ADVERTISEMENT

ಕಿವೀಸ್‌ ಓಟಕ್ಕೆ ಧನಂಜಯ ಕಡಿವಾಣ

ಮೊದಲ ಕ್ರಿಕೆಟ್‌ ಟೆಸ್ಟ್‌ ಮೊದಲ ದಿನ ಕೆಲಕಾಲ ವರುಣನಾಟ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2019, 18:29 IST
Last Updated 14 ಆಗಸ್ಟ್ 2019, 18:29 IST

ಗಾಲ್‌ (ರಾಯಿಟರ್ಸ್‌): ಶ್ರೀಲಂಕಾದ ಸ್ಪಿನ್ನರ್ ಅಖಿಲ ಧನಂಜಯ ಸ್ಪಿನ್‌ ದಾಳಿಯ ಮೂಲಕ ಮೊದಲ ಟೆಸ್ಟ್‌ನ ಮೊದಲ ದಿನವಾದ ಬುಧವಾರ ನ್ಯೂಜಿಲೆಂಡ್‌ ತಂಡ ದೊಡ್ಡ ಮೊತ್ತ ಪೇರಿಸದಂತೆ ಕಡಿವಾಣ ಹಾಕಿದರು. ಮಳೆಯಿಂದ 68 ಓವರುಗಳ ಆಟ ಸಾಧ್ಯವಾಗಿದ್ದು, ಪ್ರವಾಸಿ ನ್ಯೂಜಿಲೆಂಡ್‌ 5 ವಿಕೆಟ್‌ಗೆ 203 ರನ್‌ ಗಳಿಸಿತು.

ಎಲ್ಲ ಐದು ವಿಕೆಟ್‌ಗಳು 25 ವರ್ಷದ ಧನಂಜಯ ಅವರ ಪಾಲಾದವು. ಅನುಭವಿ ಆಟಗಾರ ರಾಸ್‌ ಟೇಲರ್‌ ಒಂದೆಡೆ ಬೇರೂರಿ 86 ರನ್‌ಗಳೊಡನೆ ಅಜೇಯರಾಗಿ ಉಳಿದಿದ್ದಾರೆ. ಅವರೊಂದಿಗೆ ಮಿಷೆಲ್‌ ಸ್ಯಾಂಟ್ನರ್‌ ಎಂಟು ರನ್‌ ಗಳಿಸಿ ಆಟ ಕಾದಿರಿಸಿದ್ದಾರೆ.

ಟಾಸ್‌ ಗೆದ್ದು ಬ್ಯಾಟ್‌ ಮಾಡಲು ನಿರ್ಧರಿಸಿದ ನ್ಯೂಜಿಲೆಂಡ್‌ಗೆ ಜೀತ್ ರಾವಲ್‌ ಮತ್ತು ಟಾಮ್‌ ಲಾದಮ್‌ 64 ರನ್‌ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಈ ಹಿಂದೆ ಸಂದೇಹಾಸ್ಪದ ಬೌಲಿಂಗ್ ಶೈಲಿಗಾಗಿ ನಿಷೇಧ ಶಿಕ್ಷೆ ಅನುಭವಿಸಿದ್ದ ಧನಂಜಯ, ಕೇವಲ ನಾಲ್ಕು ಎಸೆತಗಳ ಅಂತದಲ್ಲಿ ಲಾದಮ್‌ ಮತ್ತು ನಾಯಕ ಕೇನ್‌ ವಿಲಿಯಮ್ಸನ್‌ ವಿಕೆಟ್‌ ಪಡೆದು ಪೆಟ್ಟು ನೀಡಿದರು. ವಿಲಿಯಮ್ಸನ್‌ ಖಾತೆ ತೆರೆಯುವ ಮೊದಲೇ ನಿರ್ಗಮಿಸಿದರು. ಲಂಚ್‌ ವೇಳೆಗೆ ಪ್ರವಾಸಿಗರು 3 ವಿಕೆಟ್‌ಗೆ 71 ರನ್‌ ಗಳಿಸಿದ್ದರು.

ADVERTISEMENT

93 ಟೆಸ್ಟ್‌ಗಳನ್ನು ಆಡಿರುವ ಟೇಲರ್‌, ಹೆನ್ರಿ ನಿಕೋಲಸ್‌ ಜೊತೆ (78 ಎಸೆತಗಳಲ್ಲಿ 42) ನಾಲ್ಕನೇ ವಿಕೆಟ್‌ಗೆ 100 ರನ್‌ ಸೇರಿಸಿ ಚೇತರಿಕೆ ನೀಡಿದರು. ಧನಂಜಯ ಬೌಲಿಂಗ್‌ನಲ್ಲಿ ಸ್ವೀಪ್‌ಗೆ ಯತ್ನಿಸಿದ ನಿಕೋಲಸ್‌ ಲೆಗ್‌ಬಿಫೋರ್‌ ಬಲೆಗೆ ಬಿದ್ದರು.

ಎರಡು ಟೆಸ್ಟ್‌ಗಳ ಈ ಸರಣಿ ವಿಶ್ವ ಚಾಂಪಿಯನ್‌ಷಿಪ್‌ನ ಭಾಗವಾಗಿದೆ.

ಸ್ಕೋರುಗಳು: ಶ್ರೀಲಂಕಾ: 1ನೇ ಇನಿಂಗ್ಸ್‌: 68 ಓವರುಗಳಲ್ಲಿ 5 ವಿಕೆಟ್‌ಗೆ 203 (ಜೆ.ಎ.ರಾವಲ್‌ 33, ಟಾಮ್‌ ಲಾದಮ್‌ 30, ರಾಸ್‌ ಟೇಲರ್‌ 86, ನಿಕೋಲಸ್‌ 42; ಅಖಿಲ ಧನಂಜಯ 57ಕ್ಕೆ5).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.