ADVERTISEMENT

ಇನಿಂಗ್ಸ್‌ ಮುನ್ನಡೆಗಾಗಿ ಹೋರಾಟ

ರಣಜಿ: ಕರ್ನಾಟಕ 400 ರನ್‌, ಮುಂಬೈ ಉತ್ತಮ ಆರಂಭ, ಶಿವಂ ದುಬೆಗೆ ಏಳು ವಿಕೆಟ್

ಪ್ರಮೋದ ಜಿ.ಕೆ
Published 21 ನವೆಂಬರ್ 2018, 18:47 IST
Last Updated 21 ನವೆಂಬರ್ 2018, 18:47 IST
ಬೆಳಗಾವಿಯಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಬುಧವಾರ ಶ್ರೇಯಸ್ ಗೋಪಾಲ್‌ ಬ್ಯಾಟಿಂಗ್‌ ಮಾಡುವಾಗ ಮುಂಬೈ ತಂಡದ ನಾಯಕ ಧವಳ್‌ ಕುಲಕರ್ಣಿ ಹಾಗೂ ವಿಕೆಟ್‌ ಕೀಪರ್‌ ಆದಿತ್ಯ ತಾರೆ ಎಲ್‌ಬಿಗೆ ಅಂಪೈರ್‌ಗೆ ಮನವಿ ಸಲ್ಲಿಸಿದ ಕ್ಷಣ –ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್
ಬೆಳಗಾವಿಯಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಬುಧವಾರ ಶ್ರೇಯಸ್ ಗೋಪಾಲ್‌ ಬ್ಯಾಟಿಂಗ್‌ ಮಾಡುವಾಗ ಮುಂಬೈ ತಂಡದ ನಾಯಕ ಧವಳ್‌ ಕುಲಕರ್ಣಿ ಹಾಗೂ ವಿಕೆಟ್‌ ಕೀಪರ್‌ ಆದಿತ್ಯ ತಾರೆ ಎಲ್‌ಬಿಗೆ ಅಂಪೈರ್‌ಗೆ ಮನವಿ ಸಲ್ಲಿಸಿದ ಕ್ಷಣ –ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್   

ಬೆಳಗಾವಿ: ಹಸಿರಿನಿಂದ ಕಂಗೊಳಿಸುತ್ತಿರುವ ಇಲ್ಲಿನ ಸುಂದರ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ರಣಜಿ ಪಂದ್ಯವಾಡುತ್ತಿರುವ ಕರ್ನಾಟಕ ತಂಡ ಮುಂಬೈ ವಿರುದ್ಧ ಇನಿಂಗ್ಸ್‌ ಮುನ್ನಡೆಗಾಗಿ ಹೋರಾಟ ನಡೆಸುತ್ತಿದೆ.

ಭರವಸೆಯ ಹೊಸ ಪ್ರತಿಭೆ ಕೆ.ವಿ. ಸಿದ್ದಾರ್ಥ್‌ ಮೊದಲ ದಿನದಾಟದಲ್ಲಿ ಗಳಿಸಿದ್ದ ಶತಕದಿಂದ ರಾಜ್ಯ ತಂಡ ಉತ್ತಮ ಮೊತ್ತ ಕಲೆಹಾಕಿತ್ತು. ಅವರ ಸೊಬಗಿನ ಬ್ಯಾಟಿಂಗ್ ಎರಡನೇ ದಿನವೂ ಮುಂದುವರಿಯಿತು. ಇದರಿಂದ ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 129.4 ಓವರ್‌ಗಳಲ್ಲಿ 400 ರನ್ ಗಳಿಸಿದೆ.

ಎದುರಾಳಿ ಮುಂಬೈ ತಂಡ ಕೂಡ ಉತ್ತಮ ಆರಂಭ ಪಡೆದಿದ್ದು ಬುಧವಾರದ ಅಂತ್ಯಕ್ಕೆ 36.5 ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು 99 ರನ್‌ ಕಲೆಹಾಕಿದೆ. ಇನಿಂಗ್ಸ್‌ ಮುನ್ನಡೆಗೆ 302 ರನ್‌ ಅಗತ್ಯವಿದೆ.

ADVERTISEMENT

ಹಿಂದಿನ ಪಂದ್ಯಗಳಲ್ಲಿ ಕರ್ನಾಟಕ ತಂಡ ವಿದರ್ಭ ಮೇಲೂ, ಮುಂಬೈ ತಂಡ ರೈಲ್ವೆಸ್‌ ವಿರುದ್ಧವೂ ಇನಿಂಗ್ಸ್‌ ಮುನ್ನಡೆ ಪಡೆದು ತಲಾ ಮೂರು ಪಾಯಿಂಟ್ಸ್‌ ಗಳಿಸಿದ್ದವು. ಆದ್ದರಿಂದ ಉಭಯ ತಂಡಗಳು ಈ ಬಾರಿಯ ಟೂರ್ನಿಯಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿವೆ. ಎರಡು ದಿನಗಳ ಆಟ ಬಾಕಿ ಉಳಿದಿದೆ.

