ADVERTISEMENT

ಜಯದತ್ತ ಇಂಗ್ಲೆಂಡ್–ವಿಂಡೀಸ್ ಚಿತ್ತ

ಟೆಸ್ಟ್‌ ಸರಣಿ: ಕಿರೀಟಕ್ಕಾಗಿ ಹೋರಾಟ ಇಂದಿನಿಂದ

ಏಜೆನ್ಸೀಸ್
Published 23 ಜುಲೈ 2020, 19:32 IST
Last Updated 23 ಜುಲೈ 2020, 19:32 IST
ಜೋ ರೂಟ್ ಮತ್ತು ಜೇಸನ್ ಹೋಲ್ಡರ್ – ರಾಯಿಟರ್ಸ್ ಚಿತ್ರ
ಜೋ ರೂಟ್ ಮತ್ತು ಜೇಸನ್ ಹೋಲ್ಡರ್ – ರಾಯಿಟರ್ಸ್ ಚಿತ್ರ   

ಮ್ಯಾಂಚೆಸ್ಟರ್: ಕೊರೊನಾ ಕಾಲದಲ್ಲಿ ಮೊಟ್ಟಮೊದಲ ಬಾರಿಗೆ ಟೆಸ್ಟ್ ಸರಣಿಯನ್ನು ಅಚ್ಚುಕಟ್ಟಾಗಿ ನಡೆಸುತ್ತಿರುವ ಶ್ರೇಯವಂತೂ ಇಂಗ್ಲೆಂಡ್‌ ಪಾಲಿಗೆ ಸಂದಿದೆ. ಇದೀಗ ಆ ಸರಣಿಯನ್ನು ಗೆದ್ದು ಇತಿಹಾಸ ಬರೆಯುವತ್ತ ಆತಿಥೇಯರು ಚಿತ್ತ ನೆಟ್ಟಿದ್ದಾರೆ.

ಶುಕ್ರವಾರದಿಂದ ಇಲ್ಲಿ ಆರಂಭವಾಗಲಿರುವ ಸರಣಿಯ ಕೊನೆಯ ಪಂದ್ಯದಲ್ಲಿ ಗೆದ್ದು ದಾಖಲೆ ನಿರ್ಮಿಸುವತ್ತ ವೆಸ್ಟ್ ಇಂಡೀಸ್ ಬಳಗವು ಚಿತ್ತ ನೆಟ್ಟಿದೆ. 32 ವರ್ಷಗಳಿಂದ ವಿಂಡೀಸ್ ತಂಡವು ಇಂಗ್ಲೆಂಡ್‌ನಲ್ಲಿ ಸರಣಿ ಗೆದ್ದಿಲ್ಲ. ಇದೀಗ ಅಂತಹದೊಂದು ಅವಕಾಶ ಇದೆ. ಅದರಿಂದಾಗಿ ಈ ಪಂದ್ಯದಲ್ಲಿ ರೋಚಕ ಹೋರಾಟ ನಡೆಯುವ ಎಲ್ಲ ಲಕ್ಷಣಗಳೂ ಇವೆ.

ಸರಣಿಯ ಮೊದಲ ಪಂದ್ಯವನ್ನು ಗೆದ್ದಿದ್ದ ಜೇಸನ್ ಹೋಲ್ಡರ್‌ ಬಳಗಕ್ಕೆ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಪೆಟ್ಟು ನೀಡಿತ್ತು. ಬೆನ್ ಸ್ಟೋಕ್ಸ್‌ ಅವರ ಅಮೋಘ ಆಲ್‌ರೌಂಡ್ ಆಟದ ಪರಿಗೆ ಹೋಲ್ಡರ್‌ ಬಳಗ ನಿರುತ್ತರವಾಗಿತ್ತು. ಕೋವಿಡ್–19 ಮಾರ್ಗಸೂಚಿ ನಿಯಮವನ್ನು ಉಲ್ಲಂಘಿಸಿದ್ದ ಇಂಗ್ಲೆಂಡ್‌ ವೇಗಿ ಜೋಫ್ರಾ ಆರ್ಚರ್‌ ಎರಡನೇ ಪಂದ್ಯ ಕಳೆದುಕೊಂಡಿದ್ದರು. ಆಗ ಆಡಿದ್ದ ಸ್ಟುವರ್ಟ್ ಬ್ರಾಡ್ ಉತ್ತಮವಾಗಿ ಬೌಲಿಂಗ್ ಮಾಡಿದ್ದರು. ಇದೀಗ ಜೋಫ್ರಾ ಮತ್ತು ಬ್ರಾಡ್ ಇಬ್ಬರನ್ನೂ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಈ ಸರಣಿಯಲ್ಲಿ ಮೊದಲ ಶತಕ ದಾಖಲಿಸಿದ್ದ ಡಾಮ್ ಸಿಬ್ಲಿ ಮತ್ತೊಂದು ಅವಕಾಶ ಪಡೆಯುವುದು ಖಚಿತ.

