ಲಂಡನ್ : ‘ನ್ಯೂಜಿಲೆಂಡ್ ನಮಗಿಂತಲೂ ಶ್ರೇಷ್ಠ ತಂಡ. ಅವರು ಟೂರ್ನಿಯಲ್ಲಿ ನಮಗಿಂತಲೂ ಚೆನ್ನಾಗಿ ಆಡಿ ಫೈನಲ್ ಪ್ರವೇಶಿಸಿದ್ದರು’ ಎಂದು ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಗುಂಪು ಹಂತದಲ್ಲಿ ಕೇನ್ ವಿಲಿಯಮ್ಸನ್ ಬಳಗದಿಂದ ಮೂಡಿಬಂದ ಸಾಮರ್ಥ್ಯ ಅಮೋಘವಾದುದು. ಅವರು ಸೆಮಿಫೈನಲ್‌ನಲ್ಲಿ ಭಾರತದಂತಹ ಬಲಿಷ್ಠ ತಂಡವನ್ನು ಮಣಿಸಿದ್ದರು, ಪ್ರಶಸ್ತಿ ಕೈತಪ್ಪಿದ್ದರಿಂದ ನೋವಾಗುವುದು ಸಹಜ’ ಎಂದು ಪಂದ್ಯದ ನಂತರ ಪ್ರತಿಕ್ರಿಯಿಸಿದರು.
ವಿಶ್ವಕಪ್ ಗೆಲುವು ನಿಮ್ಮ ಬದುಕಿನ ದಿಕ್ಕು ಬದಲಿಸಿತಲ್ಲವೇ ಎಂಬ ಪ್ರಶ್ನೆಗೆ ‘ಹಾಗೇನೂ ಇಲ್ಲ. ಜೀವನದ ಪ್ರತಿ ಕ್ಷಣವನ್ನೂ ಖುಷಿಯಿಂದಲೇ ಕಳೆಯಬೇಕೆಂಬುದು ನನ್ನ ಆಸೆ. ಅದರಂತೆಯೇ ಬದುಕಿದ್ದೇನೆ. ವಿಶ್ವಕಪ್ ಗೆದ್ದಿದ್ದು ಹೆಮ್ಮೆಯ ವಿಷಯ. ಇದರಿಂದ ಬದುಕಿನಲ್ಲಿ ಬಹುದೊಡ್ಡ ಬದಲಾವಣೆಯಾಗಲಿದೆ ಎಂಬ ಭಾವನೆ ಖಂಡಿತವಾಗಿಯೂ ಇಲ್ಲ’ ಎಂದು ನಕ್ಕರು.
‘ಪಂದ್ಯಕ್ಕೂ ಮುನ್ನ ಸಹ ಆಟಗಾರ ಆದಿಲ್ ರಶೀದ್ ಜೊತೆ ಮಾತನಾಡಿದ್ದೆ. ಅಲ್ಲಾಹು (ದೇವರು) ನಮ್ಮ ಪರವಾಗಿದ್ದಾನೆ ಎಂದು ಅವರು ಹೇಳಿದ್ದರು. ನಿಜವಾಗಿಯೂ ಅಲ್ಲಾಹು ನಮ್ಮ ಮೇಲೆ ಕೃಪೆ ತೋರಿದ’ ಎಂದರು.
ಮುಂದಿನ ನಾಲ್ಕು ವರ್ಷಗಳ ನಂತರ ನಿಮ್ಮ ನಡೆ ಏನು ಎಂಬ ಪ್ರಶ್ನೆಗೆ ‘ನಾಲ್ಕು ವರ್ಷ ಎಂಬುದು ಸುದೀರ್ಘ ಅವಧಿ. ಈ ಸಮಯದಲ್ಲಿ ಏನು ಬೇಕಾದರೂ ಆಗಬಹುದು. ತಂಡದಲ್ಲಿರುವ ಯುವ ಆಟಗಾರರು ಪಂದ್ಯದಿಂದ ಪಂದ್ಯಕ್ಕೆ ಸಾಮರ್ಥ್ಯ ವೃದ್ಧಿಸಿಕೊಂಡು ಸಾಗುತ್ತಿದ್ದಾರೆ. ಅವರೊಂದಿಗೆ ಪೈಪೋಟಿ ನಡೆಸುವುದು ಕಷ್ಟವಾಗಬಹುದು. ತಂಡದಿಂದಲೇ ಹೊರ ಬೀಳಲೂಬಹುದು. ಇದು ಸಂಭ್ರಮಿಸುವ ಸಮಯ. ಹೀಗಾಗಿ ಭವಿಷ್ಯದ ಸಾಧ್ಯತೆಗಳ ಬಗ್ಗೆ ಈಗಲೇ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ನುಡಿದರು.
