ADVERTISEMENT

ದೇವದತ್ತ–ಕರುಣ್ ಜೊತೆಯಾಟಕ್ಕೆ ಕೇರಳ ಸುಸ್ತು

ಪಿಟಿಐ
Published 26 ಡಿಸೆಂಬರ್ 2025, 15:34 IST
Last Updated 26 ಡಿಸೆಂಬರ್ 2025, 15:34 IST
ಕರುಣ್ ನಾಯರ್
ಕರುಣ್ ನಾಯರ್   

ಅಹಮದಾಬಾದ್: ಸತತ ಎರಡನೇ ಶತಕ ಗಳಿಸಿದ ದೇವದತ್ತ ಪಡಿಕ್ಕಲ್ ಮತ್ತು ಕರುಣ್ ನಾಯರ್ ಅಂದದ ಬ್ಯಾಟಿಂಗ್ ಬಲದಿಂದ ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಜಯಭೇರಿ ಬಾರಿಸಿತು. 

ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಟೂರ್ನಿಯ ಎ ಗುಂಪಿನ ಎರಡನೇ ಪಂದ್ಯದಲ್ಲಿ ಕರ್ನಾಟಕವು 8 ವಿಕೆಟ್‌ಗಳಿಂದ ಕೇರಳ ವಿರುದ್ಧ ಜಯಿಸಿತು. ಟೂರ್ನಿಯಲ್ಲಿ ಕರ್ನಾಟಕ ತಂಡವು ಸತತ ಎರಡನೇ ಪಂದ್ಯದಲ್ಲಿ ಗುರಿ ಬೆನ್ನಟ್ಟಿ ಗೆದ್ದಿತು. 

ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಎಡಗೈ ವೇಗಿ ಅಭಿಲಾಷ್ ಶೆಟ್ಟಿ (59ಕ್ಕೆ3) ಹಾಗೂ ಸ್ಪಿನ್ನರ್ ಶ್ರೇಯಸ್ ಗೋಪಾಲ್ (61ಕ್ಕೆ2) ಅವರ ಅಮೋಘ ಬೌಲಿಂಗ್ ಬಲದಿಂದ ಕೇರಳ ತಂಡವು 50 ಓವರ್‌ಗಳಲ್ಲಿ 7 ವಿಕೆಟ್‌ಗಳೀಗೆ 284 ರನ್ ಗಳಿಸಿತು. ತಂಡದ ಮೂರು ವಿಕೆಟ್‌ಗಳು 49 ರನ್‌ಗಳಿಗೇ ಪತನವಾಗಿದ್ದವು. ಇದರಿಂದಾಗಿ ಕೇರಳ ತಂಡವು ಸಾಧಾರಣ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತ್ತು. ಆದರೆ, ಬಾಬಾ ಅಪರಾಜಿತ್ (71; 62ಎ, 4X8, 6X2) ಮತ್ತು ಮೊಹಮ್ಮದ್ ಅಜರುದ್ದೀನ್ (ಔಟಾಗದೇ 84; 58ಎ, 4X3, 6X4) ಅವರ ಬೀಸಾಟದಿಂದಾಗಿ ಹೋರಾಟದ ಮೊತ್ತ ಗಳಿಸಿತು. ಕೊನೆಯ ಹಂತದ ಓವರ್‌ಗಳಲ್ಲಿ ನಿಧೀಶ್ (ಅಜೇಯ 34) ಕೂಡ ಮಿಂಚಿದರು. 

ADVERTISEMENT

ಗುರಿ ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ಎರಡನೇ ಓವರ್‌ನಲ್ಲಿ ಆಘಾತವಾಯಿತು. ನಾಯಕ ಮಯಂಕ್ ಅಗರವಾಲ್ ವಿಕೆಟ್ ಪಡೆದ ಅಖಿಲ್ ಸ್ಕಾರಿಯಾ ಕೇರಳಕ್ಕೆ ಉತ್ತಮ ಆರಂಭ ನೀಡಿದರು. ಆದರೆ ಅವರ ಸಂತಸ ಬಹಳ ಹೊತ್ತು ಉಳಿಯಲಿಲ್ಲ. ದೇವದತ್ತ (124; 137ಎ, 4X12, 6X3) ಮತ್ತು ಕರುಣ್ ನಾಯರ್ (ಅಜೇಯ 130; 130ಎ, 4X14) ಅವರ ಎರಡನೇ ವಿಕೆಟ್ ಜೊತೆಯಾಟದಲ್ಲಿ 223 (236ಎ) ರನ್ ಸೇರಿಸಿ ಜಯವನ್ನು ಸುಲಭಗೊಳಿಸಿದರು. ಇದರಿಂದಾಗಿ ತಂಡವು 48.2 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 285 ರನ್ ಗಳಿಸಿತು. ಸ್ಮರಣ್ ರವಿಚಂದ್ರನ್ 16 ಎಸೆತಗಳಲ್ಲಿ ಔಟಾಗದೇ 25 ರನ್ ಗಳಿಸಿದರು. 

ಟೂರ್ನಿಯ ಮೊದಲ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ 413 ರನ್ ಗುರಿ ಬೆನ್ನಟ್ಟಿದ್ದ ಕರ್ನಾಟಕ ಗೆದ್ದಿತ್ತು. ಆ ಪಂದ್ಯದಲ್ಲಿಯೂ ದೇವದತ್ತ ಭರ್ಜರಿ ಶತಕ ಹೊಡೆದಿದ್ದರು. ಇಲ್ಲಿಯೂ ಮಿಂಚಿದರು. ಎಡಗೈ ಬ್ಯಾಟರ್ ದೇವದತ್ತ ಸೊಗಸಾದ ಡ್ರೈವ್, ಪಂಚ್ ಮತ್ತು ಪುಲ್‌ಗಳನ್ನು ಪ್ರದರ್ಶಿಸಿದರು. ಬೌಲರ್‌ಗಳು ಅವರ ಆಟದ ಮುಂದೆ ಬಸವಳಿದರು. 

ಇನ್ನೊಂದು ಬದಿಯಲ್ಲಿ ಅನುಭವಿ ಕರುಣ್ ಕೂಡ ಅಬ್ಬರಸಿದರು. 100ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಸೂರೆ ಮಾಡಿದರು. ಇದರಿಂದಾಗಿ ವಿಕೆಟ್ ಗಳಿಸಲು ಕೇರಳದ ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ. 

ದೇವದತ್ತ ಪಡಿಕ್ಕಲ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.