ADVERTISEMENT

IND vs WI 1st Test: ಭಾರತಕ್ಕೆ ಸಾಟಿಯಾಗದ ವಿಂಡೀಸ್

ಜಡೇಜ, ಸಿರಾಜ್ ಅಮೋಘ ಬೌಲಿಂಗ್ l ಗಿಲ್ ಬಳಗಕ್ಕೆ ಇನಿಂಗ್ಸ್‌ ಜಯ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 2:12 IST
Last Updated 5 ಅಕ್ಟೋಬರ್ 2025, 2:12 IST
ಅಹಮದಾಬಾದಿನಲ್ಲಿ ಶನಿವಾರ ವೆಸ್ಟ್ ಇಂಡೀಸ್ ತಂಡದ ಎದುರಿನ ಟೆಸ್ಟ್‌ ಪಂದ್ಯದಲ್ಲಿ ಜಯಗಳಿಸಿದ ಭಾರತ ತಂಡದ ಆಟಗಾರರ ಸಂಭ್ರಮ  –ಪಿಟಿಐ ಚಿತ್ರ
ಅಹಮದಾಬಾದಿನಲ್ಲಿ ಶನಿವಾರ ವೆಸ್ಟ್ ಇಂಡೀಸ್ ತಂಡದ ಎದುರಿನ ಟೆಸ್ಟ್‌ ಪಂದ್ಯದಲ್ಲಿ ಜಯಗಳಿಸಿದ ಭಾರತ ತಂಡದ ಆಟಗಾರರ ಸಂಭ್ರಮ  –ಪಿಟಿಐ ಚಿತ್ರ   

ಅಹಮದಾಬಾದ್: ಶನಿವಾರ ಬೆಳಿಗ್ಗೆ ಭಾರತ ತಂಡದ ಆಟಗಾರರು ನರೇಂದ್ರ ಮೋದಿ ಕ್ರೀಡಾಂಗಣವನ್ನು ಪ್ರವೇಶಿಸಿದಾಗ ಉಳಿದಿದ್ದ ಕುತೂಹಲ ಒಂದೇ ಒಂದು.  ಆತಿಥೇಯ ತಂಡವು ಎಷ್ಟು ಗಂಟೆಗಳಲ್ಲಿ ಗೆಲುವು ಸಾಧಿಸಲಿದೆ ಎಂಬುದೇ ಆ ಕೌತುಕವಾಗಿತ್ತು!

ಅದಕ್ಕೆ ಉತ್ತರವೂ ಸುಲಭವಾಗಿ ದಕ್ಕಿತು. ಭೋಜನ ವಿರಾಮದ ನಂತರದ ಒಂದೂವರೆ ಗಂಟೆ ಕಳೆಯುವಷ್ಟರಲ್ಲಿ ಭಾರತ ತಂಡವು ಇನಿಂಗ್ಸ್ ಮತ್ತು  140 ರನ್‌ಗಳ ಜಯ ದಾಖಲಿಸಿತು.  ಎರಡು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು.

ವೆಸ್ಟ್ ಇಂಡೀಸ್ ಎದುರಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ 286 ರನ್‌ಗಳ ಮುನ್ನಡೆಯನ್ನು ಗಳಿಸಿದ್ದ ಭಾರತ, ಮೂರನೇ ದಿನ ಬ್ಯಾಟಿಂಗ್ ಮಾಡುವ ಗೋಜಿಗೆ ಹೋಗಲಿಲ್ಲ. ಮೊದಲ ಇನಿಂಗ್ಸ್‌ (5ಕ್ಕೆ448) ಡಿಕ್ಲೇರ್ ಮಾಡಿಕೊಂಡಿತು.  ಶುಕ್ರವಾರ ಬೆಳಿಗ್ಗೆ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ (54ಕ್ಕೆ4), ವೇಗಿ ಮೊಹಮ್ಮದ್ ಸಿರಾಜ್ (31ಕ್ಕೆ3), ಸ್ಪಿನ್ನರ್ ಕುಲದೀಪ್ ಯಾದವ್ (23ಕ್ಕೆ2) ಮತ್ತು ಆಫ್‌ಸ್ಪಿನ್ನರ್ ವಾಷಿಂಗ್ಟನ್ ಸುಂದರ್‌ (18ಕ್ಕೆ1) ಆತಿಥೇಯ ಬಳಗದ ಗೆಲುವನ್ನು ಸುಲಭಗೊಳಿಸಿದರು. ವಿಂಡೀಸ್ ತಂಡವು 45.1 ಓವರ್‌ಗಳಲ್ಲಿ 146 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು.  

ADVERTISEMENT

ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ 162 ರನ್‌ಗಳಿಗೆ ವಿಂಡೀಸ್ ತಂಡವನ್ನು ಕಟ್ಟಿಹಾಕಿತ್ತು. ಅದರಿಂದಾಗಿ ತಂಡವು ಗಳಿಸಿರುವ ಮುನ್ನಡೆಯ ಮೊತ್ತವು ವಿಂಡೀಸ್‌ ಕಟ್ಟಿಹಾಕಲು ಸಾಕು ಎಂಬ ಭಾವ ಆತಿಥೇಯ ತಂಡಕ್ಕೆ ಮೂಡಿರಬಹುದು.   ಗಿಲ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಯೋಜನೆಯಂತೆ ಇನಿಂಗ್ಸ್ ಡಿಕ್ಲೇರ್ ಮಾಡಾಯಿತು. 