ಮಂಗಳವಾರದ ಅಂತ್ಯಕ್ಕೆ 88 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು 263 ರನ್‌ ಗಳಿಸಿದ್ದ ಕರ್ನಾಟಕ ಎರಡನೇ ದಿನದ ಮೊದಲ ಅವಧಿಯಲ್ಲಿ ರನ್ ಗಳಿಸಲು ಪರದಾಡಿತು. ದಿನದಾಟದ ಮೊದಲ 15 ಓವರ್‌ಗಳಲ್ಲಿ 18 ರನ್‌ ಮಾತ್ರ ಗಳಿಸಿದ್ದು ಇದಕ್ಕೆ ಸಾಕ್ಷಿ. ನಂತರ ನಿಧಾನವಾಗಿ ರನ್‌ ವೇಗ ಹೆಚ್ಚಿಸಿಕೊಂಡಿತು. ಒಟ್ಟು 299 ಎಸೆತಗಳನ್ನು ಎದುರಿಸಿದ ಸಿದ್ದಾರ್ಥ್‌ 161 ರನ್ ಗಳಿಸಿದರು. 19 ಬೌಂಡರಿ ಮತ್ತು ಎರಡು ಸಿಕ್ಸರ್‌ ಬಾರಿಸಿದರು.

47 ರನ್‌ ಗಳಿಸಿದ್ದ ಶ್ರೇಯಸ್‌ ಗೋಪಾಲ್‌ ಬುಧವಾರ ಒಂದು ರನ್‌ ಗಳಿಸಿ ಧವಳ್‌ ಕುಲಕರ್ಣಿ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಬಿ.ಆರ್. ಶರತ್ ಕೂಡ ರನ್‌ ಖಾತೆ ಆರಂಭಿಸುವ ಮೊದಲೇ ಪೆವಿಲಿಯನ್‌ ಸೇರಿದರು. ನಂತರ ಕ್ರೀಸ್‌ಗೆ ಬಂದ ಜೆ. ಸುಚಿತ್ ರನ್ ಗಳಿಸಲು ಪ್ರಯಾಸಪಟ್ಟರು. 86 ಎಸೆತಗಳಲ್ಲಿ 30 ರನ್‌ ಗಳಿಸಿದರು. ಎದುರಿಸಿದ 50ನೇ ಎಸೆತದಲ್ಲಿ ಮೊದಲ ಬೌಂಡರಿ ಬಾರಿಸಿದರು! ಇನ್ನೊಂದೆಡೆ ಸಿದ್ದಾರ್ಥ್‌ ರನ್ ವೇಗ ಹೆಚ್ಚಿಸುತ್ತ ಆಡಿದರು. ಈ ಜೋಡಿ ಏಳನೇ ವಿಕೆಟ್‌ ಜೊತೆಯಾಟದಲ್ಲಿ 84 ರನ್‌ ಕಲೆಹಾಕಿದ್ದು ತಂಡದ ವಿಶ್ವಾಸ ಹೆಚ್ಚಿಸಿತು.

ಅಬ್ಬರಿಸಿದ ಮಿಥುನ್‌: ಬಾಲಂಗೋಚಿ ಅಭಿಮನ್ಯು ಮಿಥುನ್ ಮುಂಬೈ ಬೌಲರ್‌ಗಳ ಬೆವರಿಳಿಸಿದರು. 29 ಎಸೆತಗಳಿಂದ 34 ರನ್‌ ಗಳಿಸಿದರು. ಇದರಲ್ಲಿ ಬೌಂಡರಿ (6) ಮತ್ತು ಒಂದು ಸಿಕ್ಸರ್‌ನಿಂದ 30 ರನ್‌ ಬಂದವು. ಆಲಮ್ ಬೌಲಿಂಗ್‌ನಲ್ಲಿ ನಾಲ್ಕು ಬೌಂಡರಿ ಹೊಡೆದಾಗ ಕುಂದಾನಗರಿಯ ಕ್ರಿಕೆಟ್‌ ಪ್ರೇಮಿಗಳು ಸಂಭ್ರಮಿಸಿದರು.

ದುಬೆ ಮಿಂಚು: ಮೊದಲ ದಿನ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದ ವೇಗಿ ಶಿವಂ ದುಬೆ ಒಟ್ಟು ಏಳು ವಿಕೆಟ್‌ ಪಡೆದು ಮುಂಬೈ ಪಾಲಿಗೆ ಹೀರೊ ಎನಿಸಿಕೊಂಡರು.

