ADVERTISEMENT

ಐಪಿಎಲ್ ಟೂರ್ನಿ: ಯುಎಇ ಬಯೋಬಬಲ್‌ಗೆ ಬೆದರಿದ ಆಸ್ಟ್ರೇಲಿಯನ್ನರು

ಹಿಂದೆ ಸರಿದ ಪ್ಯಾಟ್ ಕಮಿನ್ಸ್‌

​ಪ್ರಜಾವಾಣಿ ವಾರ್ತೆ
Published 30 ಮೇ 2021, 12:15 IST
Last Updated 30 ಮೇ 2021, 12:15 IST
ಕೋಲ್ಕತ್ತ ನೈಟ್ ರೈಡರ್ಸ್ ಆಟಗಾರ ಪ್ಯಾಟ್ ಕಮಿನ್ಸ್
ಕೋಲ್ಕತ್ತ ನೈಟ್ ರೈಡರ್ಸ್ ಆಟಗಾರ ಪ್ಯಾಟ್ ಕಮಿನ್ಸ್   

ಸಿಡ್ನಿ (ಪಿಟಿಐ): ಇದೇ ಸೆಪ್ಟೆಂಬರ್‌ನಲ್ಲಿ ನಡೆಸಲು ಉದ್ದೇಶಿಸಲಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಿಂದ ಕೋಲ್ಕತ್ತ ನೈಟ್ ರೈಡರ್ಸ್‌ ತಂಡದ ಪ್ಯಾಟ್ ಕಮಿನ್ಸ್‌ ಹಿಂದೆ ಸರಿಯಲಿದ್ದಾರೆ.

ಯುಎಇಯಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಬಯೋಬಬಲ್ ವ್ಯವಸ್ಥೆಯು ಮಾನಸಿಕ ಒತ್ತಡವನ್ನು ಹೆಚ್ಚಿಸುವ ಕಾರಣ ಪ್ಯಾಟ್ ಈ ನಿರ್ಧಾರ ಕೈಗೊಂಡಿದ್ದಾರೆನ್ನಲಾಗಿದೆ. ಇದೇ ಕಾರಣಕ್ಕಾಗಿ ಆಸ್ಟ್ರೇಲಿಯಾದ ಉಳಿದ ಆಟಗಾರರು ಕೂಡ ಹಿಂದೆ ಸರಿಯುವ ಸಾಧ್ಯತೆ ಇದೆ.

ಐಪಿಎಲ್ 14ನೇ ಆವೃತ್ತಿಯ ಟೂರ್ನಿಯನ್ನು ಈಚೆಗೆ ಕೋವಿಡ್ ಹೆಚ್ಚಳ ಮತ್ತು ಕೆಲವು ಆಟಗಾರರಿಗೆ ಸೋಂಕು ತಗುಲಿದ್ದರಿಂದ ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಟೂರ್ನಿಯಲ್ಲಿ ಉಳಿದಿರುವ 31 ಪಂದ್ಯಗಳನ್ನು ಯುಎಇಯಲ್ಲಿ ಸೆಪ್ಟೆಂಬರ್‌ನಲ್ಲಿ ನಡೆಸಲು ಶನಿವಾರ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ನಿರ್ಧರಿಸಿದೆ.

ADVERTISEMENT

‘ಐಪಿಎಲ್‌ನಲ್ಲಿ ದುಬಾರಿ ಮೌಲ್ಯ ಗಳಿಸಿರುವ ಆಟಗಾರ ಪ್ಯಾಟ್ ಕಮಿನ್ಸ್‌ ಅವರು ಮತ್ತೆ ಟೂರ್ನಿಯ ಮುಂದುವರಿದ ಭಾಗದಲ್ಲಿ ಕಣಕ್ಕಿಳಿಯುವುದಿಲ್ಲವೆಂದು ಖಚಿತಪಡಿಸಿದ್ದಾರೆ‘ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ.

ಅಕ್ಟೋಬರ್ –ನವೆಂಬರ್‌ ನಲ್ಲಿ ಟಿ20 ವಿಶ್ವಕಪ್ ಟೂರ್ನಿಯೂ ಆಯೋಜನೆಗೊಳ್ಳುತ್ತಿರುವುದರಿಂದ ಸಿದ್ಧತೆಗೆ ಸಮಯ ಬೇಕಾಗುತ್ತದೆ. ಐಪಿಎಲ್‌ನಲ್ಲಿ ಆಡುವುದರಿಂದ ಬಳಲಿಕೆಯೂ ಆಗುವುದರಿಂದ ವಿಶ್ವಕಪ್ ಟೂರ್ನಿಯಲ್ಲಿ ಆಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಕಾರಣದಿಂದಲು ಆಸ್ಟ್ರೇಲಿಯಾ ಆಟಗಾರರು ಹಿಂದೇಟು ಹಾಕುತ್ತಿದ್ದಾರೆ.

