ADVERTISEMENT

ಗೆಲುವಿನ ಓಟ ಮುಂದುವರಿಸುವತ್ತ ಚೆನ್ನೈ ಚಿತ್ತ

ಸೋಲಿನ ಸರಪಣಿ ಕಳಚಿಕೊಳ್ಳುವ ಛಲದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 17:25 IST
Last Updated 20 ಏಪ್ರಿಲ್ 2021, 17:25 IST
ಏಯಾನ್ ಮಾರ್ಗನ್
ಏಯಾನ್ ಮಾರ್ಗನ್   

ಮುಂಬೈ (ಪಿಟಿಐ): ಒಂದರ ಹಿಂದೊಂದು ಜಯಸಾಧಿಸಿರುವ ಚೆನ್ನೈ ಸೂಪರ್ ಕಿಂಗ್ಸ್‌ ಬುಧವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿಯೂ ಮೇಲುಗೈ ಸಾಧಿಸುವ ಛಲದಲ್ಲಿದೆ.

ಹೋದ ವರ್ಷ ಯುಎಇಯಲ್ಲಿ ನಡೆದಿದ್ದ ಟೂರ್ನಿಯಲ್ಲಿ ಚೆನ್ನೈ ತಂಡವು ಪ್ಲೇ ಆಫ್‌ ಪ್ರವೇಶಿಸಿರಲಿಲ್ಲ. ಈ ಟೂರ್ನಿಯಲ್ಲಿಯೂ ಮಹೇಂದ್ರಸಿಂಗ್ ಧೋನಿ ಬಳಗವು ಮೊದಲ ಪಂದ್ಯದಲ್ಲಿ ಸೋಲನುಭವಿಸಿತ್ತು. ಆದರೆ ನಂತರದ ಎರಡು ಪಂದ್ಯಗಳಲ್ಲಿ ಪುಟಿದೆದ್ದ ರೀತಿ ಅಮೋಘವಾಗಿತ್ತು.

ವಾಂಖೆಡೆ ಕ್ರೀಡಾಂಗಣದಲ್ಲಿ ಚೆನ್ನೈ ತಂಡದ ಮಧ್ಯಮವೇಗಿ ದೀಪಕ್ ಚಾಹರ್, ಆಲ್‌ರೌಂಡರ್‌ಗಳಾದ ಮೋಯಿನ್ ಅಲಿ ಮತ್ತು ಸ್ಯಾಮ್ ಕರನ್ ಅವರ ಆಟದ ಬಲದಿಂದ ಜಯ ಸಾಧ್ಯವಾಗಿದೆ. ಚೆನ್ನೈ ಬ್ಯಾಟ್ಸ್‌ಮನ್‌ಗಳು ವೈಯಕ್ತಿಕವಾಗಿ ಬಹಳ ದೊಡ್ಡ ಸ್ಕೋರ್ ಗಳಿಸದಿದ್ದರೂ ತಂಡವು ಹೋರಾಟದ ಮೊತ್ತ ಪೇರಿಸುವಲ್ಲಿ ಕಾಣಿಕೆ ನೀಡಿದ್ದಾರೆ. ಅದಕ್ಕೆ ತಕ್ಕಂತೆ ಬೌಲರ್‌ಗಳೂ ತಮ್ಮ ಸಾಮರ್ಥ್ಯ ಮೆರೆದಿದ್ದಾರೆ. ಐಪಿಎಲ್‌ನಲ್ಲಿ 200ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿರುವ ನಾಯಕ ಧೋನಿಯ ತಂತ್ರಗಳು ಫಲ ನೀಡಿವೆ. ಇದರಿಂದಾಗಿ ಕೆಕೆಆರ್ ವಿರುದ್ಧ ಗೆಲ್ಲುವ ನೆಚ್ಚಿನ ತಂಡ ಚೆನ್ನೈ ಆಗಿದೆ.

ADVERTISEMENT

ಏಕೆಂದರೆ, ಮಾರ್ಗನ್ ನಾಯಕತ್ವದ ಕೋಲ್ಕತ್ತ ತಂಡವು ಆಡಿರುವ ಮೂರು ಪಂದ್ಯಗಳಲ್ಲಿ ಒಂದು ಗೆದ್ದು, ಎರಡರಲ್ಲಿ ಸೋತಿದೆ. ಹೋದ ಪಂದ್ಯದಲ್ಲಿ ಆರ್‌ಸಿಬಿಯ ಎಬಿ ಡಿವಿಲಿಯರ್ಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಅಬ್ಬರದ ಬ್ಯಾಟಿಂಗ್ ಮುಂದೆ ಕೆಕೆಆರ್ ಜಯದಾಸೆ ಕಮರಿತ್ತು.

