ADVERTISEMENT

SL vs ENG: ಇಂಗ್ಲೆಂಡ್‌ ಆಲ್‌ರೌಂಡರ್ ಮೋಯಿನ್‌ ಅಲಿಗೆ ಕೋವಿಡ್–19

ಏಜೆನ್ಸೀಸ್
Published 5 ಜನವರಿ 2021, 3:51 IST
Last Updated 5 ಜನವರಿ 2021, 3:51 IST
ಮೋಯಿನ್‌ ಅಲಿ
ಮೋಯಿನ್‌ ಅಲಿ   

ನವದೆಹಲಿ: ಕ್ರಿಕೆಟ್‌ ಸರಣಿ ಸಲುವಾಗಿ ಜನವರಿ 3ರಂದು ಶ್ರೀಲಂಕಾಗೆ ಆಗಮಿಸಿರುವ ತಮ್ಮ ತಂಡದ ಪ್ರಮುಖ ಆಲ್‌ರೌಂಡರ್‌ ಮೋಯಿನ್‌ ಅಲಿ ಅವರಿಗೆ ಕೋವಿಡ್–19 ದೃಢಪಟ್ಟಿದೆ ಎಂದು ಇಂಗ್ಲೆಂಡ್‌ ಕ್ರಿಕೆಟ್ ಮಂಡಳಿ (ಇಸಿಬಿ) ತಿಳಿಸಿದೆ.

ಅಲಿಗೆ ಹಂಬಂಟೋಟಾ ವಿಮಾನ ನಿಲ್ದಾಣದಲ್ಲಿ ಸೋಂಕು ಪರೀಕ್ಷೆ ನಡೆಸಲಾಗಿತ್ತು.

ಇಂಗ್ಲೆಂಡ್‌ ತಂಡವು ಆತಿಥೇಯರ ವಿರುದ್ಧ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಕಣಕ್ಕಿಳಿಯಲಿದೆ. ಅಲಿ ಅವರು ಹತ್ತು ದಿನಗಳ ಕಾಲ ಪ್ರತ್ಯೇಕವಾಸದಲ್ಲಿದ್ದು ಚಿಕಿತ್ಸೆ ಪಡೆಯಲಿರುವ ಕಾರಣ ಜನವರಿ 14ರಿಂದ ಆರಂಭವಾಗುವ ಮೊದಲ ಟೆಸ್ಟ್‌ಗೆ ಅಲಭ್ಯರಾಗಲಿದ್ದಾರೆ. ಎರಡನೇ ಪಂದ್ಯ ಜ. 22 ರಿಂದ ಜ.26ರ ವರೆಗೆ ನಡೆಯಲಿದೆ. ಎರಡೂ ಪಂದ್ಯಗಳು ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿವೆ.

ADVERTISEMENT

‘ಜ.3ರ ಭಾನುವಾರ ಹಂಬಂಟೋಟಾ ವಿಮಾನ ನಿಲ್ದಾಣದಲ್ಲಿ ನಡೆಸಿದ ಪಿಸಿಆರ್‌ ಪರೀಕ್ಷೆ ವರದಿಯ ಬಳಿಕ, ಮೋಯಿನ್‌ ಅಲಿ ಅವರಿಗೆ ಕೋವಿಡ್–19 ದೃಢಪಟ್ಟಿರುವುದನ್ನು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಯು ಖಚಿತಪಡಿಸುತ್ತಿದೆ’ ಎಂದು ಇಸಿಬಿ ಪ್ರಕಟಿಸಿದೆ.

‘ಶ್ರೀಲಂಕಾ ಸರ್ಕಾರದ ಕ್ವಾರಂಟೈನ್‌ ನಿಯಮಾವಳಿಗೆ ಅನುಗುಣವಾಗಿ ಅಲಿ 10 ದಿನಗಳ ಕಾಲ ಪ್ರತ್ಯೇಕವಾಸದಲ್ಲಿರಲಿದ್ದಾರೆ. ಅವರ ಮೇಲೆ ನಿಗಾ ಇಡಲಾಗುವುದು’ ಎಂದೂ ಹೇಳಿದೆ.

ಅಲಿ ಅವರ ಸಂಪರ್ಕಕ್ಕೆ ಬಂದಿರಬಹುದು ಎನ್ನುವ ಕಾರಣಕ್ಕೆ ವೇಗಿ ಕ್ರಿಸ್‌ ವೋಕ್ಸ್‌ ಅವರಿಗೂ ಪ್ರತ್ಯೇಕವಾಸದಲ್ಲಿರುವಂತೆ ಸೂಚಿಸಲಾಗಿದೆ. ‘ಕ್ರಿಸ್‌ ವೋಕ್ಸ್‌, ಅಲಿ ಅವರ ಸಂಪರ್ಕಕ್ಕೆ ಬಂದಿರುವ ಸಾಧ್ಯತೆ ಇದೆ. ಹೀಗಾಗಿ ಅವರನ್ನೂ ಪ್ರತ್ಯೇಕವಾಸದಲ್ಲಿರಿಸಿ ಪರೀಕ್ಷೆ ನಡೆಸಲಾಗುವುದು. ಮಂಗಳವಾರ ಬೆಳಗ್ಗೆ ಅವರಿಗೆ ಮತ್ತೊಮ್ಮೆ ಪರೀಕ್ಷೆ ನಡೆಸಲಾಗುವುದು. ಈ ಹಂತದಲ್ಲಿ ತಂಡವು ಬುಧವಾರ ಮೊದಲ ಬಾರಿಗೆ ಅಭ್ಯಾಸ ಆರಂಭಿಸಲಿದೆ’ ಎಂದೂ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.