ADVERTISEMENT

ಅಲನ್ ಬಾರ್ಡರ್ ಪ್ರಶಸ್ತಿ: ಸ್ಮಿತ್ ಹಿಂದಿಕ್ಕಿ 3ನೇ ಸಲ ಪ್ರಶಸ್ತಿ ಗೆದ್ದ ವಾರ್ನರ್

ಪಿಟಿಐ
Published 10 ಫೆಬ್ರುವರಿ 2020, 14:42 IST
Last Updated 10 ಫೆಬ್ರುವರಿ 2020, 14:42 IST
ಡೇವಿಡ್ ವಾರ್ನರ್ –ಪಿಟಿಐ ಚಿತ್ರ
ಡೇವಿಡ್ ವಾರ್ನರ್ –ಪಿಟಿಐ ಚಿತ್ರ   

ಮೆಲ್ಬರ್ನ್: ರಾಷ್ಟ್ರೀಯ ತಂಡದ ಸಹ ಆಟಗಾರ ಸ್ಟೀವ್ ಸ್ಮಿತ್ ಅವರನ್ನು ಏಕೈಕ ಮತದಿಂದ ಹಿಂದಿಕ್ಕಿ ಡೇವಿಡ್ ವಾರ್ನರ್ ಸೋಮವಾರ ಆಸ್ಟ್ರೇಲಿಯಾದ ವರ್ಷದ ಕ್ರಿಕೆಟಿಗ ಪ್ರಶಸ್ತಿ ಗೆದ್ದುಕೊಂಡರು.

ಆರಂಭಿಕ ಬ್ಯಾಟ್ಸ್‌ಮನ್ ವಾರ್ನರ್ 194 ಪಾಯಿಂಟ್‌ಗಳೊಂದಿಗೆ ಮೂರನೇ ಬಾರಿ ಅಲನ್ ಬಾರ್ಡರ್ ಹೆಸರಿನ ಪ್ರಶಸ್ತಿ ಬಗಲಿಗೆ ಹಾಕಿಕೊಂಡರು. ಟೆಸ್ಟ್ ತಂಡದ ಮಾಜಿ ನಾಯಕ ಸ್ಮಿತ್ 193 ಪಾಯಿಂಟ್‌ ಗಳಿಸಿದರೆ, ಮಧ್ಯಮ ವೇಗಿ ಪ್ಯಾಟ್ ಕಮಿನ್ಸ್ 185 ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನ ಗಳಿಸಿದರು.

ಮಹಿಳಾ ಕ್ರಿಕೆಟ್ ತಂಡದ ಎಲಿಸ್ ಪೆರಿ ಎರಡನೇ ಬಾರಿ ಬೆಲಿಂದಾ ಕ್ಲಾರ್ಕ್ ಪ್ರಶಸ್ತಿ ಮುಡಿಗೇರಿಸಿಕೊಂಡರು.

ADVERTISEMENT

2018ರ ಮಾರ್ಚ್‌ನಲ್ಲಿ ಕೇಪ್‌ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಕ್ಯಾಮರೂನ್ ಬ್ಯಾಂಕ್ರಪ್ಟ್ ಜೊತೆಯಲ್ಲಿ ವಾರ್ನರ್ ಮತ್ತು ಸ್ಮಿತ್ ಮೇಲೆ ಒಂದು ವರ್ಷ ನಿಷೇಧ ಹೇರಲಾಗಿತ್ತು. ಅಂಗಳಕ್ಕೆ ಮರಳಿದ ನಂತರ ಸ್ಮಿತ್ ಮತ್ತು ವಾರ್ನರ್ ಹಿಂದಿನ ಲಯದಲ್ಲೇ ಆಡಿದ್ದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾವುಕರಾದ ವಾರ್ನರ್ ‘ಈ ವೇದಿಕೆಯಲ್ಲಿ ನಿಂತುಕೊಳ್ಳಲು ಮತ್ತು ಪ್ರತಿಷ್ಠಿತ ಪ್ರಶಸ್ತಿ ಗಳಿಸಲು ನಾನು ಯಾವ ರೀತಿಯಲ್ಲೂ ಅರ್ಹನಲ್ಲ. ಇತರ ಆಟಗಾರರು ನನಗಿಂತ ಉತ್ತಮವಾಗಿ ಆಡುತ್ತಿದ್ದಾರೆ. ಆದರೂ ನನ್ನನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಅಭಾರಿಯಾಗಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.