ADVERTISEMENT

NZ vs BAN: ಬಾಂಗ್ಲಾ ದಾಳಿಗೆ ಕಿವೀಸ್ ಗಲಿಬಿಲಿ; ಲಥಾಮ್ ಪಡೆಗೆ ಸೋಲಿನ ಭೀತಿ

ಏಜೆನ್ಸೀಸ್
Published 4 ಜನವರಿ 2022, 11:28 IST
Last Updated 4 ಜನವರಿ 2022, 11:28 IST
ನ್ಯೂಜಿಲೆಂಡ್‌ ತಂಡದ ಡೆವೊನ್ ಕಾನ್ವೆ ವಿಕೆಟ್ ಗಳಿಸಿದಾಗ ಬಾಂಗ್ಲಾದೇಶ ತಂಡದ ಬೌಲರ್ ಇಬಾದತ್ ಹುಸೇನ್ ಸೆಲ್ಯೂಟ್ ಮಾಡಿ ಸಂಭ್ರಮಿಸಿದರು  –ಎಎಫ್‌ಪಿ ಚಿತ್ರ
ನ್ಯೂಜಿಲೆಂಡ್‌ ತಂಡದ ಡೆವೊನ್ ಕಾನ್ವೆ ವಿಕೆಟ್ ಗಳಿಸಿದಾಗ ಬಾಂಗ್ಲಾದೇಶ ತಂಡದ ಬೌಲರ್ ಇಬಾದತ್ ಹುಸೇನ್ ಸೆಲ್ಯೂಟ್ ಮಾಡಿ ಸಂಭ್ರಮಿಸಿದರು  –ಎಎಫ್‌ಪಿ ಚಿತ್ರ   

ಮೌಂಟ್ ಮಾಂಗನೂಯಿ: ಬಾಂಗ್ಲಾದೇಶ ತಂಡದ ಮಧ್ಯಮವೇಗಿ ಇಬಾದತ್ ಹುಸೇನ್ ಪರಿಣಾಮಕಾರಿ ದಾಳಿಯ ಮುಂದೆ ನ್ಯೂಜಿಲೆಂಡ್ ಸೋಲಿನ ಆತಂಕ ಎದುರಿಸುತ್ತಿದೆ.

ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ ಬಾಂಗ್ಲಾದೇಶವು ಸೋಮವಾರ ಮೊದಲ ಇನಿಂಗ್ಸ್‌ನಲ್ಲಿ 130 ರನ್‌ಗಳ ಮುನ್ನಡೆ ಗಳಿಸಿತ್ತು. ಇಬಾದತ್ (39ಕ್ಕೆ4) ಬೌಲಿಂಗ್ ಮುಂದೆ ಕುಸಿದ ಆತಿಥೇಯ ತಂಡವು ನಾಲ್ಕನೇ ದಿನದಾಟದ ಮುಕ್ತಾಯಕ್ಕೆ 63 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 147 ರನ್ ಗಳಿಸಿತು. ರಾಸ್ ಟೇಲರ್ (ಬ್ಯಾಟಿಂಗ್ 37) ಮತ್ತು ರಚಿನ್ ರವೀಂದ್ರ (ಬ್ಯಾಟಿಂಗ್ 6) ಕ್ರೀಸ್‌ನಲ್ಲಿದ್ದಾರೆ.

ಇನಿಂಗ್ಸ್‌ನ 9ನೇ ಓವರ್‌ನಲ್ಲಿಯೇ ತಸ್ಕಿನ್ ಅಹಮದ್ ಮೊದಲ ಏಟು ಹೊಟ್ಟರು.ಆರಂಭಿಕ ಬ್ಯಾಟರ್ ಟಾಮ್ ಲಥಾಮ್ ವಿಕೆಟ್ ಗಳಿಸಿದರು. ಆದರೆ ಇನ್ನೊಂದು ಬದಿಯಲ್ಲಿದ್ದ ವಿಲ್ ಯಂಗ್ (69; 172ಎ, 4X7) ತಾಳ್ಮೆಯಿಂದ ಆಡಿದರು.

ADVERTISEMENT

ಅರ್ಧಶತಕದ ಗಡಿ ದಾಟಿದರು. ಮೊದಲ ಇನಿಂಗ್ಸ್‌ನಲ್ಲಿ ಮಿಂಚಿದ್ದ ಡೆವೊನ್ ಕಾನ್ವೆ (13 ರನ್) ಅವರನ್ನು ಹೆಚ್ಚು ಹೊತ್ತು ಆಡಲು ಇಬಾದತ್ ಬಿಡಲಿಲ್ಲ. ಇದಾಗಿ 19 ಓವರ್‌ಗಳ ನಂತರ ಯಂಗ್ ವಿಕೆಟ್‌ ಕೂಡ ಇಬಾದತ್ ಖಾತೆ ಸೇರಿತು. ಹೆನ್ರಿ ನಿಕೋಲ್ಸ್‌ಗೆ ಖಾತೆಯನ್ನೇ ತೆರೆಯಲು ಬಿಡದ ಇಬಾದತ್ ಮಿಂಚಿದರು. ಅಷ್ಟಕ್ಕೇ ನಿಲ್ಲದ ಅವರು ಇನ್ನೊಂದು ಓವರ್‌ನಲ್ಲಿ ಟಾಮ್ ಬ್ಲಂಡೆಲ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು.

ಅನುಭವಿ ಟೇಲರ್ ಅವರ ಆಟದಿಂದಾಗಿ ತಂಡವು ಬಾಂಗ್ಲಾದ ಮುನ್ನಡೆ ಮೊತ್ತವನ್ನು ಚುಕ್ತಾ ಮಾಡಿದೆ. 17 ರನ್‌ಗಳ ಅಲ್ಪ ಮುನ್ನಡೆ ಪಡೆದಿದೆ.

ಸಂಕ್ಷಿಪ್ತ ಸ್ಕೋರು
ಮೊದಲ ಇನಿಂಗ್ಸ್
ನ್ಯೂಜಿಲೆಂಡ್:
328
ಬಾಂಗ್ಲಾದೇಶ: 458

ಎರಡನೇ ಇನಿಂಗ್ಸ್
ನ್ಯೂಜಿಲೆಂಡ್:
63 ಓವರ್‌ಗಳಲ್ಲಿ 5ಕ್ಕೆ 147 (ವಿಲ್ ಯಂಗ್ 69, ರಾಸ್ ಟೇಲರ್ ಬ್ಯಾಟಿಂಗ್ 37, ರಚಿನ್ ರವೀಂದ್ರ ಬ್ಯಾಟಿಂಗ್ 6, ಇಬಾದತ್ ಹುಸೇನ್ 39ಕ್ಕೆ4)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.