ಸ್ಟೋಕ್ಸ್, ಹೋರಾಟದ ಗುಣ ಮೈಗೂಡಿಸಿಕೊಳ್ಳಿ: ‘ಭಾನುವಾರ ಬೆನ್ ಸ್ಟೋಕ್ಸ್ ಆಟವನ್ನು ನೋಡಿದವರು ಅವರ ಹೋರಾಟ ಗುಣವನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸಬೇಕು’ ಎಂದು ಮಾರ್ಗನ್ ಹೇಳಿದ್ದಾರೆ.
‘ಸಂದಿಗ್ಧ ಪರಿಸ್ಥಿತಿಯಲ್ಲೂ ಸ್ಟೋಕ್ಸ್ ಎದೆಗುಂದಲಿಲ್ಲ. ಒತ್ತಡವನ್ನು ಮೀರಿನಿಂತು ಆಡಿ ಇಂಗ್ಲೆಂಡ್ ತಂಡದ ನಾಲ್ಕು ದಶಕಗಳ ಕನಸನ್ನು ಸಾಕಾರಗೊಳಿಸಿದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನೋವು ನುಂಗುವುದು ಕಷ್ಟ: ‘ಪ್ರಶಸ್ತಿ ಗೆಲ್ಲಲು ಎರಡೂ ತಂಡಗಳು ಛಲದಿಂದ ಹೋರಾಡಿದವು. ಟ್ರೋಫಿ ಕೈತಪ್ಪಿದ್ದರಿಂದ ತುಂಬಾ ದುಃಖವಾಗಿದೆ. ಆ ನೋವನ್ನು ಸಹಿಸಿಕೊಳ್ಳುವುದು ಅಸಾಧ್ಯ’ ಎಂದು ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ತಿಳಿಸಿದರು.
‘ಬೌಂಡರಿಗಳ ಲೆಕ್ಕ’ ನಿಯಮ ನಿಮಗೆ ಮುಳುವಾಯಿತೆ ಎಂಬ ಪ್ರಶ್ನೆಗೆ ‘ಈ ಪ್ರಶ್ನೆಯನ್ನು ನೀವು ಕೇಳುತ್ತೀರಿ, ಅದಕ್ಕೆ ಇಲ್ಲಿ ಕುಳಿತು ಉತ್ತರಿಸುತ್ತೇನೆ ಎಂದು ಖಂಡಿತವಾಗಿಯೂ ಭಾವಿಸಿರಲಿಲ್ಲ’ ಎಂದು ಮುಗುಳ್ನಕ್ಕರು.
‘ಐಸಿಸಿ ಮೊದಲೇ ನಿಯಮ ರೂಪಿಸಿದೆ. ಅದನ್ನು ಪ್ರಶ್ನಿಸುವುದಿಲ್ಲ. ಈ ನಿಯಮದ ಅನುಸಾರ ಫಲಿತಾಂಶ ನಿರ್ಧರಿತವಾಗುತ್ತದೆ ಎಂದು ಯಾರು ತಾನೆ ಊಹಿಸಿಯಾರು. ಫೈನಲ್ ಹೋರಾಟ ರೋಚಕತೆಯಿಂದ ಕೂಡಿತ್ತು. ಅಭಿಮಾನಿಗಳಿಗಂತೂ ಮನರಂಜನೆ ಸಿಕ್ಕಿದೆ’ ಎಂದರು.
ಬೌಂಡರಿ ಲೆಕ್ಕದಲ್ಲಿ ಫೈನಲ್ ಫಲಿತಾಂಶ ನಿರ್ಧರಿಸಿದ್ದರಿಂದ ನ್ಯೂಜಿಲೆಂಡ್‌ಗೆ ಅನ್ಯಾಯವಾಗಿದೆ. ಐಸಿಸಿಯ ಈ ನಿಯಮ ಅಸಮಂಜಸವಾದುದು ಎಂದು ನ್ಯೂಜಿಲೆಂಡ್ ಮಾಧ್ಯಮಗಳು ಕಿಡಿಕಾರಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.