ADVERTISEMENT

ದುಲೀಪ್‌ ಟ್ರೋಫಿ: ಕನ್ನಡಿಗ ಕರುಣ್‌ ನಾಯರ್‌ ಶತಕ

ಇಂಡಿಯಾ ರೆಡ್‌–ಇಂಡಿಯಾ ಬ್ಲೂ ನಡುವಣ ಪಂದ್ಯ ಡ್ರಾ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2019, 20:15 IST
Last Updated 26 ಆಗಸ್ಟ್ 2019, 20:15 IST
ಇಂಡಿಯಾ ರೆಡ್‌ ತಂಡದ ಕರುಣ್‌ ನಾಯರ್‌ ಬ್ಯಾಟಿಂಗ್ ವೈಖರಿ –ಪ್ರಜಾವಾಣಿ ಚಿತ್ರ/ ಆರ್‌.ಶ್ರೀಕಂಠ ಶರ್ಮಾ
ಇಂಡಿಯಾ ರೆಡ್‌ ತಂಡದ ಕರುಣ್‌ ನಾಯರ್‌ ಬ್ಯಾಟಿಂಗ್ ವೈಖರಿ –ಪ್ರಜಾವಾಣಿ ಚಿತ್ರ/ ಆರ್‌.ಶ್ರೀಕಂಠ ಶರ್ಮಾ   

ಬೆಂಗಳೂರು: ಇಂಡಿಯಾ ರೆಡ್‌ ಮತ್ತು ಇಂಡಿಯಾ ಬ್ಲೂ ನಡುವಣ ದುಲೀಪ್‌ ಟ್ರೋಫಿ ಕ್ರಿಕೆಟ್‌ ಪಂದ್ಯ ನಿರೀಕ್ಷೆಯಂತೆಯೇ ಡ್ರಾ ಆಯಿತು. ಮೊದಲ ಇನಿಂಗ್ಸ್‌ ಮುನ್ನಡೆ ಪಡೆದಿದ್ದ ರೆಡ್‌ ತಂಡವು ಮೂರು ಪಾಯಿಂಟ್ಸ್‌ ಕಲೆಹಾಕಿ ಫೈನಲ್‌ಗೆ ಲಗ್ಗೆ ಇಟ್ಟಿತು.

ಅಂತಿಮ ದಿನವಾದ ಸೋಮವಾರ ಕನ್ನಡಿಗ ಕರುಣ್‌ ನಾಯರ್‌ (ಔಟಾಗದೆ 166; 223ಎ, 19ಬೌಂ, 1ಸಿ) ಶತಕ ಸಿಡಿಸಿ ಸಂಭ್ರಮಿಸಿದರು.

ನಗರದ ಹೊರವಲಯದಲ್ಲಿರುವ ಆಲೂರು ಮೈದಾನದಲ್ಲಿ 2 ವಿಕೆಟ್‌ಗೆ 93ರನ್‌ಗಳಿಂದ ದ್ವಿತೀಯ ಇನಿಂಗ್ಸ್‌ನ ಆಟ ಮುಂದುವರಿಸಿದ ಇಂಡಿಯಾ ರೆಡ್‌ ತಂಡ 88 ಓವರ್‌ಗಳಲ್ಲಿ 6 ವಿಕೆಟ್‌ಗೆ 297ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು.

ADVERTISEMENT

ಮೊದಲ ಇನಿಂಗ್ಸ್‌ನಲ್ಲಿ ಕೇವಲ ಒಂದು ರನ್‌ನಿಂದ ಶತಕ ವಂಚಿತರಾಗಿದ್ದ ರೆಡ್‌ ತಂಡದ ಕರುಣ್‌, ಎರಡನೇ ಇನಿಂಗ್ಸ್‌ನಲ್ಲಿ ಮೂರಂಕಿಯ ಗಡಿ ದಾಟಿ ನಿರಾಸೆ ಮರೆತರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಎರಡು ವರ್ಷಗಳ ನಂತರ ಶತಕ ಸಿಡಿಸಿದ ಖುಷಿ ಅವರದ್ದಾಯಿತು.

