ADVERTISEMENT

ಜಾರ್ಖಂಡ್‌ಗೆ ಧೋನಿ, ಮುಂಬೈ ರೋಹಿತ್ ಬಲ

ಬೆಂಗಳೂರಿನಲ್ಲಿ ನಡೆಯಲಿರುವ ವಿಜಯ್ ಹಜಾರೆ ಟೂರ್ನಿ ನಾಕೌಟ್ ಪಂದ್ಯಗಳು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2018, 19:56 IST
Last Updated 9 ಅಕ್ಟೋಬರ್ 2018, 19:56 IST
ರೋಹಿತ್ ಶರ್ಮಾ ಮತ್ತು  ಮಹೇಂದ್ರಸಿಂಗ್ ದೋನಿ 
ರೋಹಿತ್ ಶರ್ಮಾ ಮತ್ತು  ಮಹೇಂದ್ರಸಿಂಗ್ ದೋನಿ    

ಬೆಂಗಳೂರು: ಭಾರತ ತಂಡದ ಆಟಗಾರರಾದ ಮಹೇಂದ್ರಸಿಂಗ್ ಧೋನಿ ಮತ್ತು ರೋಹಿತ್ ಶರ್ಮಾ ಅವರು ಅಕ್ಟೋಬರ್ 14 ರಿಂದ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಎಂಟರ ಘಟ್ಟದ ಪಂದ್ಯಗಳಲ್ಲಿ ಕ್ರಮವಾಗಿ ಜಾರ್ಖಂಡ್ ಮತ್ತು ಮುಂಬೈ ತಂಡಗಳ ಪರ ಆಡಲಿದ್ದಾರೆ.

ಈಚೆಗೆ ದುಬೈನಲ್ಲಿ ನಡೆದಿದ್ದ ಏಷ್ಯಾ ಕಪ್ ಏಕದಿನ ಕ್ರಿಕೆಟ್ ಚಾಂಪಿಯನ್‌ಷಿಪ್‌ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತವು ಪ್ರಶಸ್ತಿ ಗೆದ್ದಿತ್ತು. ಆ ಟೂರ್ನಿಯಲ್ಲಿ ಧೋನಿ ಕೂಡ ಆಡಿದ್ದರು. ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಅವರನ್ನು ತಂಡಕ್ಕೆ ಆಯ್ಕೆ ಮಾಡಿರಲಿಲ್ಲ. ಆದ್ದರಿಂದ ವಿಶ್ರಾಂತಿ ಪಡೆದಿದ್ದರು.

ವಿಜಯ್ ಹಜಾರೆ ಟ್ರೋಫಿಯ ಎ ಮತ್ತು ಬಿ ಗುಂಪಿನಲ್ಲಿ 28 ಪಾಯಿಂಟ್ಸ್‌ ಗಳಿಸಿ ಅಗ್ರಸ್ಥಾನದಲ್ಲಿರುವ ಮುಂಬೈ ನಾಕೌಟ್ ಪ್ರವೇಶಿಸಿದೆ. ಸಿ ಗುಂಪಿನಲ್ಲಿ ಜಾರ್ಖಂಡ್ ಕೂಡ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಗಳಿಸಿದೆ. ಬೆಂಗಳೂರಿನಲ್ಲಿ ಇದೇ 14 ಮತ್ತು 15ರಂದು ಎಂಟರ ಘಟ್ಟದ ಪಂದ್ಯಗಳು ನಡೆಯಲಿವೆ. 17 ಮತ್ತು 18ರಂದು ಸೆಮಿಫೈನಲ್‌ ಪಂದ್ಯಗಳು ನಡೆಯಲಿವೆ. 20ರಂದು ಫೈನಲ್ ಪಂದ್ಯ ನಡೆಯಲಿದೆ.

ADVERTISEMENT

ಹೋದ ವರ್ಷದ ಚಾಂಪಿಯನ್ ಕರ್ನಾಟಕ ತಂಡವು ಲೀಗ್ ಹಂತದಲ್ಲಿಯೇ ನಿರಾಶೆ ಅನುಭವಿಸಿ ಹೊರಬಿದ್ದಿದೆ.

‘ರೋಹಿತ್ ಶರ್ಮಾ ಅವರು ವಿಜಯ್ ಹಜಾರೆ ಟೂರ್ನಿಯ ಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ಆಡುವುದು ಖಚಿತ. ಅವರು ಶೀಘ್ರದಲ್ಲಿಯೇ ಮುಂಬೈ ತಂಡವನ್ನು ಸೇರಿಕೊಳ್ಳಲಿದ್ದಾರೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯು 21ರಿಂದ ಆರಂಭವಾಗಲಿದೆ. ಆ ಸರಣಿಯಲ್ಲಿ ಆಡುವ ಭಾರತ ತಂಡದಲ್ಲಿ ರೋಹಿತ್ ಮತ್ತು ಧೋನಿ ಆಡುವುದು ಬಹುತೇಕ ಖಚಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.