ADVERTISEMENT

ನ್ಯೂಜಿಲೆಂಡ್ ಮಹಿಳಾ ತಂಡಕ್ಕೆ ಸೋಫಿ ಡಿವೈನ್ ನಾಯಕಿ

ಪಿಟಿಐ
Published 9 ಜುಲೈ 2020, 8:47 IST
Last Updated 9 ಜುಲೈ 2020, 8:47 IST
ಸೋಫಿ ಡಿವೈನ್
ಸೋಫಿ ಡಿವೈನ್   

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡಕ್ಕೆ ಸೋಫಿ ಡಿವೈನ್ ಅವರನ್ನು ಪೂರ್ಣಾವಧಿ ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ.

ಈ ಮುನ್ನ ನಾಯಕಿಯಾಗಿದ್ದ ಆ್ಯಮಿ ಸೆಟರ್‌ವೇಟ್ ಅವರು ಹೆರಿಗೆ ರಜೆಗೆ ತೆರಳಿದ್ದಾರೆ. ಅವರು ಮರಳಿದ ನಂತರ ಕಿವೀಸ್ ತಂಡಕ್ಕೆ ಉಪನಾಯಕಿಯಾಗಲಿದ್ದಾರೆ. ಡಿವೈನ್ ನಾಯಕಿಯಾಗಿ ತಂಡವನ್ನು ಮುನ್ನಡೆಸುವರು ಎಂದು ನ್ಯೂಜಿಲೆಂಡ್ ಕ್ರಿಕೆಟ್ ಪ್ರಕಟಣೆಯಲ್ಲಿ ತಿಳಿಸಿದೆ.

30 ವರ್ಷದ ಡಿವೈನ್ 105 ಏಕದಿನ ಮತ್ತು 91 ಟಿ20 ಪಂದ್ಯಗಳನ್ನು ಆಡಿದ್ದಾರೆ. ಒಟ್ಟು 4954 ರನ್ ಮತ್ತು 158 ವಿಕೆಟ್‌ಗಳು ಅವರ ಖಾತೆಯಲ್ಲಿವೆ.

ADVERTISEMENT

’ರಾಷ್ಟ್ರೀಯ ತಂಡದ ನಾಯಕತ್ವ ಲಭಿಸಿರುವುದು ದೊಡ್ಡ ಗೌರವ ಸಿಕ್ಕಂತಾಗಿದೆ‘ ಎಂದು ಡಿವೈನ್ ಸಂತಸ ವ್ಯಕ್ತಪಡಿಸಿದ್ದಾರೆ.

’ಆ್ಯಮಿ ಅವರಿಗೆ ಅಮೋಘವಾದ ಯೋಚನಾಲಹರಿ ಇದೆ. ಅವರು ತಂಡಕ್ಕೆ ಮರಳುವುದನ್ನು ಕಾಯುತ್ತಿದ್ದೇನೆ. ಅವರೊಂದಿಗೆ ಸೇರಿ ತಂಡವನ್ನು ಮತ್ತಷ್ಟು ಸದೃಢಗೊಳಿಸುತ್ತೇನೆ. ಅವರ ಜೊತೆಯಲ್ಲಿ ಆಡುವುದು ಸಂತಸದ ವಿಷಯ. ಅವರೊಂದಿಗೆ ಸೇರಿ ಬಲಿಷ್ಠ ನಾಯಕತ್ವವನ್ನು ನಿರ್ವಹಿಸಬಹುದು‘ ಎಂದು ಡಿವೈನ್ ಹೇಳಿದ್ದಾರೆ.

’ನಾನು ನಾಯಕಿಯಾಗಿದ್ದ ಸಂದರ್ಭವನ್ನು ಉತ್ತಮವಾಗಿ ನಿರ್ವಹಿಸಿದ ತೃಪ್ತಿ ಇದೆ. ಸವಾಲುಗಳನ್ನು ಎದುರಿಸುವಲ್ಲಿ ಯಶಸ್ವಿಯಾಗಿದ್ದೆ. ನಮ್ಮ ತಂಡವು ಉತ್ತಮ ಹಾದಿಯಲ್ಲಿ ಸಾಗುತ್ತಿದೆ. ಕ್ರಿಕೆಟ್ ಮತ್ತು ತಂಡದೊಳಗಿನ ಸಂಸ್ಕೃತಿಯು ಉತ್ತಮವಾಗಿದೆ‘ ಎಂದು ಆ್ಯಮಿ ಸೆಟರ್‌ವೇಟ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.