ADVERTISEMENT

ಇಂಗ್ಲೆಂಡ್‌ ಕ್ರಿಕೆಟ್ ತಂಡದ ಭಾರತ ಪ್ರವಾಸ ಮುಂದೂಡಿಕೆ

ಏಜೆನ್ಸೀಸ್
Published 7 ಆಗಸ್ಟ್ 2020, 14:44 IST
Last Updated 7 ಆಗಸ್ಟ್ 2020, 14:44 IST
ಇಂಗ್ಲೆಂಡ್ ಕ್ರಿಕೆಟ್ ತಂಡ –ರಾಯಿಟರ್ಸ್ ಚಿತ್ರ
ಇಂಗ್ಲೆಂಡ್ ಕ್ರಿಕೆಟ್ ತಂಡ –ರಾಯಿಟರ್ಸ್ ಚಿತ್ರ   

ಮ್ಯಾಂಚೆಸ್ಟರ್: ಕೊರೊನಾ ವೈರಾಣು ಹಾವಳಿಯಿಂದ ಉಂಟಾಗಿರುವ ವಿಷಮ ಸ್ಥಿತಿಯಿಂದಾಗಿ ಇಂಗ್ಲೆಂಡ್ ಕ್ರಿಕೆಟ್ ತಂಡದ ಭಾರತ ಪ್ರವಾಸವನ್ನು ಮುಂದೂಡಲಾಗಿದೆ. ನಿಗದಿಯಂತೆ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಗಳು ಆರಂಭವಾಗಬೇಕಿತ್ತು.

ತಲಾ ಮೂರು ಏಕದಿನ ಮತ್ತು ಟ್ವೆಂಟಿ–20 ಪಂದ್ಯಗಳು ಪ್ರವಾಸದ ಕಾರ್ಯಕ್ರಮದಲ್ಲಿ ಒಳಗೊಂಡಿದ್ದವು. ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಸಲು ಉದ್ದೇಶಿಸಿದ್ದ ಟಿ20 ವಿಶ್ವಕಪ್ ಟೂರ್ನಿಗೆ ಸಜ್ಜಾಗಲು ಈ ಸರಣಿಗಳು ಅತ್ಯುತ್ತಮ ವೇದಿಕೆ ಎಂದು ತಿಳಿಯಲಾಗಿತ್ತು. ಆದರೆ ವಿಶ್ವಕಪ್ ಟೂರ್ನಿಯನ್ನು ಮುಂದೂಡಲಾಗಿದೆ. ಭಾರತದಲ್ಲಿ ಕೋವಿಡ್–19 ಹರಡುವುದನ್ನು ನಿಯಂತ್ರಿಸಲು ಪ್ರಯತ್ನಗಳು ನಡೆಯುತ್ತಲೇ ಇವೆ. ಹೀಗಾಗಿ ಪ್ರವಾಸವನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಹಾಗೂ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶುಕ್ರವಾರ ತಿಳಿಸಿವೆ.

ಮುಂದಿನ ವರ್ಷದ ಜನವರಿಯಲ್ಲಿ ಸರಣಿಗಳನ್ನು ಆಡಲು ಇಂಗ್ಲೆಂಡ್ ತಂಡ ಭಾರತಕ್ಕೆ ಬರುವ ಸಾಧ್ಯತೆ ಇದೆ. ಮಾರ್ಚ್ ತಿಂಗಳಲ್ಲಿ ಐದು ಟೆಸ್ಟ್ ಪಂದ್ಯಗಳ ಸಣಿಯಲ್ಲಿ ಪಾಲ್ಗೊಳ್ಳಲು ಭಾರತ ತಂಡ ಇಂಗ್ಲೆಂಡ್‌ಗೆ ತೆರಳುವ ಸಾಧ್ಯತೆಯೂ ಇದೆ. ಈ ಸರಣಿಗಳ ವೇಳಾಪಟ್ಟಿ ಸಿದ್ಧಗೊಳಿಸಲು ಎರಡೂ ದೇಶಗಳ ಕ್ರಿಕೆಟ್ ಮಂಡಳಿಗಳ ನಡುವೆ ಮಾತುಕತೆ ನಡೆಯಲಿದೆ.

