ADVERTISEMENT

Duleep Trophy | ಕುತೂಹಲದ ಹಾದಿಯಲ್ಲಿ ಫೈನಲ್

ದಕ್ಷಿಣ ವಲಯಕ್ಕೆ ಉತ್ತಮ ಮುನ್ನಡೆ; ವಿದ್ವತ್‌ ಕಾವೇರಪ್ಪಗೆ ಏಳು ವಿಕೆಟ್

ಗಿರೀಶದೊಡ್ಡಮನಿ
Published 14 ಜುಲೈ 2023, 17:36 IST
Last Updated 14 ಜುಲೈ 2023, 17:36 IST
ಬೆಂಗಳೂರಿನಲ್ಲಿ ನಡೆಯುತ್ತಿರುವ ದುಲೀಪ್‌ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಶ್ಚಿಮ ವಲಯದ ವಿರುದ್ಧ ದಕ್ಷಿಣ ವಲಯದ ಹನುಮ ವಿಹಾರಿ ಬ್ಯಾಟಿಂಗ್  ಪ್ರ
ಬೆಂಗಳೂರಿನಲ್ಲಿ ನಡೆಯುತ್ತಿರುವ ದುಲೀಪ್‌ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಶ್ಚಿಮ ವಲಯದ ವಿರುದ್ಧ ದಕ್ಷಿಣ ವಲಯದ ಹನುಮ ವಿಹಾರಿ ಬ್ಯಾಟಿಂಗ್  ಪ್ರ   ಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.

ಬೆಂಗಳೂರು: ವಿದ್ವತ್ ಕಾವೇರಪ್ಪ ದಾಳಿಗೆ ಕನಲಿದ ಪಶ್ಚಿಮ ವಲಯ ತಂಡವು ದುಲೀಪ್ ಟ್ರೋಫಿ ಫೈನಲ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 67 ರನ್‌ಗಳ ಹಿನ್ನಡೆ ಅನುಭವಿಸಿತು.

ಆದರೂ ಛಲ ಬಿಡದೇ ದಕ್ಷಿಣ ವಲಯದ ಎರಡನೇ ಇನಿಂಗ್ಸ್‌ನ ಬ್ಯಾಟಿಂಗ್‌ಗೆ ಪೆಟ್ಟು ನೀಡುವಲ್ಲಿ ಯಶಸ್ವಿಯಾಯಿತು. ಇದರಿಂದಾಗಿ ಪಂದ್ಯವು ರೋಚಕ ಫಲಿತಾಂಶ ಕಾಣುವತ್ತ ಸಾಗಿದೆ. ಶುಕ್ರವಾರ ಸಂಜೆ ಮಂದಬೆಳಕಿನಿಂದಾಗಿ ಆಟ ನಿಂತಾಗ ದಕ್ಷಿಣ ವಲಯ ತಂಡವು ಎರಡನೇ ಇನಿಂಗ್ಸ್‌ನಲ್ಲಿ 60 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 181 ರನ್ ಗಳಿಸಿತು. ಒಟ್ಟು 248 ರನ್‌ಗಳ ಮುನ್ನಡೆಯಲ್ಲಿದೆ.

ಹನುಮವಿಹಾರಿ (42; 89ಎ), ಮಯಂಕ್ ಅಗರವಾಲ್ (35; 68ಎ) ಹಾಗೂ ರಿಕಿ ಭುಯ್ (37; 69ಎ) ಉಪಯುಕ್ತ ಕಾಣಿಕೆ ನೀಡಿದರು. ಆದರೆ, ಉಳಿದ ಬ್ಯಾಟರ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಸಮಯ ಕಳೆಯಲಿಲ್ಲ.

ADVERTISEMENT

ಪಂದ್ಯದಲ್ಲಿ ಇನ್ನೂ ಎರಡು ದಿನಗಳ ಆಟ ಬಾಕಿ ಇದೆ. ಶನಿವಾರ ಬೆಳಿಗ್ಗೆ ದಕ್ಷಿಣ ವಲಯದ ಮೂರು ವಿಕೆಟ್‌ಗಳನ್ನು ಬೇಗನೆ ಕಬಳಿಸಬೇಕು. ಉತ್ತಮ ಬ್ಯಾಟರ್‌ಗಳ ಪಡೆ ಇರುವ ಪಶ್ಚಿಮ ವಲಯವು ತಾಳ್ಮೆ ಹಾಗೂ ಏಕಾಗ್ರತೆಯಿಂದ ಆಡಿದರೆ ಗುರಿಸಾಧನೆ ಕಷ್ಟವಾಗಲಿಕ್ಕಿಲ್ಲ.

ಆದರೆ ಶನಿವಾರ ಮತ್ತು ಭಾನುವಾರವೂ ಮಳೆ ಸುರಿಯುವ ಸಾಧ್ಯತೆ ಇದೆ. ಇದರಿಂದಾಗಿ ಪೂರ್ಣಪ್ರಮಾಣದ ಸಮಯ ಸಿಗುವ ಸಾಧ್ಯತೆ ಕಡಿಮೆ. ಈ ನಡುವೆಯೇ ದಕ್ಷಿಣ ವಲಯದ ಬೌಲರ್‌ಗಳು ತಮ್ಮ ಸಾಮರ್ಥ್ಯವನ್ನು ಪಣಕ್ಕೊಡ್ಡಬೇಕಾಗಬಹುದು. ಪಶ್ಚಿಮ ತಂಡಕ್ಕೆ ಪೃಥ್ವಿ ಶಾ, ಸರ್ಫರಾಜ್ ಖಾನ್, ಸೂರ್ಯಕುಮಾರ್ ಯಾದವ್ ಮತ್ತು ಚೇತೇಶ್ವರ್ ಪೂಜಾರ ಅವರ ಬ್ಯಾಟಿಂಗ್ ಪ್ರಮುಖವಾಗಲಿದೆ. ಈ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ಬೌಲರ್‌ಗಳಾದ ವಿದ್ವತ್, ವೈಶಾಖ ಮತ್ತು ಆರ್.ಕೌಶಿಕ್ ಅವರು ಮೊದಲ ಇನಿಂಗ್ಸ್‌ನಂತೆಯೇ ಯಶಸ್ವಿಯಾದರೆ ದಕ್ಷಿಣದ ಗೆಲುವಿನ ಹಾದಿ ಸುಗಮವಾಗಬಹುದು.

