ADVERTISEMENT

ENG vs PAK: ಬೋಳು ತಲೆಯಲ್ಲಿ ಚೆಂಡಿಗೆ ಹೊಳಪು ನೀಡಲು ವಿನೂತನ ಪ್ರಯತ್ನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಡಿಸೆಂಬರ್ 2022, 12:44 IST
Last Updated 3 ಡಿಸೆಂಬರ್ 2022, 12:44 IST
ಟ್ವಿಟರ್ ಸ್ಕ್ರೀನ್‌ಶಾಟ್
ಟ್ವಿಟರ್ ಸ್ಕ್ರೀನ್‌ಶಾಟ್   

ರಾವಲ್ಪಿಂಡಿ: ಕ್ರಿಕೆಟ್‌ ಪಂದ್ಯಗಳಲ್ಲಿ ಚೆಂಡಿಗೆ ಹೊಳಪು ಮಾಡಲು ಎಂಜಲು ಬಳಸುವುದನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನಿಷೇಧಿಸಿದೆ.

ಈ ನಡುವೆ ಇಂಗ್ಲೆಂಡ್‌ನ ಮಾಜಿ ನಾಯಕ ಜೋ ರೂಟ್, ಚೆಂಡಿಗೆ ಹೊಳಲು ನೀಡಲು ವಿನೂತನ ಪ್ರಯತ್ನ ಮಾಡಿದ್ದಾರೆ. ಇದಕ್ಕಾಗಿ ತಮ್ಮ ಸಹ ಆಟಗಾರನ ಬೋಳು ತಲೆಯನ್ನು ಬಳಕೆ ಮಾಡಿದ್ದಾರೆ.

ರಾವಿಲ್ಪಿಂಡಿಯಲ್ಲಿ ಆತಿಥೇಯ ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಈ ಪ್ರಸಂಗ ನಡೆಯಿತು.

ADVERTISEMENT

ಬ್ಯಾಟರ್‌ಗಳು ಅಧಿಪತ್ಯ ಸ್ಥಾಪಿಸಿರುವ ಪಂದ್ಯದಲ್ಲಿ ವಿಕೆಟ್ ಕಬಳಿಸುವುದು ಬೌಲರ್‌ಗಳ ಪಾಲಿಗೆ ಕಷ್ಟಕರವೆನಿಸಿದೆ. ಪಾಕಿಸ್ತಾನ ಇನ್ನಿಂಗ್ಸ್‌ನ 72ನೇ ಓವರ್ ಬಳಿಕ ಸಹ ಆಟಗಾರ ಜ್ಯಾಕ್ ಲೀಚ್ ಅವರ ಬೋಳು ತಲೆಯಲ್ಲಿ ಚೆಂಡನ್ನು ಒರೆಸುವ ಮೂಲಕ ಜೋ ರೂಟ್, ಚೆಂಡಿನ ಹೊಳಪು ನಿರ್ವಹಿಸುವ ಪ್ರಯತ್ನ ಮಾಡಿದ್ದಾರೆ.

ಚೆಂಡಿನ ಹೊಳಪು ಕುಂದಿದ್ದರಿಂದ ಬೌಲರ್‌ಗಳಿಗೆ ಸ್ವಿಂಗ್ ಮಾಡುವುದು ಕಠಿಣವೆನಿಸುತ್ತದೆ. ಹಾಗಾಗಿ ಜ್ಯಾಕ್ ಲೀಚ್ ಬೆವರಿನಿಂದ ಚೆಂಡಿಗೆ ಹೊಳಪು ನೀಡಿದ್ದಾರೆ.ಇದುನೋಡುಗರಿಗೆ ವಿಭಿನ್ನ ಅನುಭವ ನೀಡಿದೆ.

ಏತನ್ಮಧ್ಯೆ ರಾವಿಲ್ಪಿಂಡಿ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ 657 ರನ್‌ಗಳಿಗೆ ಉತ್ತರವಾಗಿ ಪಾಕಿಸ್ತಾನ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ ಮೂರನೇ ದಿನದಂತ್ಯಕ್ಕೆ ಏಳು ವಿಕೆಟ್ ನಷ್ಟಕ್ಕೆ 499 ರನ್ ಗಳಿಸಿದ್ದು, 158 ರನ್ ಹಿನ್ನಡೆಯಲ್ಲಿದೆ. ಅಬ್ಧುಲ್ಲಾ ಶಫೀಕ್ (114), ಇಮಾಮ್ ಉಲ್ ಹಕ್ (121) ಮತ್ತು ನಾಯಕ ಬಾಬರ್ ಆಜಂ (136) ಶತಕಗಳ ಸಾಧನೆ ಮಾಡಿದ್ದಾರೆ.

ಇದಕ್ಕೂ ಮುನ್ನ ಮೊದಲ ದಿನದಾಟದಲ್ಲಿ ಇಂಗ್ಲೆಂಡ್ 506 ರನ್ ಪೇರಿಸಿ ದಾಖಲೆ ಸೃಷ್ಟಿಸಿತ್ತು. ಇಂಗ್ಲೆಂಡ್ ಪರ ಜ್ಯಾಕ್ ಕ್ರಾವ್ಲಿ (122), ಬೆನ್ ಡಕೆಟ್ (107), ಒಲಿ ಪೊಪ್ (108) ಮತ್ತು ಹ್ಯಾರಿ ಬ್ರೂಕ್ (153) ಶತಕ ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.