ADVERTISEMENT

ವಿಂಡೀಸ್ ತಂಡದಲ್ಲಿ ಎಲ್ಲರೂ ಆಲ್‌ರೌಂಡರ್‌ಗಳೇ ಆಗಿದ್ದಾರೆ. ಆದ್ದರಿಂದ ಎಂಟನೇ ಕ್ರಮಾಂಕದವರೆಗೂ ರನ್‌ಗಳ ಕಾಣಿಕೆ ನೀಡುವ ಆಟಗಾರರಿದ್ದಾರೆ. ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳ ಜೊತೆಯಾಟಗಳನ್ನು ಮುರಿಯುವ ಬೌಲಿಂಗ್ ಮಾಡುವ ಸವಾಲು ತಂಡಕ್ಕೆ ಇದೆ. ಎರಡನೇ ಪಂದ್ಯದ ಲ್ಲಿ ಆರಂಭಿಕ ಹಂತದಲ್ಲಿ ಪಡೆದ ಯಶಸ್ಸನ್ನು ಉಳಿಸಿಕೊಳ್ಳುವಲ್ಲಿ ಜೇಸನ್ ಬಳಗ ಎಡವಿತ್ತು. ಮೊದಲ ಇನಿಂಗ್ಸ್‌ನಲ್ಲಿ ಸಿಬ್ಲಿ ಮತ್ತು ಸ್ಟೋಕ್ಸ್‌ ಜೊತೆಯಾಟವನ್ನು ಮುರಿಯುವಲ್ಲಿ ವಿಫಲವಾಗಿತ್ತು.

ತಂಡಗಳು: ಇಂಗ್ಲೆಂಡ್: ರೋರಿ ಬರ್ನ್ಸ್, ಡಾಮ್ ಸಿಬ್ಲಿ, ಜ್ಯಾಕ್ ಕ್ರಾಲಿ, ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್‌, ಒಲಿ ಪೋಪ್, ಜೋಸ್ ಬಟ್ಲರ್ (ವಿಕೆಟ್‌ಕೀಪರ್), ಡಾಮ್ನಿಕ್ ಬೆಸ್, ಜೋಫ್ರಾ ಆರ್ಚರ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆ್ಯಂಡರ್ಸನ್; ವೆಸ್ಟ್ ಇಂಡೀಸ್: ‌ಜೇಸನ್ ಹೋಲ್ಡರ್ (ನಾಯಕ), ಜಾನ್ ಕ್ಯಾಂಪ್‌ ಬೆಲ್, ಕ್ರೇಗ್ ಬ್ರಾಥ್‌ವೇಟ್, ಶಾಯ್ ಹೋಪ್, ಜೋಶುವಾ ಡಿ ಸಿಲ್ವಾ, ಶಾಮ್ರಾ ಬ್ರೂಕ್ಸ್‌, ರಾಸ್ಟನ್ ಚೇಸ್, ಜರ್ಮೈನ್ ಬ್ಲ್ಯಾಕ್‌ವುಡ್, ಶೇನ್ ಡೋರಿಚ್ (ವಿಕೆಟ್‌ಕೀಪರ್), ಅಲ್ಜರಿ ಜೋಸೆಫ್, ಕೇಮರ್ ರೋಚ್, ಶಾನನ್ ಗ್ಯಾಬ್ರಿಯಲ್.

ನೇರಪ್ರಸಾರ: ಸೋನಿ ಸಿಕ್ಸ್‌

ಸಮಯ: ಮಧ್ಯಾಹ್ನ 3.30 ರಿಂದ (ಭಾರತೀಯ ಕಾಲಮಾನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.