ಕೋವಿಡ್ –19 ಪ್ರಕರಣಗಳ ಹೆಚ್ಚಳದಿಂದಾಗಿ ಅಂತರರಾಷ್ಟ್ರೀಯ ಪ್ರಯಾಣ ನಿರ್ಬಂಧಗಳೂ ಇವೆ. ಅದರಿಂದಾಗಿ ಕ್ವಾರಂಟೈನ್ ನಿಯಮಗಳೂ ಕಠಿಣವಾಗಿವೆ.

‘ಆಟಗಾರರ ಮಾನಸಿಕ ಆರೋಗ್ಯ ಮತ್ತು ಹಿತಾಸಕ್ತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳಲಾಗುವುದು. ಬಯೋಬಬಲ್‌ನಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಆಟಗಾರರ ಮೇಲಾಗುವ ಪರಿಣಾಮಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಲಾಗುವುದು‘ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.

ಈ ಋತುವಿನಲ್ಲಿ ಹೆಚ್ಚು ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಗಳು ಮತ್ತು ಐಸಿಸಿ ಟೂರ್ನಿಗಳು ಇರುವ ಕಾರಣ ತಮ್ಮ ದೇಶದ ಕ್ರಿಕೆಟಿಗರು ಐಪಿಎಲ್‌ನಲ್ಲಿ ಆಡುವ ಸಾಧ್ಯತೆ ಕಡಿಮೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ನಿರ್ದೇಶಕ ಆಷ್ಲೆ ಗೈಲ್ಸ್‌ ಈಚೆಗೆ ಪ್ರಕಟಿಸಿದ್ದರು. ಇದೀಗ ಆಸ್ಟ್ರೇಲಿಯಾ ಆಟಗಾರರೂ ಗೈರಾಗುವ ಸಾಧ್ಯತೆ ಹೆಚ್ಚಿದೆ.

ಜೂನ್‌ನಲ್ಲಿ ಆಸ್ಟ್ರೇಲಿಯಾ ತಂಡವು ವೆಸ್ಟ್‌ ಇಂಡೀಸ್ ಪ್ರವಾಸ ಮಾಡಲಿದೆ. ಅದರ ನಂತರ ಅಫ್ಗಾನಿಸ್ತಾನ ವಿರುದ್ಧ ಟೆಸ್ಟ್ ಆಡಲಿದೆ. ಅದಾದ ಮೇಲೆ ಆ್ಯಷಸ್ ಸರಣಿಯಲ್ಲಿ ಆಡುವುದು.

‘ಆಗಸ್ಟ್‌ನಲ್ಲಿ ಆಸ್ಟ್ರೇಲಿಯಾ ತಂಡವು ಬಾಂಗ್ಲಾದೇಶ ಪ್ರವಾಸಕ್ಕೂ ತೆರಳುವ ಸಾಧ್ಯತೆ ಇದೆ. ಅದಿನ್ನೂ ಖಚಿತವಾಗಬೇಕಿದೆ. ಅಲ್ಲಿ ಐದು ಟಿ20 ಪಂದ್ಯಗಳ ಸರಣಿ ನಡೆಸಲು ಬಾಂಗ್ಲಾ ಕ್ರಿಕೆಟ್ ಮಂಡಳಿ ಯೋಜನೆ ರೂಪಿಸುತ್ತಿದೆ‘ ಎಂದು ಮೂಲಗಳು ತಿಳಿಸಿವೆ.

ಐಪಿಎಲ್‌ನಲ್ಲಿ ಆಸ್ಟ್ರೇಲಿಯಾದ ಒಟ್ಟು 40 ಜನರಿದ್ದಾರೆ. ಅವರಲ್ಲಿ ಆಟಗಾರರು, ನೆರವು ಸಿಬ್ಬಂದಿ ಮತ್ತು ಪ್ರಸಾರಕ ಸಂಸ್ಥೆಯವರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.