ತಂಡದ ಆಲ್‌ರೌಂಡರ್‌ಗಳಾದ ಆ್ಯಂಡ್ರೆ ರಸೆಲ್ ಮತ್ತು ಶಕೀಬ್ ಅಲ್ ಹಸನ್ ಫಿನಿಷರ್ ಪಾತ್ರ ನಿರ್ವಹಿಸದೇ ಇರುವುದು ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ. ರಸೆಲ್ ತಮ್ಮ ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಬೌಲಿಂಗ್‌ನಲ್ಲಿ ಪ್ರಸಿದ್ಧ ಕೃಷ್ಣ ಮತ್ತು ಪ್ಯಾಟ್ ಕಮಿನ್ಸ್‌ ತಮ್ಮ ಲಯಕ್ಕೆ ಮರಳಿದರೆ ಎದುರಾಳಿ ತಂಡಕ್ಕೆ ಸವಾಲೊಡ್ಡುವುದು ಖಚಿತ. ತಮ್ಮ ತಂಡದ ಪ್ರತಿಭಾವಂತ ಬೌಲರ್‌ಗಳನ್ನು ನಿಯೋಜಿಸುವಲ್ಲಿ ಮಾರ್ಗನ್ ಅನುಸರಿಸುವ ತಂತ್ರಗಾರಿಕೆಯು ಪ್ರಮುಖವಾಗಲಿದೆ.

ತಂಡಗಳು:

ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರಸಿಂಗ್ ಧೋನಿ (ನಾಯಕ/ವಿಕೆಟ್‌ಕೀಪರ್), ಸುರೇಶ್ ರೈನಾ, ಅಂಬಟಿ ರಾಯುಡು, ಕೆ.ಎಂ. ಆಸಿಫ್, ದೀಪಕ್ ಚಾಹರ್, ಡ್ವೇನ್ ಬ್ರಾವೊ, ಫಫ್ ಡುಪ್ಲೆಸಿ, ಇಮ್ರಾನ್ ತಾಹೀರ್, ಎನ್. ಜಗದೀಶನ್, ಕರ್ಣ ಶರ್ಮಾ, ಲುಂಗಿ ಗಿಡಿ, ಮಿಚೆಲ್ ಸ್ಯಾಂಟನರ್, ರವೀಂದ್ರ ಜಡೇಜ, ಋತುರಾಜ್ ಗಾಯಕವಾಡ್, ಶಾರ್ದೂಲ್ ಠಾಕೂರ್, ಸ್ಯಾಮ್ ಕರನ್, ಜೋಶ್ ಹ್ಯಾಜಲ್‌ವುಡ್, ಆರ್. ಸಾಯಿಕಿಶೋರ್, ರಾಬಿನ್ ಉತ್ತಪ್ಪ, ಮೋಯಿನ್ ಅಲಿ, ಕೃಷ್ಣಪ್ಪ ಗೌತಮ್, ಚೇತೇಶ್ವರ್ ಪೂಜಾರ, ಎಂ. ಹರಿಶಂಕರ್ ರೆಡ್ಡಿ, ಕೆ. ಭಗತ್ ವರ್ಮಾ, ಸಿ. ಹರಿನಿಶಾಂತ್.

ಕೋಲ್ಕತ್ತ ನೈಟ್ ರೈಡರ್ಸ್: ಏಯಾನ್ ಮಾರ್ಗನ್ (ನಾಯಕ), ದಿನೇಶ್ ಕಾರ್ತಿಕ್, ಶುಭಮನ್ ಗಿಲ್, ನಿತೀಶ್ ರಾಣಾ, ಅ್ಯಂಡ್ರೆ ರಸೆಲ್, ಕುಲದೀಪ್ ಯಾದವ್, ಶಿವಂ ಮಾವಿ, ಲಾಕಿ ಫರ್ಗ್ಯುಸನ್, ಪ್ಯಾಟ್ ಕಮಿನ್ಸ್, ಕಮಲೇಶ್ ನಾಗರಕೋಟಿ, ಸಂದೀಪ್ ವರಿಯರ್, ಪ್ರಸಿದ್ಧ ಕೃಷ್ಣ, ರಿಂಕು ಸಿಂಗ್, ಶಕೀಬ್ ಅಲ್ ಹಸನ್, ರಾಹುಲ್ ತ್ರಿಪಾಠಿ, ವರುಣ್ ಚಕ್ರವರ್ತಿ, ಕರುಣ್ ನಾಯರ್, ಹರಭಜನ್ ಸಿಂಗ್

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.