇಲಿಯಾ ಅಗ್ರ ಕ್ರಮಾಂಕದಲ್ಲಿ ಪಲ್ಲಟ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 15:28 IST
Last Updated 15 ಜೂನ್ 2025, 15:28 IST
   

ಸಿಡ್ನಿ: ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು ಸೋಲನುಭವಿಸಿದ ಆಸ್ಟ್ರೇಲಿಯಾ ತನ್ನ ಬ್ಯಾಟಿಂಗ್ ಕ್ರಮಾಂಕಕ್ಕೆ ಹೊಸರೂಪ ನೀಡುವ ಸಾಧ್ಯತೆಯಿದೆ. ವೆಸ್ಟ್‌ ಇಂಡೀಸ್‌ ಎದುರಿನ ಮೂರು ಪಂದ್ಯಗಳ ಟೆಸ್ಟ್ ಸರಣಿ ಹಾಗೂ ತವರಿನಲ್ಲಿ ಆ್ಯಷಸ್‌ ಸರಣಿಗೆ ಮುನ್ನ ತಂಡದಲ್ಲಿ ‘ರೀಸೆಟ್‌’ ಮಾಡಬೇಕಾದ ಅಗತ್ಯವಿದೆ ಎಂದು ನಾಯಕ ಪ್ಯಾಟ್‌ ಕಮಿನ್ಸ್‌ ಹೇಳಿದ್ದಾರೆ.

ಮೊದಲ ಇನಿಂಗ್ಸ್‌ನಲ್ಲಿ 74 ರನ್‌ಗಳ ಮುನ್ನಡೆ ಪಡೆದರೂ ತಂಡ ಶನಿವಾರ ಐದು ವಿಕೆಟ್‌ಗಳ ಸೋಲನುಭವಿಸಿದ್ದು ಆಸ್ಟ್ರೇಲಿಯಾದ ಅಗ್ರ ಬ್ಯಾಟರ್‌ಗಳ ವೈಫಲ್ಯಕ್ಕೆ ಕನ್ನಡಿಯಾಗಿದೆ. ಆರಂಭ ಆಟಗಾರ ಡೇವಿಡ್‌ ವಾರ್ನರ್‌ 17 ತಿಂಗಳ ಹಿಂದೆ ನಿವೃತ್ತರಾದ ನಂತರ ತಂಡ ಅವರ ಸ್ಥಾನಕ್ಕೆ ಯೋಗ್ಯ ಆಟಗಾರನನ್ನು ಕಂಡುಕೊಳ್ಳಲು ಪರದಾಡಿದೆ.

ಸತತವಾಗಿ ವಿಫಲರಾಗುತ್ತಿರುವ ಮಾರ್ನಸ್‌ ಲಾಬುಶೇನ್ ಅವರಿಗೆ ಉಸ್ಮಾನ್ ಖ್ವಾಜಾ ಅವರ ಜೊತೆಗೆ ಇನಿಂಗ್ಸ್ ಆರಂಭಿಸುವ ಹೊಣೆ ವಹಿಸಲಾಯಿತು. ಅವರು ಖ್ವಾಜಾ ಅವರ ಐದನೇ ಜೊತೆಗಾರ ಎನಿಸಿದರು. ಕ್ಯಾಮೆರಾನ್ ಗ್ರೀನ್ ಅವರಿಗೆ ಮೂರನೇ ಕ್ರಮಾಂಕಕ್ಕೆ ಬಡ್ತಿ ನೀಡುವ ಪ್ರಯೋಗ ಕೂಡ ಕೈಕೊಟ್ಟಿತು. 38 ವರ್ಷ ವಯಸ್ಸಿನ ಖ್ವಾಜಾ ಅವರ ಸ್ಥಾನವೂ ಅಲುಗಾಡುತ್ತಿದೆ. ಅವರು 0 ಮತ್ತು 6 ರನ್ ಗಳಿಸಿ ನಿರಾಸೆ ಮೂಡಿಸಿದ್ದಾರೆ.

ADVERTISEMENT

ಗ್ರೀನ್ ಮೊದಲ ಇನಿಂಗ್ಸ್‌ನಲ್ಲಿ ನಾಲ್ಕು ರನ್ ಗಳಿಸಿದ್ದರೆ, ಎರಡನೇ ಇನಿಂಗ್ಸ್‌ನಲ್ಲಿ ಖಾತೆ ತೆರೆಯಲಿಲ್ಲ. ಮಿಚೆಲ್ ಸ್ಟಾರ್ಕ್ ಅವರ ಅಜೇಯ ಅರ್ಧ ಶತಕ ಮತ್ತು ಅಲೆಕ್ಸ್ ಕ್ಯಾರಿ ಅವರ 43 ರನ್‌ಗಳ ಕೊಡುಗೆ ಇಲ್ಲದೇ ಹೋಗಿದ್ದರೆ ದಕ್ಷಿಣ ಆಫ್ರಿಕಾಕ್ಕೆ ಬೆನ್ನಟ್ಟಬೇಕಾದ ಮೊತ್ತ ಇನ್ನೂ ಸಣ್ಣದಾಗಿರುತಿತ್ತು.

‘ಅಗ್ರ ಮೂವರಿಂದ ಇನ್ನೂ ಹೆಚ್ಚಿನ ಕೊಡುಗೆ ಬರಬೇಕಾಗಿತ್ತು’ ಎಂದು ಪಂದ್ಯದ ನಂತರ ಕಮಿನ್ಸ್‌ ವರದಿಗಾರರಿಗೆ ತಿಳಿಸಿದ್ದರು.

2027ರ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಋತು ಆರಂಭವಾಗುತ್ತಿದ್ದು, ಆಸ್ಟ್ರೇಲಿಯಾ ತನ್ನ ಮೊದಲ ಪಂದ್ಯವನ್ನು ಬಾರ್ಬಾಡೋಸ್‌ನಲ್ಲಿ ಆತಿಥೇಯ ವೆಸ್ಟ್‌ ಇಂಡೀಸ್ ವಿರುದ್ಧ ಜೂನ್ 25ರಿಂದ ಆಡಲಿದೆ.

‘ಈ ಸೋಲನ್ನು ಜೀರ್ಣೀಸಿಕೊಂಡ ಬಳಿಕ ವಿಂಡೀಸ್ ವಿರುದ್ಧ ಟೆಸ್ಟ್ ಆರಂಭಕ್ಕೆ ಇನ್ನು ಎರಡು ವಾರಗಳು ಉಳಿದಿದ್ದು, ಮುಂದೇನು ಮಾಡಬೇಕೆಂದು ಕುಳಿತು ಚರ್ಚಿಸುತ್ತೇವೆ’ ಎಂದು ಕಮಿನ್ಸ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.