ADVERTISEMENT

ಮತ್ತೊಂದು ಗೆಲುವಿನತ್ತ ಇಂಗ್ಲೆಂಡ್‌ ಚಿತ್ತ

ಇಂದು ಟ್ರೆಂಟ್‌ಬ್ರಿಜ್‌ನಲ್ಲಿ ಹೋರಾಟ: ಪಾಕಿಸ್ತಾನಕ್ಕೆ ಪುಟಿದೇಳುವ ಹಂಬಲ

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 18:54 IST
Last Updated 2 ಜೂನ್ 2019, 18:54 IST
   

ನಾಟಿಂಗಂ (ಪಿಟಿಐ): ಮೊದಲ ಪಂದ್ಯದಲ್ಲೇ ಬಲಿಷ್ಠ ದಕ್ಷಿಣ ಆಫ್ರಿಕಾವನ್ನು ಮಣಿಸಿ ವಿಶ್ವಾಸ ಹೆಚ್ಚಿಸಿಕೊಂಡಿರುವ ಇಂಗ್ಲೆಂಡ್‌ ತಂಡವು ಈಗ ಮತ್ತೊಂದು ಗೆಲುವಿನ ಮೇಲೆ ಕಣ್ಣಿಟ್ಟಿದೆ.

ಟ್ರೆಂಟ್‌ಬ್ರಿಜ್‌ನಲ್ಲಿ ಸೋಮವಾರ ನಡೆಯುವ ಪಂದ್ಯದಲ್ಲಿ ಏಯಾನ್‌ ಮಾರ್ಗನ್‌ ಬಳಗವು ಪಾಕಿಸ್ತಾನ ತಂಡದ ಸವಾಲು ಎದುರಿಸಲಿದೆ.

ಟ್ರೆಂಟ್‌ಬ್ರಿಜ್‌, ಇಂಗ್ಲೆಂಡ್‌ ಪಾಲಿನ ಅದೃಷ್ಟದ ಅಂಗಳ. ಈ ಮೈದಾನದಲ್ಲಿ ಆಡಿರುವ ಎರಡು ವಿಶ್ವಕಪ್‌ ಪಂದ್ಯಗಳಲ್ಲೂ ಆಂಗ್ಲರ ನಾಡಿನ ತಂಡವು ಗೆಲುವಿನ ಸಿಹಿ ಸವಿದಿದೆ.

ADVERTISEMENT

2016 ಆಗಸ್ಟ್‌ 30ರಂದು ನಡೆದಿದ್ದ ಪಾಕಿಸ್ತಾನ ಎದುರಿನ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ 50 ಓವರ್‌ಗಳಲ್ಲಿ 3 ವಿಕೆಟ್‌ಗೆ 444ರನ್‌ ಗಳಿಸಿ ವಿಶ್ವದಾಖಲೆ ನಿರ್ಮಿಸಿತ್ತು. ಇದೇ ಅಂಗಳದಲ್ಲಿ 2018 ಜೂನ್‌ 19ರಂದು ಆಯೋಜನೆಯಾಗಿದ್ದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 481ರನ್‌ ಕಲೆಹಾಕಿ ವಿಶ್ವ ದಾಖಲೆಯನ್ನು ಉತ್ತಮ ಪಡಿಸಿಕೊಂಡಿತ್ತು.

ಬ್ಯಾಟ್ಸ್‌ಮನ್‌ಗಳ ಪಾಲಿನ ಸ್ವರ್ಗ ಎನಿಸಿರುವ ಈ ಅಂಗಳದಲ್ಲಿ ಸೋಮವಾರವೂ ರನ್‌ ಹೊಳೆ ಹರಿಯುವ ನಿರೀಕ್ಷೆ ಇದೆ.

ಈ ಸಲ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನಿಸಿರುವ ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ ವಿರುದ್ಧ 104ರನ್‌ಗಳಿಂದ ಜಯಭೇರಿ ಮೊಳಗಿಸಿತ್ತು. ಜೇಸನ್ ರಾಯ್‌, ಜೋ ರೂಟ್‌, ನಾಯಕ ಮಾರ್ಗನ್‌ ಮತ್ತು ಬೆನ್‌ ಸ್ಟೋಕ್ಸ್‌ ಅರ್ಧಶತಕ ದಾಖಲಿಸಿ ಮಿಂಚಿದ್ದರು. ಅಮೋಘ ಲಯದಲ್ಲಿರುವ ಇವರು ಸೋಮವಾರವೂ ರನ್‌ ಮಳೆ ಸುರಿಸಲು ಸಜ್ಜಾಗಿದ್ದಾರೆ.

ಬೌಲಿಂಗ್‌ನಲ್ಲೂ ಆತಿಥೇಯರು ಬಲಿಷ್ಠವಾಗಿದ್ದಾರೆ. ಕ್ರಿಸ್‌ ವೋಕ್ಸ್‌, ಜೊಫ್ರಾ ಆರ್ಚರ್‌, ಆದಿಲ್‌ ರಶೀದ್‌, ಮೋಯಿನ್‌ ಅಲಿ ಮತ್ತು ಲಿಯಾಮ್‌ ಪ್ಲಂಕೆಟ್‌ ಅವರ ದಾಳಿಯನ್ನು ಎದುರಿಸಿ ನಿಲ್ಲುವುದು ಪಾಕ್‌ ಪಡೆಗೆ ಸವಾಲಾಗಬಹುದು. ಗಾಯದಿಂದ ಚೇತರಿಸಿಕೊಂಡಿರುವ ಮಾರ್ಕ್‌ ವುಡ್‌ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಅವರು ಆಡುವ ಬಳಗದಲ್ಲಿ ಸ್ಥಾನ ಪಡೆದರೆ ಇಂಗ್ಲೆಂಡ್‌ ತಂಡದ ವೇಗದ ಬೌಲಿಂಗ್‌ ವಿಭಾಗದ ಶಕ್ತಿ ಇನ್ನಷ್ಟು ಹೆಚ್ಚಲಿದೆ.

ಮೂರು ದಿನಗಳ ಹಿಂದೆ ನಾಟಿಂಗಂ ಅಂಗಳದಲ್ಲಿ ನಡೆದಿದ್ದ ಹಣಾಹಣಿಯಲ್ಲಿ ವೆಸ್ಟ್‌ ಇಂಡೀಸ್‌ ಎದುರು ಆಘಾತ ಕಂಡಿದ್ದ ಪಾಕ್‌, ಸಿಡಿದೇಳುವ ಹುಮ್ಮಸ್ಸಿನಲ್ಲಿದೆ.

ವಿಂಡೀಸ್‌ ಎದುರು ಬ್ಯಾಟಿಂಗ್‌ ವೈಫಲ್ಯ ಕಂಡಿದ್ದ ಸರ್ಫರಾಜ್‌ ಅಹಮದ್‌ ಬಳಗವು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇಂಗ್ಲೆಂಡ್‌ ಎದುರಿನ ಪಂದ್ಯದಲ್ಲಿ ಗೆಲ್ಲಬೇಕಾದರೆ ತಂಡವು ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು ಗುಣಮಟ್ಟದ ಸಾಮರ್ಥ್ಯ ತೋರುವುದು ಅಗತ್ಯ. ಇಲ್ಲದಿದ್ದರೆ ಮತ್ತೊಂದು ಸೋಲು ಕಟ್ಟಿಟ್ಟಬುತ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.