ಎರಡು ಕ್ಯಾಚ್‌ ಬಿಟ್ಟ ಕರ್ನಾಟಕ: ಮುಂಬೈ ತಂಡಕ್ಕೆ ಆರಂಭದಲ್ಲಿಯೇ ಆಘಾತ ನೀಡಲು ರಾಜ್ಯ ತಂಡಕ್ಕೆ ಅವಕಾಶವಿತ್ತು. ಆದರೆ, ಎರಡು ಕ್ಯಾಚ್‌ಗಳನ್ನು ಬಿಟ್ಟ ಕಾರಣ ಕೊನೆಯಲ್ಲಿ ಕೈ ಕೈ ಹಿಸುಕಿಕೊಳ್ಳುವಂತಾಯಿತು.

ಆರಂಭಿಕ ಬ್ಯಾಟ್ಸ್‌ಮನ್ ಜಯ್ ಬಿಸ್ತಾ 34 ರನ್ ಗಳಿಸಿದ್ದ ವೇಳೆ 17ನೇ ಓವರ್‌ನಲ್ಲಿ ಮಿಥುನ್ ಬೌಲಿಂಗ್‌ನಲ್ಲಿ ವಿಕೆಟ್‌ ಕೀಪರ್‌ ಬಿ.ಆರ್. ಶರತ್‌ ಚೆಂಡು ಕೈ ಚೆಲ್ಲಿದರು. ಇದೇ ಅವಕಾಶ ಬಳಸಿಕೊಂಡ ಬಿಸ್ತಾ 69 ರನ್‌ ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಆಶಯ್‌ ಸರ್ದೇಸಾಯಿ ರನ್‌ ಖಾತೆ ಆರಂಭಿಸುವ ಮೊದಲೇ ಮಿಥುನ್ ಬೌಲಿಂಗ್‌ನಲ್ಲಿ ಎರಡನೇ ಸ್ಲಿಪ್‌ನಲ್ಲಿದ್ದ ಮೀರ್ ಕೌನೇನ್‌ ಅಬ್ಬಾಸ್‌ ಕೈಗೆ ನೀಡಿದ್ದರು. ಇದನ್ನು ಹಿಡಿತಕ್ಕೆ ಪಡೆಯುವಲ್ಲಿ ವಿಫಲರಾದರು.

ಎರಡು ಕ್ಯಾಚ್‌ ಬಿಟ್ಟ ಕರ್ನಾಟಕ

ಮುಂಬೈ ತಂಡಕ್ಕೆ ಆರಂಭದಲ್ಲಿಯೇ ಆಘಾತ ನೀಡಲು ರಾಜ್ಯ ತಂಡಕ್ಕೆ ಅವಕಾಶವಿತ್ತು. ಆದರೆ, ಎರಡು ಕ್ಯಾಚ್‌ಗಳನ್ನು ಬಿಟ್ಟ ಕಾರಣ ಕೊನೆಯಲ್ಲಿ ಕೈ ಕೈ ಹಿಸುಕಿಕೊಳ್ಳುವಂತಾಯಿತು.

ಆರಂಭಿಕ ಬ್ಯಾಟ್ಸ್‌ಮನ್ ಜಯ್ ಬಿಸ್ತಾ 34 ರನ್ ಗಳಿಸಿದ್ದ ವೇಳೆ 17ನೇ ಓವರ್‌ನಲ್ಲಿ ಮಿಥುನ್ ಬೌಲಿಂಗ್‌ನಲ್ಲಿ ವಿಕೆಟ್‌ ಕೀಪರ್‌ ಬಿ.ಆರ್. ಶರತ್‌ ಚೆಂಡು ಕೈ ಚೆಲ್ಲಿದರು. ಇದೇ ಅವಕಾಶ ಬಳಸಿಕೊಂಡ ಬಿಸ್ತಾ 69 ರನ್‌ ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಆಶಯ್‌ ಸರ್ದೇಸಾಯಿ ರನ್‌ ಖಾತೆ ಆರಂಭಿಸುವ ಮೊದಲೇ ಮಿಥುನ್ ಬೌಲಿಂಗ್‌ನಲ್ಲಿ ಎರಡನೇ ಸ್ಲಿಪ್‌ನಲ್ಲಿದ್ದ ಮೀರ್ ಕೌನೇನ್‌ ಅಬ್ಬಾಸ್‌ ಕೈಗೆ ನೀಡಿದ್ದರು. ಇದನ್ನು ಹಿಡಿತಕ್ಕೆ ಪಡೆಯುವಲ್ಲಿ ವಿಫಲರಾದರು. ಈ ಅವಕಾಶ ಬಳಸಿಕೊಂಡು ಆಶಯ್‌ 23 ರನ್ ಗಳಿಸಿ ದಿನದಾಟದ ಕೊನೆಯಲ್ಲಿ ಔಟಾದರು.

ಮೊದಲ ಅವಧಿ ಮಹತ್ವ: ಉತ್ತಮ ಆರಂಭ ಪಡೆದಿರುವ ಮುಂಬೈ ತಂಡವನ್ನು ಬೇಗನೆ ಕಟ್ಟಿಹಾಕಬೇಕಾದ ಸವಾಲು ಕರ್ನಾಟಕದ ಬೌಲರ್‌ಗಳ ಮುಂದಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.