ವಿಂಡೀಸ್ ಬ್ಯಾಟರ್‌ಗಳು ಭಾರತದ ಉತ್ತಮ ದರ್ಜೆಯ ಬೌಲಿಂಗ್ ಮುಂದೆ ಇನಿಂಗ್ಸ್ ಕಟ್ಟುವಲ್ಲಿ ಸಫಲರಾಗಲಿಲ್ಲ. ಆರಂಭಿಕ ಬ್ಯಾಟರ್‌ಗಳು ಮೊದಲ ಏಳು ಓವರ್‌ ತಾಳ್ಮೆಯಿಂದ ಆಡಿದರು. ಆದರೆ ಎಂಟನೇ ಓವರ್‌ನಲ್ಲಿ  ಸಿರಾಜ್ ಎಸೆತದಲ್ಲಿ ತೇಜ್‌ನಾರಾಯಣ್ ಚಂದ್ರಪಾಲ್ ಅವರ ಕ್ಯಾಚ್‌ ಅನ್ನು ಡೈವ್ ಮಾಡಿ ಪಡೆದ ನಿತೀಶ್ ಕುಮಾರ್ ರೆಡ್ಡಿ ಮಿಂಚಿದರು. ಅಲ್ಲಿಂದ ಬ್ಯಾಟರ್‌ಗಳ ಪರೇಡ್ ಆರಂಭವಾಯಿತು. ಸ್ಪಿನ್ನರ್‌ಗಳ ಕೈಚಳಕ ರಂಗೇರಿತು. ತಂಡವು 46 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತು. 

ಆದರೆ ಅಲಿಕ್ ಅಥಾಂಜೆ (38 ರನ್) ಮತ್ತು ಜಸ್ಟಿನ್ ಗ್ರೀವ್ಸ್‌ ಅವರು ಆರನೇ ವಿಕೆಟ್ ಜೊತೆಯಾಟದಲ್ಲಿ 46 ರನ್‌ ಸೇರಿಸುವ ಮೂಲಕ ತಮ್ಮ ತಂಡದ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಊಟದ ನಂತರದ ಎಂಟನೇ ಓವರ್‌ನಲ್ಲಿ ವಾಷಿಂಗ್ಟನ್ ತಮ್ಮದೇ ಎಸೆತದಲ್ಲಿ ಪಡೆದ ಕ್ಯಾಚ್‌ಗೆ ಅಲಿಕ್ ನಿರ್ಗಮಿಸಿದರು. ಜೊತೆಯಾಟ ಮುರಿಯಿತು. ಕೆಳಕ್ರಮಾಂಕದ ಬ್ಯಾಟರ್‌ಗಳು ಸುಖಾಸುಮ್ಮನೇ ಬ್ಯಾಟ್ ಬೀಸಿ ವಿಕೆಟ್ ಒಪ್ಪಿಸುವ ಶಾಸ್ತ್ರ ನಿಭಾಯಿಸಿದರು. ಮಧ್ಯಾಹ್ನ 1.40ಕ್ಕೆ ವಿಂಡೀಸ್ ಇನಿಂಗ್ಸ್‌ಗೆ ತೆರೆಬಿತ್ತು. ಶತಕ ಗಳಿಸಿ, ನಾಲ್ಕು ವಿಕೆಟ್ ಪಡೆದ ರವೀಂದ್ರ ಜಡೇಜ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಸರಣಿಯ ಕೊನೆಯ ಮತ್ತು ಎರಡನೇ ಪಂದ್ಯವು ನವದೆಹಲಿಯಲ್ಲಿ ನಡೆಯಲಿದೆ. ಸರಣಿಯಲ್ಲಿ ಕ್ಲೀನ್‌ ಸ್ವೀಪ್ ಜಯ ಸಾಧಿಸುವ ಅವಕಾಶ ಭಾರತಕ್ಕೆ ಇದೆ. 1994–95ರ ನಂತರ ಭಾರತದ ನೆಲದಲ್ಲಿ ವಿಂಡೀಸ್ ಟೆಸ್ಟ್ ಸರಣಿ ಜಯಿಸಿಲ್ಲ. 

ಎರಡೂವರೆ ದಿನದಲ್ಲಿ ಮುಗಿದ ಟೆಸ್ಟ್ ಪಂದ್ಯ ಮೊಹಮ್ಮದ್ ಸಿರಾಜ್‌ಗೆ ಮತ್ತೆ ಮೂರು ವಿಕೆಟ್ ಶುಭಮನ್ ಗಿಲ್ ನಾಯಕತ್ವದಲ್ಲಿ ಭಾರತ ತಂಡವು ತವರಿನಲ್ಲಿ ಆಡಿದ ಮೊದಲ ಟೆಸ್ಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.