ದುಬೈ (ಪಿಟಿಐ): ಭಾರತದ ದೀಪ್ತಿ ಶರ್ಮಾ, ಐಸಿಸಿ ಮಹಿಳಾ ಟಿ20 ರ‍್ಯಾಂಕಿಂಗ್‌ನ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದತ್ತ ದಾಪುಗಾಲಿಟ್ಟಿದ್ದಾರೆ. ಮಂಗಳವಾರ ಪ್ರಕಟವಾದ ಕ್ರಮಾಂಕಪಟ್ಟಿಯಲ್ಲಿ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್‌ಲ್ಯಾಂಡ್ ಮೊದಲ ಬಾರಿ ಅಗ್ರಸ್ಥಾನಕ್ಕೇರಿದ್ದಾರೆ.
ಬ್ಯಾಟರ್‌ಗಳ ಪಟ್ಟಿಯಲ್ಲಿ ಸ್ಮೃತಿ ಮಂದಾನ ಎರಡನೇ ಸ್ಥಾನಕ್ಕಿಳಿದಿದ್ದಾರೆ. ಅವರು ಪಾಕಿಸ್ತಾನದ ಸಾದಿಯಾ ಇಕ್ಬಾಲ್ ಜೊತೆ ಈ ಸ್ಥಾನ ಹಂಚಿಕೊಂಡಿದ್ದಾರೆ.
ಐರ್ಲೆಂಡ್ ವಿರುದ್ಧ ಸರಣಿಯಲ್ಲಿ ಬರೇ ಮೂರು ವಿಕೆಟ್ ಪಡೆದ ಕಾರಣ ಸಾದಿಯಾ ಎರಡನೇ ಸ್ಥಾನಕ್ಕಿಳಿದಿದ್ದಾರೆ. ಆ ಸರಣಿಯನ್ನು ಐರ್ಲೆಂಡ್ 2–1 ರಿಂದ ಜಯಿಸಿತ್ತು.
ಮಾರ್ಚ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ 4 ವಿಕೆಟ್ ಪಡೆದ ನಂತರ ಸದರ್‌ಲ್ಯಾಂಡ್ ಯಾವುದೇ ಚುಟುಕು ಕ್ರಿಕೆಟ್ ಆಡಿಲ್ಲ. ಆದರೆ ಅವರ ಸಮೀಪ ಇದ್ದ ಇತರ ಬೌಲರ್‌ಗಳು ರ‍್ಯಾಂಕಿಂಗ್ ಪಾಯಿಂಟ್ಸ್ ಕಳೆದುಕೊಂಡಿದ್ದಾರೆ.
ಟಿ20 ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ದೀಪ್ತಿ 387 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿ ಉಳಿದುಕೊಂಡಿದ್ದಾರೆ. ವೆಸ್ಟ್ ಇಂಡೀಸ್‌ನ ಹೇಲಿ ಮ್ಯಾಥ್ಯೂಸ್ (505) ಮತ್ತು ನ್ಯೂಜಿಲೆಂಡ್‌ನ ಅಮೇಲಿಯಾ ಕೆರ್ (434) ಕ್ರಮವಾಗಿ ಮೊದಲ ಎರಡು ಸ್ಥಾನಗಳಲ್ಲಿ ಇದ್ದಾರೆ.
ಬ್ಯಾಟರ್‌ಗಳ ಪಟ್ಟಿಯಲ್ಲಿ, ಆಕರ್ಷಕ ಎಡಗೈ ಆಟಗಾರ್ತಿ ಮಂದಾನ 728 ರೇಟಿಂಗ್ ಪಾಯಿಂಟ್ಸ್ ಸಂಗ್ರಹಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ನ್ಯಾಟ್ ಶಿವರ್ ಬ್ರಂಟ್ (731) ಅಗ್ರಸ್ಥಾನಕ್ಕೇರಿದ್ದಾರೆ.
ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ 10 ಸ್ಥಾನಗಳಷ್ಟು ಬಡ್ತಿ ಪಡೆದಿದ್ದು ಅಗ್ರ 10ರ ಹತ್ತಿರದಲ್ಲಿದ್ದಾರೆ. ಅವರು 11ನೇ ಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.