ನವದೆಹಲಿ (ಪಿಟಿಐ): ಅಮೋಘ ಲಯದಲ್ಲಿರುವ ಕರ್ನಾಟಕದ ಜೋಡಿ ಕೆ.ಎಲ್. ರಾಹುಲ್ ಮತ್ತು ಕರುಣ್ ನಾಯರ್ ಅವರು ಪ್ರತಿನಿಧಿಸುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬುಧವಾರ ರಾಜಸ್ಥಾನ ರಾಯಲ್ಸ್ ಎದುರು ಕಣಕ್ಕಿಳಿಯಲಿದೆ.
ಟೂರ್ನಿಯ ಆರಂಭದ ನಾಲ್ಕು ಪಂದ್ಯಗಳಲ್ಲಿ ಜಯಿಸಿದ್ದ ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ ತಂಡವು 5ನೇ ಹಣಾಹಣಿಯಲ್ಲಿ ಮುಂಬೈ ಇಂಡಿಯನ್ಸ್ ಎದುರು ಮಣಿದಿತ್ತು. ರಾಜಸ್ಥಾನ ತಂಡವು ಸದ್ಯ ಉತ್ತಮ ಲಯದಲ್ಲಿ ಇಲ್ಲ. ಇದುವರೆಗೆ ಆಡಿರುವ ಆರು ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಜಯಿಸಿದೆ. ನಾಲ್ಕರಲ್ಲಿ ಸೋತಿದೆ. ಆದ್ದರಿಂದ ಗೆಲುವಿನ ಹಾದಿಗೆ ಮರಳುವ ಒತ್ತಡದಲ್ಲಿರುವ ಸಂಜು ಸ್ಯಾಮ್ಸನ್ ನಾಯಕತ್ವದ ಬಳಗವನ್ನು ಸೋಲಿಸುವ ವಿಶ್ವಾಸದಲ್ಲಿ ಡೆಲ್ಲಿ ಇದೆ.
ಮುಂಬೈ ಎದುರಿನ ಪಂದ್ಯದಲ್ಲಿ ಇಂಪ್ಯಾಕ್ಟ್ ಸಬ್‌ಸ್ಟಿಟ್ಯೂಟ್ ಆಗಿ ಆಡಿದ ಡೆಲ್ಲಿಯ ಕರುಣ್, ಮಿಂಚಿನ ಅರ್ಧಶತಕ ಬಾರಿಸಿದ್ದರು. ಪ್ರಸ್ತುತ ಟೂರ್ನಿಯಲ್ಲಿ ತಮಗೆ ಸಿಕ್ಕ ಚೊಚ್ಚಲ ಅವಕಾಶದಲ್ಲಿ ಮಿಂಚಿದ್ದರು. ಆ ಪಂದ್ಯದಲ್ಲಿ 206 ರನ್‌ಗಳ ಗುರಿ ಬೆನ್ನಟ್ಟಿದ್ದ ಡೆಲ್ಲಿ ಮೊದಲ ಹತ್ತು ಓವರ್‌ಗಳಲ್ಲಿ 1 ವಿಕೆಟ್‌ಗೆ 119 ರನ್ ಗಳಿಸಿತ್ತು. ಅದರಿಂದಾಗಿ ತಂಡವು ಸುಲಭ ಜಯ ಸಾಧಿಸುವ ನಿರೀಕ್ಷೆ ಮೂಡಿತ್ತು. ಇದೇ ಹಂತದಲ್ಲಿ ಇದ್ದಕ್ಕಿದಂತೆಯೇ ತಂಡವು ನಾಟಕೀಯ ರೀತಿಯಲ್ಲಿ ಕುಸಿದಿತ್ತು. ಇನಿಂಗ್ಸ್‌ನ ನಿರ್ಣಾಯಕ ಓವರ್‌ನಲ್ಲಿ ಮೂರು ಬ್ಯಾಟರ್‌ಗಳು ರನ್‌ಔಟ್ ಆದರು. ಅದರಿಂದಾಗಿ 193 ರನ್‌ಗಳಿಗೆ ತಂಡವು ಆಲೌಟ್ ಆಯಿತು.