ಕರುಣ್‌ ಅವರಿಗೆ ಹಿಮಾಚಲ ಪ್ರದೇಶದ 25ರ ಹರೆಯದ ಆಟಗಾರ ಅಂಕಿತ್‌ ಕಾಲ್ಸಿ (64; 160ಎ, 5ಬೌಂ) ಉತ್ತಮ ಬೆಂಬಲ ನೀಡಿದರು. ಮೊದಲ ಇನಿಂಗ್ಸ್‌ನಲ್ಲಿ ಶತಕದ ಜೊತೆಯಾಟವಾಡಿದ್ದ ಈ ಜೋಡಿ ಎರಡನೇ ಇನಿಂಗ್ಸ್‌ನಲ್ಲೂ ಎದುರಾಳಿ ಬೌಲರ್‌ಗಳನ್ನು ಕಾಡಿತು. ಇವರು ಮೂರನೇ ವಿಕೆಟ್‌ ಪಾಲುದಾರಿಕೆಯಲ್ಲಿ 157ರನ್‌ ಸೇರಿಸಿದರು.

ಮೊದಲ ಇನಿಂಗ್ಸ್‌ ವೇಳೆ ಬೆನ್ನು ನೋವಿಗೆ ಒಳಗಾಗಿದ್ದ ವೇಗದ ಬೌಲರ್‌ ಬಾಸಿಲ್‌ ಥಂಪಿ, ಎರಡನೇ ಇನಿಂಗ್ಸ್‌ನಲ್ಲಿ ಕಣಕ್ಕಿಳಿಯಲಿಲ್ಲ. ಇದರಿಂದ ಬ್ಲೂ ತಂಡಕ್ಕೆ ಹಿನ್ನಡೆಯಾಯಿತು. ವೇಗಿ ದಿವೇಶ್‌ ಪಠಾಣಿಯಾ, ಸ್ಪಿನ್ನರ್‌ಗಳಾದ ಜಲಜ್‌ ಸಕ್ಸೇನಾ ಮತ್ತು ಸೌರಭ್‌ ಕುಮಾರ್‌ ಮೇಲೆ ಹೆಚ್ಚಿನ ಒತ್ತಡ ಬಿತ್ತು.

ಜಲಜ್‌ ಅವರು ಈ ಪಂದ್ಯದಲ್ಲಿ 162ರನ್‌ ನೀಡಿ 7 ವಿಕೆಟ್‌ ಉರುಳಿಸಿದರು. ಈ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 6,000 ರನ್‌ ಗಳಿಸಿ 300 ವಿಕೆಟ್‌ ಪಡೆದ ಆರನೇ ಆಟಗಾರ ಎಂಬ ಹಿರಿಮೆಗೆ ಭಾಜನರಾದರು.

ಎಸ್‌.ಅಬಿದ್‌ ಅಲಿ, ಲಾಲಾ ಅಮರನಾಥ್‌, ಸಂಜಯ್‌ ಬಂಗಾರ್‌, ಸಾಯಿರಾಜ್‌ ಬಹುತುಳೆ ಮತ್ತು ಎಸ್‌.ವೆಂಕಟರಾಘವನ್‌ ಅವರು ಈ ಸಾಧನೆ ಮಾಡಿದ್ದರು.

ಸಂಕ್ಷಿಪ್ತ ಸ್ಕೋರ್‌: ಇಂಡಿಯಾ ರೆಡ್‌; ಮೊದಲ ಇನಿಂಗ್ಸ್‌: 124 ಓವರ್‌ಗಳಲ್ಲಿ 285 ಮತ್ತು 88 ಓವರ್‌ಗಳಲ್ಲಿ 6 ವಿಕೆಟ್‌ಗೆ 297 ಡಿಕ್ಲೇರ್ಡ್‌ (ಅಭಿಮನ್ಯು ಈಶ್ವರನ್‌ 18, ಕರುಣ್‌ ನಾಯರ್‌ ಔಟಾಗದೆ 166, ಅಂಕಿತ್‌ ಕಾಲ್ಸಿ 64, ಹರ್‌ಪ್ರೀತ್‌ ಸಿಂಗ್‌ 15, ಇಶಾನ್‌ ಕಿಶನ್‌ 12; ದಿವೇಶ್‌ ಪಠಾಣಿಯಾ 53ಕ್ಕೆ2, ಜಲಜ್‌ ಸಕ್ಸೇನಾ 105ಕ್ಕೆ4).

ಇಂಡಿಯಾ ಬ್ಲೂ: ಪ್ರಥಮ ಇನಿಂಗ್ಸ್‌; 83.2 ಓವರ್‌ಗಳಲ್ಲಿ 255.

ಫಲಿತಾಂಶ: ಡ್ರಾ. ಪಂದ್ಯಶ್ರೇಷ್ಠ: ಕರುಣ್‌ ನಾಯರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.