ಮರ್ಕರಂ ಶತಕ ವೈಭವ
ಲಾರ್ಡ್ಸ್: ಸತತ ಎರಡನೇ ಬಾರಿ ವಿಶ್ವ ಟೆಸ್ಟ್ ಚಾಂಪಿಯನ್ ಪಟ್ಟಕ್ಕೇರುವ ಆಸ್ಟ್ರೇಲಿಯಾ ತಂಡದ ಕನಸಿಗೆ ದಕ್ಷಿಣ ಆಫ್ರಿಕಾದ ಏಡನ್ ಮರ್ಕರಂ ಅಡ್ಡಿಯಾದರು. ಚೆಂದದ ಶತಕ ಬಾರಿಸಿದ ಮರ್ಕರಂ ತಮ್ಮ ತಂಡವನ್ನು ಗೆಲುವಿನ ಸನಿಹ ತಂದು ನಿಲ್ಲಿಸಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಬೀಸಾಟಕ್ಕೆ ಹೆಸರಾದ ಬ್ಯಾಟರ್ ಮರ್ಕರಂ (ಬ್ಯಾಟಿಂಗ್ 102; 159ಎ, 4X11) ಟೆಸ್ಟ್ ಕ್ರಿಕೆಟ್‌ಗೂ ತಾವು ಸೈ ಎಂಬುದನ್ನು ಸಾಬೀತು ಮಾಡಿದರು. ಲಾರ್ಡ್ಸ್ ಅಂಗಳದಲ್ಲಿ ನಡೆಯುತ್ತಿರುವ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಜಯಿಸಲು ದಕ್ಷಿಣ ಆಫ್ರಿಕಾ ತಂಡಕ್ಕೆ 69 ರನ್‌ಗಳಷ್ಟೇ ಬೇಕಿವೆ. ಅದೇ ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾವು ಗೆಲ್ಲಬೇಕೆಂದರೆ ಇನ್ನೂ 8 ವಿಕೆಟ್‌ಗಳನ್ನು ಗಳಿಸಿ ದಕ್ಷಿಣ ಆಫ್ರಿಕಾವನ್ನು ತಡೆಯಬೇಕು.
ಪಂದ್ಯದ ಮೂರನೇ ದಿನವಾದ ಶುಕ್ರವಾರ ಆಸ್ಟ್ರೇಲಿಯಾ ತಂಡವು ಒಡ್ಡಿದ 282 ರನ್‌ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ದಿನದಾಟದ ಕೊನೆಯಲ್ಲಿ 54 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 213 ರನ್ ಗಳಿಸಿತು. ಮರ್ಕರಂ ಮತ್ತು ನಾಯಕ ತೆಂಬಾ ಬವುಮಾ (ಬ್ಯಾಟಿಂಗ್ 60 ) ಅವರು ಮುರಿಯದ ಮೂರನೇ ವಿಕೆಟ್ ಜೊತೆಯಾಟದಲ್ಲಿ ಸೇರಿಸಿದ 143 ರನ್‌ಗಳಿಂದಾಗಿ ತಂಡವು ಗೆಲುವಿನ ಹಾದಿಯಲ್ಲಿದೆ.
ಸ್ಟಾರ್ಕ್ ಅರ್ಧಶತಕ: ಬಾಲಂಗೋಚಿ ಬ್ಯಾಟರ್ ಮಿಚೆಲ್ ಸ್ಟಾರ್ಕ್ (ಅಜೇಯ 58; 136ಎಸೆತ) ಅವರ ವಿರೋಚಿತ ಬ್ಯಾಟಿಂಗ್‌ನಿಂದಾಗಿ ಆಸ್ಟ್ರೇಲಿಯಾ ತಂಡವು ಎರಡನೇ ಇನಿಂಗ್ಸ್‌ನಲ್ಲಿ 65 ಓವರ್ ಗಳಲ್ಲಿ 207 ರನ್ ಗಳಿಸಿತು. ಮೊದಲ ಇನಿಂಗ್ಸ್‌ನಲ್ಲಿ ತಂಡವು 74 ರನ್‌ಗಳ ಮುನ್ನಡೆ ಸಾಧಿಸಿತ್ತು. ಇದರಿಂದಾಗಿ ಗೆಲುವಿನ ವಿಶ್ವಾಸದಲ್ಲಿತ್ತು.
ಅದಕ್ಕೆ ತಕ್ಕಂತೆ ಸ್ಟಾರ್ಕ್ ಅವರು ಬೌಲಿಂಗ್‌ನಲ್ಲಿಯೂ ಮಿಂಚಿದರು. ರಿಯಾನ್ ರಿಕೆಲ್ಟನ್ ಮತ್ತು ವಿಯಾನ್ ಮಲ್ದರ್ ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ಆಗ ದಕ್ಷಿಣ ಆಫ್ರಿಕಾ ತಂಡವು 70 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಆತಂಕದಲ್ಲಿತ್ತು.
ಈ ಹಂತದಲ್ಲಿ ಆತ್ಮವಿಶ್ವಾಸದಿಂದ ಆಡುತ್ತಿದ್ದ ಮರ್ಕರಂ ಅವರೊಂದಿಗೆ ಸೇರಿಕೊಂಡರು. ಇಬ್ಬರೂ ಸೇರಿ ಬೌಲರ್‌ಗಳಿಗೆ ಬೆವರಿಳಿಸಿದರು. ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಹಾಗೂ ಸ್ಪಿನ್ನರ್ ನೇಥನ್ ಲಯನ್ ಅವರ ಉತ್ತಮ ಎಸೆತಗಳಿಗೆ ತಕ್ಕ ಉತ್ತರ ನೀಡುವಲ್ಲಿ ಯಶಸ್ವಿಯಾದರು.
ಸಂಕ್ಷಿಪ್ತ ಸ್ಕೋರು:
ಮೊದಲ ಇನಿಂಗ್ಸ್: ದಕ್ಷಿಣ ಆಫ್ರಿಕಾ: 57.1 ಓವರ್‌ಗಳಲ್ಲಿ 138. ಆಸ್ಟ್ರೇಲಿಯಾ: 56.4 ಓವರ್‌ಗಳಲ್ಲಿ 212.
ಎರಡನೇ ಇನಿಂಗ್ಸ್: ಆಸ್ಟ್ರೇಲಿಯಾ: 65 ಓವರ್‌ಗಳಲ್ಲಿ 207 (ಮಿಚೆಲ್ ಸ್ಟಾರ್ಕ್ ಔಟಾಗದೇ 58, ಜೋಶ್ ಹ್ಯಾಜಲ್‌ವುಡ್ 17, ಕಗಿಸೊ ರಬಾಡ 59ಕ್ಕೆ4, ಲುಂಗಿ ಎನ್‌ಗಿಡಿ 38ಕ್ಕೆ3) ದಕ್ಷಿಣ ಆಫ್ರಿಕಾ: 56 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 213 (ಏಡನ್ ಮರ್ಕರಂ ಬ್ಯಾಟಿಂಗ್ 102, ವಿಯಾನ್ ಮಲ್ದರ್ 27, ತೆಂಬಾ ಬವುಮಾ ಬ್ಯಾಟಿಂಗ್ 65, ಮಿಚೆಲ್ ಸ್ಟಾರ್ಕ್ 53ಕ್ಕೆ2)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.