ಎರಡು ದಿನಗಳ ಹಿಂದಿನ ಸೋಲು ಮರೆತು ಜಯದತ್ತ ಹೆಜ್ಜೆ ಹಾಕುವ ವಿಶ್ವಾಸದಲ್ಲಿ ತಂಡವಿದೆ. ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್ ಮತ್ತು 20 ವರ್ಷ ವಯಸ್ಸಿನ ವಿಪ್ರಜ್ ನಿಗಮ್ ಅವರೇ ಡೆಲ್ಲಿ ಬೌಲಿಂಗ್‌ನ ಶಕ್ತಿಯಾಗಿದ್ದಾರೆ. ನಾಯಕ ಅಕ್ಷರ್ ಅವರು ಇನ್ನೂ ತಮ್ಮ ನೈಜ ಲಯಕ್ಕೆ ಮರಳಬೇಕಿದೆ. ಕಳೆದ ಆರು ಪಂದ್ಯಗಳಲ್ಲಿ ಅಕ್ಷರ್ ಅವರು 14 ಓವರ್ ಬೌಲಿಂಗ್ ಮಾಡಿದ್ದಾರೆ. ಒಂದೂ ವಿಕೆಟ್ ಪಡೆದಿಲ್ಲ. 10ಕ್ಕಿಂತ ಕಡಿಮೆ ಇಕಾನಮಿ ಅವರದ್ದಾಗಿದೆ.
ಬ್ಯಾಟಿಂಗ್‌ನಲ್ಲಿ ಆರಂಭಿಕ ಆಟಗಾರ ಜೇಕ್ ಫ್ರೆಸರ್ ಮೆಕ್‌ಗುರ್ಕ್ ಈ ಬಾರಿ ಅಷ್ಟೇನೂ ಅಬ್ಬರಿಸುತ್ತಿಲ್ಲ. ರಾಹುಲ್, ಆಶುತೋಷ್ ಶರ್ಮಾ, ಟ್ರಿಸ್ಟನ್ ಸ್ಟಬ್ಸ್ ಅವರಿಂದಾಗಿ ಮಧ್ಯಮ ಕ್ರಮಾಂಕ ಉತ್ತಮವಾಗಿದೆ.
ಯಶಸ್ವಿ ಜೈಸ್ವಾಲ್ ಅವರು ಈಚೆಗೆ ಆರ್‌ಸಿಬಿ ಎದುರು ಚೆಂದದ ಅರ್ಧಶತಕ ಗಳಿಸಿದ್ದರು. ಅದರಿಂದಾಗಿ ರಾಯಲ್ಸ್ ತಂಡದ ಬ್ಯಾಟಿಂಗ್ ಪಡೆಗೆ ವಿಶ್ವಾಸ ಹೆಚ್ಚಿದೆ. ರಿಯಾನ್ ಪರಾಗ್, ಸಂಜು, ನಿತೀಶ್ ರಾಣಾ, ಧ್ವುವ ಜುರೇಲ್ ಅವರೂ ಮಿಂಚಿದರೆ ತಂಡಕ್ಕೆ ಸೋಲಿನ ಸರಪಳಿ ಕಳಚಿಕೊಳ್ಳುವುದು ಸಾಧ್ಯವಾಗಬಹುದು. ವೇಗಿ ಜೋಫ್ರಾ ಆರ್ಚರ್, ಸಂದೀಪ್ ಶರ್ಮಾ, ವಣಿಂದು ಹಸರಂಗಾ ಅವರು ಬೌಲಿಂಗ್ ವಿಭಾಗದ ಶಕ್ತಿಯಾಗಿದ್ದಾರೆ.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊ ಹಾಟ್‌ಸ್ಟಾರ್ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.