ವಿದ್ವತ್‌ಗೆ ಏಳು ವಿಕೆಟ್

ಪಂದ್ಯದ ಮೊದಲ ದಿನ ನಾಲ್ಕು ವಿಕೆಟ್ ಗಳಿಸಿದ್ದ ಕರ್ನಾಟಕದ ವೇಗಿ ವಿದ್ವತ್ ಕಾವೇರಪ್ಪ, ಮೂರನೇ ದಿನದಾಟದ ಬೆಳಿಗ್ಗೆ ಪಶ್ಚಿಮ ವಲಯದ ಉಳಿದಿದ್ದ ಮೂರು ವಿಕೆಟ್‌ಗಳನ್ನೂ ತಮ್ಮ ಬುಟ್ಟಿಗೆ ಹಾಕಿಕೊಂಡರು.

ದುಲೀಪ್ ಟ್ರೋಫಿ ಇತಿಹಾಸದಲ್ಲಿ ಏಳು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಗಳಿಸಿದ ಕರ್ನಾಟಕದ ಮೂರನೇ ಬೌಲರ್ ಹೆಗ್ಗಳಿಕೆಗೆ ಪಾತ್ರರಾದರು. ಬಿ.ಎಸ್. ಚಂದ್ರಶೇಖರ್ ಮತ್ತು ವೆಂಕಟೇಶ್ ಪ್ರಸಾದ್ ಅವರು ಮೊದಲೆರಡು ಸ್ಥಾನಗಳಲ್ಲಿದ್ದಾರೆ. ವಿದ್ವತ್ ಸೆಮಿಫೈನಲ್‌ನಲ್ಲಿಯೂ ಐದು ವಿಕೆಟ್ ಗೊಂಚಲು ಗಳಿಸಿದ್ದರು.

ಮಂದಬೆಳಕು: ಕಳೆದೆರಡು ದಿನಗಳಂತೆಯೇ ಮೂರನೇ ದಿನದಲ್ಲಿಯೂ ಮಂದಬೆಳಕು ಮತ್ತು ಮಳೆಯಿಂದ ಅಟಕ್ಕೆ ಅಡ್ಡಿಯಾಯಿತು. ಊಟದ ವಿರಾಮದ ನಂತರ 22 ನಿಮಿಷಗಳವರೆಗೆ ಮಂದಬೆಳಕಿನ ಕಾರಣ ಆಟ ಸ್ಥಗಿತವಾಗಿತ್ತು. ನಂತರ ಚಹಾ ವಿರಾಮಕ್ಕೂ ಸ್ವಲ್ಪ ಹೊತ್ತು ಮುನ್ನ ಆರು ನಿಮಿಷದವರೆಗೆ ಮಂದಬೆಳಕಿನಿಂದ ಆಟ ನಿಂತಿತು. ಮತ್ತೆ ಆರಂಭವಾಯಿತು. ಆದರೆ ಸಂಜೆ 4.55ಕ್ಕೆ ಮತ್ತೆ ಕಾರ್ಮೋಡಗಳು ಆವರಿಸಿದ್ದರಿಂದ ದಿನದಾಟ ಮುಗಿಯಿತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ದಕ್ಷಿಣ ವಲಯ: 78.4 ಓವರ್‌ಗಳಲ್ಲಿ 213. ಪಶ್ವಿಮ ವಲಯ: 51 ಓವರ್‌ಗಳಲ್ಲಿ 146(ಅತಿಥ್ ಶೇಠ್ 12, ವಿದ್ವತ್ ಕಾವೇರಪ್ಪ 53ಕ್ಕೆ7, ವೈಶಾಖ ವಿಜಯಕುಮಾರ್ 33ಕ್ಕೆ2) ಎರಡನೇ ಇನಿಂಗ್ಸ್: ದಕ್ಷಿಣ ವಲಯ: 60 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 181(ಮಯಂಕ್ ಅಗರವಾಲ್ 35, ಹನುಮವಿಹಾರಿ 42, ರಿಕಿ ಭುಯ್ 37, ಸಚಿನ್ ಬೇಬೆ 28, ರವಿಶ್ರೀನಿವಾಸನ್ ಸಾಯಿಕಿಶೋರ್ 16, ಅರ್ಜನ್ ನಾಗಸವಾಲಾ 52ಕ್ಕೆ2, ಅತಿಥ್ ಶೇಠ್ 38ಕ್ಕೆ2, ಧರ್ಮೇಂದ್ರಹಿಂಹ ಜಡೇಜ 27ಕ್ಕೆ2)

Cut-off box - ಫೀಲ್ಡಿಂಗ್ ವೇಳೆ ಗಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.