ADVERTISEMENT

‘ಕ್ರಿಕೆಟ್ ಋತುವಿಗೆ ಹುಮ್ಮಸ್ಸು ತುಂಬಬೇಕಾದರೆ ಭಾರತ ಮತ್ತು ಇಂಗ್ಲೆಂಡ್ ನಡುವೆ ಸರಣಿಗಳು ಆಯೋಜನೆಯಾಗಬೇಕು ನಮ್ಮ ಆಶಯ. ಇದನ್ನು ಈಡೇರಿಸಲು ಬಿಸಿಸಿಐ ಜೊತೆ ಮಾತುಕತೆ ನಡೆಸಲಾಗುವುದು. ಮಂಡಳಿಯು ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಿದೆ ಎಂಬ ಭರವಸೆ ಇದೆ’ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಟಾಮ್ ಹ್ಯಾರಿಸನ್ ತಿಳಿಸಿದರು.

‘ಬಿಸಿಸಿಐ ಮತ್ತು ಇಂಗ್ಲೆಂಡ್‌–ವೇಲ್ಸ್ ಕ್ರಿಕೆಟ್ ಮಂಡಳಿ ಈಗಿನ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಗಮನಾರ್ಹ. ಮರುನಿಗದಿ ಮಾಡಿರುವ ಸರಣಿಗಳ ದಿನಾಂಕಗಳನ್ನು ಆದಷ್ಟು ಬೇಗ ನಿರ್ಧರಿಸಲಾಗುವುದು. ಸೂಕ್ತ ಸಂದರ್ಭದಲ್ಲಿ ಟೆಸ್ಟ್‌ ಮತ್ತು ಏಕದಿನ ಪಂದ್ಯಗಳು ಆಯೋಜನೆಯಾಗಲಿವೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದರು.

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಯುಎಇ ವೇದಿಕೆಯಾಗಲಿದೆ. ಭಾರತದಲ್ಲಿ ವರ್ಷದ ಕೊನೆಯಲ್ಲೂ ಪರಿಸ್ಥಿತಿ ಸುಧಾರಣೆ ಕಾಣದೇ ಇದ್ದರೆ ಇಂಗ್ಲೆಂಡ್ ಎದುರಿನ ಸರಣಿಗಳನ್ನು ಯುಎಇಯಲ್ಲಿ ನಡೆಸುವ ಚಿಂತನೆಯೂ ಇದೆ. ಕೊರೊನಾ ಕಾಲಿಟ್ಟ ನಂತರ ಎಲ್ಲ ಕಡೆಯಲ್ಲೂ ಕ್ರಿಕೆಟ್ ಚಟುವಟಿಕೆ ಮೇಲೆ ಕರಿನೆರಳು ಬಿದ್ದಿದೆ. ಆದರೆ ಇಂಗ್ಲೆಂಡ್ ಅಂತರರಾಷ್ಟ್ರೀಯ ಸರಣಿಗಳನ್ನು ಆಯೋಜಿಸಿ ಗಮನ ಸೆಳೆದಿದೆ. ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಪಂದ್ಯಗಳ ನಂತರ ಐರ್ಲೆಂಡ್ ವಿರುದ್ಧ ಏಕದಿನ ಸರಣಿಯೂ ಇಂಗ್ಲೆಂಡ್‌ನಲ್ಲಿ ನಡೆದಿದೆ. ಈಗ ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ನಡೆಯುತ್ತಿದೆ. ಪ್ರೇಕ್ಷಕರಿಗೆ ಪ್ರವೇಶ ನೀಡದೆ, ಜೀವಸುರಕ್ಷಾ ವಿಧಾನಗಳನ್ನು ಅನುಸರಿಸಿಕೊಂಡು ಅಲ್ಲಿ ಪಂದ್ಯಗಳು ನಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.