ADVERTISEMENT

ಧ್ರುವ ಪ್ರಭಾಕರ್‌ ಶತಕ: ಮುಂಬೈ ಎದುರು ಕರ್ನಾಟಕ ಸಾಧಾರಣ ಮೊತ್ತ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 16:35 IST
Last Updated 21 ಫೆಬ್ರುವರಿ 2026, 16:35 IST
ಧ್ರುವ ಪ್ರಭಾಕರ್‌
ಧ್ರುವ ಪ್ರಭಾಕರ್‌   

ಪ್ರಜಾವಾಣಿ ವಾರ್ತೆ

ಬೆಂಗಳೂರು: ಧ್ರುವ ಪ್ರಭಾಕರ್‌ (107;215ಎ) ಅವರ ಶತಕದ ನೆರವಿನಿಂದ ಕರ್ನಾಟಕ ತಂಡವು ಶನಿವಾರ ಕರ್ನಲ್‌ ಸಿ.ಕೆ.ನಾಯ್ಡು ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಆತಿಥೇಯ ಮುಂಬೈ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ ಸಾಧಾರಣ ಮೊತ್ತ ಗಳಿಸಿದೆ. 

ಮುಂಬೈನ ಜಿಮ್‌ಖಾನಾದ ಸಚಿನ್‌ ತೆಂಡೂಲ್ಕರ್‌ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ಅನೀಶ್ವರ್‌ ಗೌತಮ್‌ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡರು. ಧ್ರುವ ಅವರ ಏಕಾಂಗಿ ಹೋರಾಟದ ನೆರವಿನಿಂದ ಕರ್ನಾಟಕ ತಂಡವು ಮೊದಲ ಇನಿಂಗ್ಸ್‌ನಲ್ಲಿ 78.5 ಓವರ್‌ಗಳಲ್ಲಿ 240 ರನ್‌ ಗಳಿಸಿತು. ಇದಕ್ಕೆ ಉತ್ತರವಾಗಿ ಇನಿಂಗ್ಸ್‌ ಆರಂಭಿಸಿದ ಮುಂಬೈ ತಂಡವು ಮೊದಲ ದಿನದಾಟಕ್ಕೆ 7 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 12 ರನ್‌ ಗಳಿಸಿದೆ.

ADVERTISEMENT

ಎದುರಾಳಿ ಬೌಲರ್‌ಗಳ ಪರಿಣಾಮಕಾರಿ ದಾಳಿಯ ಮುಂದೆ ಕರ್ನಾಟಕದ ಬ್ಯಾಟರ್‌ಗಳು ಪೆವಿಲಿಯನ್‌ ಪರೇಡ್‌ ನಡೆಸಿದರು. ತಂಡವು 53 ರನ್‌ ಗಳಿಸುವಷ್ಟರಲ್ಲಿ ಪ್ರಖರ್‌ ಚತುರ್ವೇದಿ (0), ಫೈಜನ್‌ ಖಾನ್‌ (12), ಕಾರ್ತಿಕೇಯ ಕೆ.ಪಿ (10), ಹಾರ್ದಿಕ್ ರಾಜ್‌ (11) ಪೆವಿಲಿಯನ್‌ ಸೇರಿದ್ದರು. 

ನಾಲ್ಕನೇ ಕ್ರಮಾಂಕದಲ್ಲಿ ಜವಾಬ್ದಾರಿಯುತ ಆಟ ಪ್ರದರ್ಶಿಸಿದ ಧ್ರುವ ಅವರ ಇನಿಂಗ್ಸ್‌ನಲ್ಲಿ 15 ಬೌಂಡರಿಗಳು ಸೇರಿದ್ದವು. ಅವರು ಐದನೇ ವಿಕೆಟ್‌ ಜೊತೆಯಾಟದಲ್ಲಿ ಅನೀಶ್ವರ್‌ (20) ಅವರೊಂದಿಗೆ 40 ರನ್‌, ಆರನೇ ವಿಕೆಟ್‌ ಜೊತೆಯಾಟದಲ್ಲಿ ಹರ್ಷಿಲ್ ಧರ್ಮಾನಿ (27) ಅವರೊಂದಿಗೆ 43 ರನ್‌ ಸೇರಿಸಿ ತಂಡಕ್ಕೆ ಉಪಯುಕ್ತ ಚೇತರಿಕೆ ನೀಡಿದರು. ನಂತರದಲ್ಲಿ ಧ್ರುವ ಅವರೊಂದಿಗೆ ಸಮಿತ್‌ ದ್ರಾವಿಡ್‌ (16;56ಎ), ಯಶೋವರ್ಧನ್‌ ಪರಂತಾಪ್‌ (ಔಟಾಗದೇ 15;43ಎ) ತಂಡವು ಸಾಧಾರಣ ಮೊತ್ತ ಗಳಿಸಲು ನೆರವಾದರು.

ಮುಂಬೈ ತಂಡದ ಎಡಗೈ ಸ್ಪಿನ್ನರ್‌ ಅಥರ್ವ ಭೋಸ್ಲೆ ಮೂರು ವಿಕೆಟ್‌ ಪಡೆದರೆ, ಸೂರ್ಯಾಂಶ್ ಶೆಡಗೆ, ಝೈದ್ ಪಾಟಣ ಕರ್,  ಹಿಮಾಂಶು ಸಿಂಗ್ ತಲಾ ಮೂರು ವಿಕೆಟ್‌ ಪಡೆದು ಕರ್ನಾಟಕ ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.

ಸಂಕ್ಷಿಪ್ತ ಸ್ಕೋರು: ಕರ್ನಾಟಕ: 78.5 ಓವರ್‌ಗಳಲ್ಲಿ 240 (ಧ್ರುವ್‌ ಪ್ರಭಾಕರ್‌ 107, ಅನೀಶ್ವರ್‌ ಗೌತಮ್‌ 20, ಹರ್ಷಿಲ್ ಧರ್ಮಾನಿ; ಸೂರ್ಯಾಂಶ್ ಶೆಡಗೆ 35ಕ್ಕೆ 2, ಝೈದ್ ಪಾಟಣಕರ್ 50ಕ್ಕೆ 2, ಹಿಮಾಂಶು ಸಿಂಗ್‌ 57ಕ್ಕೆ 2, ಅಥರ್ವ ಭೋಸ್ಲೆ 60ಕ್ಕೆ 3). ಮುಂಬೈ: 7 ಓವರ್‌ಗಳಲ್ಲಿ ವಿಕೆಟ್‌ನಷ್ಟವಿಲ್ಲದೆ 12.

ಧ್ರುವ ಪ್ರಭಾಕರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.