ಸಬಾ ಕರೀಂ
ನವದೆಹಲಿ: ಮುಂದಿನ ತಿಂಗಳು ಇಂಗ್ಲೆಂಡ್ ಪ್ರವಾಸ ಮಾಡಲಿರುವ ಭಾರತ ತಂಡದ ನಾಯಕ ಶುಭಮನ್ ಗಿಲ್ ಅವರು ಬ್ಯಾಟಿಂಗ್‌ನಲ್ಲಿ ಉತ್ತಮ ಸಾಧನೆ ಮಾಡಬೇಕು. ಆ ಮೂಲಕ ಅವರಿಗೆ ನಾಯಕತ್ವವನ್ನು ನಿಭಾಯಿಸುವ ಆತ್ಮವಿಶ್ವಾಸ ಬೆಳೆಯುತ್ತದೆ ಎಂದು ಮಾಜಿ ಕ್ರಿಕೆಟಿಗ ಸಬಾ ಕರೀಂ ಅಭಿಪ್ರಾಯಪಟ್ಟಿದ್ದಾರೆ.
ಈಚೆಗೆ ರೋಹಿತ್ ಶರ್ಮಾ ಅವರು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಅವರ ನಂತರ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಕೆಲವು ತಿಂಗಳುಗಳ ಹಿಂದೆ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ಅವರೂ ನಿವೃತ್ತರಾಗಿದ್ದರು. ಈ ಮೂವರು ದಿಗ್ಗಜರ ನಿವೃತ್ತಿಯ ನಂತರ ಭಾರತ ಟೆಸ್ಟ್ ಕ್ರಿಕೆಟ್ ತಂಡದ ಹೊಸಯುಗ ಆರಂಭವಾಗಲಿದೆ. ಅದೂ ವಿದೇಶಿ ನೆಲದಲ್ಲಿ ಟೆಸ್ಟ್ ಸರಣಿ ಆಡುವ ಮೂಲಕ ಗಿಲ್ ಅವರ ನಾಯಕತ್ವದಲ್ಲಿ ತಂಡವು ಕಣಕ್ಕಿಳಿಯಲಿದೆ.
‘ಗಿಲ್ ಅವರ ಪಾಲಿಗೆ ಇದು ಸತ್ವಪರೀಕ್ಷೆಯಾಗಿದೆ. ಅವರು ಇದಕ್ಕೆ ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ ಮತ್ತು ಸವಾಲನ್ನು ಸಮರ್ಥವಾಗಿ ಎದುರಿಸಲಿದ್ದಾರೆ’ ಎಂದು ಕರೀಂ ಅವರು ವಿಶ್ವಾಸವ್ಯಕ್ತಪಡಿಸಿದರು. ಅವರು ಭಾನುವಾರ ಫಿಟ್ ಇಂಡಿಯಾದ ಸೈಕ್ಲಿಂಗ್ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪಿಟಿಐ ವಿಡಿಯೊಗೆ ಹೇಳಿಕೆ ನೀಡಿದರು.
‘ಗಿಲ್ ಅವರಿಗೆ ಆಟಗಾರನಾಗಿ ತಮ್ಮ ಸಾಮರ್ಥ್ಯ ಸಾಬೀತು ಮಾಡಲು ಉತ್ತಮ ಅವಕಾಶವಾಗಿದೆ. ಅವರು ಬ್ಯಾಟಿಂಗ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಬೇಕು. ಬ್ಯಾಟಿಂಗ್‌ನಲ್ಲಿ ಅವರು ಯಶಸ್ವಿಯಾದರೆ, ಅದರ ಉತ್ತಮ ಪರಿಣಾಮವು ನಾಯಕತ್ವದ ಮೇಲೂ ಆಗಲಿದೆ’ ಎಂದರು.
‘ಯುವ ಆಟಗಾರರು ಇರುವ ಈ ತಂಡವು ಉತ್ತಮ ಫಲಿತಾಂಶವನ್ನು ನೀಡುವ ನಿರೀಕ್ಷೆ ಇದೆ’ ಎಂದರು.
ಭಾರತ ಎ ತಂಡದಲ್ಲಿ ಆಡುತ್ತಿರುವ ಕರುಣ್ ನಾಯರ್ ಅವರು ಇಂಗ್ಲೆಂಡ್ ಲಯನ್ಸ್ ವಿರುದ್ಧ ದ್ವಿಶತಕ ಹೊಡೆದಿರುವುದನ್ನು ಶ್ಲಾಘಿಸಿದ ಕರೀಂ, ‘ಅವರಿಗ ಅನುಭವಿ ಆಟಗಾರನಾಗಿದ್ದಾರೆ. ಉತ್ತಮವಾಗಿ ಆಡಿರುವ ಅವರು ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿಯೂ ಉತ್ತಮ ಕಾಣಿಕೆ ನೀಡಬಲ್ಲರು. ಸಾಯಿ ಸುದರ್ಶನ್ ಕೂಡ ಉತ್ತಮ ಆಟಗಾರ. ಅವರೂ ಎಲ್ಲ ಮಾದರಿಗಳಲ್ಲಿಯೂ ಆಡುವ ಸಮರ್ಥ ಆಟಗಾರನಾಗಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.