ADVERTISEMENT

ಕುಸ್ತಿಪಟು ದೀಪಕ್‌ ಪುನಿಯಾಗೆ ಕೋವಿಡ್

ಪಿಟಿಐ
Published 3 ಸೆಪ್ಟೆಂಬರ್ 2020, 15:46 IST
Last Updated 3 ಸೆಪ್ಟೆಂಬರ್ 2020, 15:46 IST
ದೀಪಕ್ ಪುನಿಯಾ
ದೀಪಕ್ ಪುನಿಯಾ   

ನವದೆಹಲಿ: ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನ ಬೆಳ್ಳಿ ಪದಕ ವಿಜೇತ ದೀಪಕ್ ಪುನಿಯಾ ಸೇರಿದಂತೆ ಮೂವರು ಹಿರಿಯ ಕುಸ್ತಿಪಟುಗಳಿಗೆ ಕೋವಿಡ್ –19 ಸೋಂಕು ಇರುವುದು ಗುರುವಾರ ಖಚಿತವಾಗಿದೆ.

ಒಲಿಂಪಿಕ್ಸ್‌ಗೆ ತೆರಳಲು ಸಿದ್ಧತೆ ನಡೆಸುತ್ತಿರುವ ದೀಪಕ್ (86 ಕೆ.ಜಿ) ಮತ್ತು ಇನ್ನಿಬ್ಬರು ಕುಸ್ತಿಪಟುಗಳಾದ ನವೀನ್ (65 ಕೆ.ಜಿ) ಮತ್ತು ಕೃಷನ್ (125 ಕೆ.ಜಿ) ಅವರಿಗೆ ಸೋಂಕು ತಗುಲಿರುವುದು ಪರೀಕ್ಷೆಗಳಿಗೆ ಖಚಿತಪಟ್ಟಿದೆ.

ಸೋನೆಪತ್‌ನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಶಿಬಿರದಲ್ಲಿ ಈ ಮೂವರೂ ಇದ್ದರು.

ADVERTISEMENT

‘ಪುರುಷರ ವಿಭಾಗದ ಮೂವರು ಕುಸ್ತಿಪಟುಗಳಿಗೆ ಸೋಂಕು ತಗುಲಿದೆ’ ಎಂದುಸಾಯ್‌ನ ನೋಡಲ್ ಅಧಿಕಾರಿಗಳು ಪ್ರಕಟಣೆ ನೀಡಿದ್ದಾರೆ.

ಸಾಯ್‌ ಮಾನ್ಯತೆ ಹೊಂದಿರುವ ಆಸ್ಪತ್ರೆಗೆ ಮೂವರನ್ನೂ ದಾಖಲಿಸಲಾಗಿದೆ.

‘ನನಗೆ ಯಾವುದೇ ರೀತಿಯ ರೋಗಲಕ್ಷಣಗಳಿಲ್ಲ. ಅಸ್ವಸ್ಥವಾಗಿರುವ ಯಾವ ಅನುಭವವೂ ನನಗಾಗಿಲ್ಲ. ಪೂರ್ಣ ಆರೋಗ್ಯವಂತನಾಗಿದ್ದೇನೆ. ಆದರೆ ನನ್ನಲ್ಲಿ ಸೋಂಕು ಇದೆಯೆಂದು ಹೇಳುತ್ತಿರುವುದು ಹೇಗೋ ತಿಳಿಯುತ್ತಿಲ್ಲ. ಆದರೆ ಇದರಿಂದ ನಾನು ವಿಚಲಿತನಾಗಿಲ್ಲ’ ಎಂದು ದೀಪಕ್ ಪುನಿಯಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಸಾಯ್‌ಗೆ ಬಂದಿಳಿದಿರುವ ಎಲ್ಲ ಕುಸ್ತಿಪಟುಗಳ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಹೊಸ ಮಾರ್ಗಸೂಚಿಗಳನ್ವಯ ಎಲ್ಲ ವ್ಯವಸ್ಥೆಗಳನ್ನೂ ನಿರ್ವಹಿಸಲಾಗುತ್ತಿದೆ. ಕುಸ್ತಿಪಟುಗಳು, ಕೋಚ್‌ ಮತ್ತು ನೆರವು ಸಿಬ್ಬಂದಿಗೆ ಆರ್‌ಟಿ–ಪಿಸಿ ಆರ್‌ ಪರೀಕ್ಷೆಗಳನ್ನು ಕಡ್ಡಾಯವಾಗಿ ಮಾಡಲಾಗಿದೆ.

‘ಎರಡು ದಿನಗಳ ನಂತರ ಮೂವರನ್ನು ಮತ್ತೊಮ್ಮೆ ಪರೀಕ್ಷೆಗೊಳಪಡಿಸಲಾಗುವುದು. ಅವರ ವರದಿಯು ನೆಗೆಟಿವ್ ಎಂದು ಬಂದರೆ ಮರಳಿ ಸಾಯ್‌ಗೆ ಕರೆತರುತ್ತೇವೆ’ ಎಂದು ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಹೇಳಿದ್ದಾರೆ.

‘ ಈ ಪ್ರಕರಣದಿಂದ ಶಿಬಿರಕ್ಕೆ ಯಾವುದೇ ಆತಂಕವಿಲ್ಲ. ಯೋಜನೆಯಂತೆಯೇ ಶಿಬಿರ ಮುಂದುವರಿಯುವುದು. ಎಲ್ಲ ಕುಸ್ತಿಪಟುಗಳು 14 ದಿನಗಳ ಪ್ರತ್ಯೇಕವಾಸ ಮುಗಿಸಿದ ನಂತರ ತರಬೇತಿ ಶಿಬಿರದಲ್ಲಿ ಭಾಗವಹಿಸುವರು’ ಎಂದು ತೋಮರ್ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.