ADVERTISEMENT

ಲಾಕ್‌ಡೌನ್‌ನಲ್ಲಿ 12 ಕೆ.ಜಿ.ತೂಕ ಇಳಿಸಿದ ಡಾಮಿನಿಕ್‌ ಸಿಬ್ಲಿ

ಪಿಟಿಐ
Published 7 ಜುಲೈ 2020, 14:11 IST
Last Updated 7 ಜುಲೈ 2020, 14:11 IST
ಡಾಮಿನಿಕ್‌ ಸಿಬ್ಲಿ
ಡಾಮಿನಿಕ್‌ ಸಿಬ್ಲಿ   

ಸೌತಾಂಪ್ಟನ್‌: ‘ಲಾಕ್‌ಡೌನ್‌ ಅವಧಿಯಲ್ಲಿ ದೇಹ ದಂಡಿಸಲು ಆದ್ಯತೆ ನೀಡಿದ್ದೆ. ಒಟ್ಟು 12 ಕೆ.ಜಿ.ತೂಕ ಇಳಿಸಿಕೊಂಡು ಮತ್ತಷ್ಟು ಫಿಟ್‌ ಆಗಿದ್ದೇನೆ’ ಎಂದು ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಡಾಮಿನಿಕ್‌ ಸಿಬ್ಲಿ ಮಂಗಳವಾರ ಹೇಳಿದ್ದಾರೆ.

‘ಈ ವರ್ಷದ ಮಾರ್ಚ್‌ನಲ್ಲಿ ಟೆಸ್ಟ್‌ ಸರಣಿಯನ್ನು ಆಡಲು ಶ್ರೀಲಂಕಾಕ್ಕೆ ಹೋಗಿದ್ದೆವು. ಕ್ರೀಡಾಪಟುಗಳು ಫಿಟ್‌ ಆಗಿರುವುದು ತುಂಬಾ ಅವಶ್ಯ ಎಂದು ಆಗ ಅನಿಸಿತ್ತು. ಕೋವಿಡ್‌ನಿಂದಾಗಿ ಲಂಕಾ ಎದುರಿನ ಸರಣಿ ರದ್ದಾಯಿತು. ತವರಿಗೆ ಹಿಂತಿರುಗುವಾಗ ವಿಮಾನದಲ್ಲಿ ಕುಳಿತು ಸಾಕಷ್ಟು ಯೋಚಿಸಿದೆ. ಹೇಗಾದರೂ ಮಾಡಿ ತೂಕ ಕಳೆದುಕೊಳ್ಳಲೇಬೇಕೆಂದು ದೃಢ ಸಂಕಲ್ಪ ಮಾಡಿದೆ’ ಎಂದು ಆರು ಅಡಿ ಎತ್ತರದ ಸಿಬ್ಲಿ ತಿಳಿಸಿದ್ದಾರೆ.

‘ಫಿಟ್‌ನೆಸ್‌ ವಿಚಾರದಲ್ಲಿ ಬೆನ್ ‌ಸ್ಟೋಕ್ಸ್‌ ನಮ್ಮೆಲ್ಲರಿಗೂ ಮಾದರಿ. ಅವರನ್ನು ನೋಡಿ ಜೋ ರೂಟ್‌ ಹಾಗೂ ಜೋಸ್‌ ಬಟ್ಲರ್‌ ಅವರು ಅಭ್ಯಾಸ ಮುಗಿದ ಮೇಲೂ ಕೊಲಂಬೊದ ಮೈದಾನದಲ್ಲಿ ಓಡುತ್ತಿದ್ದುದ್ದನ್ನು ಗಮನಿಸಿದ್ದೆ. ಆಗಲೇ ನನಗೆ ಜ್ಞಾನೋದಯವಾಯಿತು’ ಎಂದು 24 ವರ್ಷ ವಯಸ್ಸಿನ ಆಟಗಾರ ನುಡಿದಿದ್ದಾರೆ.

ADVERTISEMENT

‘ಕ್ರಿಕೆಟ್‌ ಬದುಕಿನಲ್ಲಿ ಏಳು ಬೀಳು ಇದ್ದಿದ್ದೆ. ಅದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೇ ಕಠಿಣ ಪರಿಶ್ರಮದಿಂದ ಆಡಬೇಕು. ವೆಸ್ಟ್‌ ಇಂಡೀಸ್‌ ಎದುರಿನ ಮೊದಲ ಟೆಸ್ಟ್‌ ಪಂದ್ಯಕ್ಕೆ ಸೂಕ್ತ ಸಿದ್ಧತೆಗಳನ್ನು ಮಾಡಿಕೊಂಡಿದ್ದೇನೆ. ಉತ್ತಮ ಆಟ ಆಡಲು ಪ್ರಯತ್ನಿಸುತ್ತೇನೆ’ ಎಂದಿದ್ದಾರೆ.

ಹೋದ ವರ್ಷದ ನವೆಂಬರ್‌ನಲ್ಲಿ ಅಂತರರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಸಿಬ್ಲಿ, ಈ ಮಾದರಿಯಲ್ಲಿ ಒಟ್ಟು ಆರು ಪಂದ್ಯಗಳನ್ನು ಆಡಿದ್ದು 40.22ರ ಸರಾಸರಿಯಲ್ಲಿ 362ರನ್‌ ದಾಖಲಿಸಿದ್ದಾರೆ. ಈ ವರ್ಷದ ಜನವರಿಯಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ನಲ್ಲಿ ಔಟಾಗದೆ 133ರನ್‌ ಬಾರಿಸಿದ್ದರು. ಇದು ಅವರ ವೈಯಕ್ತಿಕ ಗರಿಷ್ಠ ಸ್ಕೋರ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.