ADVERTISEMENT

ಇಂಗ್ಲೆಂಡ್ ಆಟಗಾರರಿಂದ ಸಾಮಾಜಿಕ ತಾಣಗಳ ಬಹಿಷ್ಕಾರ?

ರಾಯಿಟರ್ಸ್
Published 12 ಏಪ್ರಿಲ್ 2021, 13:18 IST
Last Updated 12 ಏಪ್ರಿಲ್ 2021, 13:18 IST
ಸ್ಟುವರ್ಟ್ ಬ್ರಾಡ್ –ರಾಯಿಟರ್ಸ್ ಚಿತ್ರ
ಸ್ಟುವರ್ಟ್ ಬ್ರಾಡ್ –ರಾಯಿಟರ್ಸ್ ಚಿತ್ರ   

ಬೆಂಗಳೂರು: ಆನ್‌ಲೈನ್ ಮೂಲಕ ಅವಹೇಳನ ಮಾಡುವ ಪ್ರವೃತ್ತಿ ಮುಂದುವರಿದರೆ ಸಾಮಾಜಿಕ ಜಾಲತಾಣಗಳನ್ನು ಬಹಿಷ್ಕರಿಸುವ ಕುರಿತು ಒಗ್ಗಟ್ಟಿನ ನಿರ್ಧಾರ ಕೈಗೊಳ್ಳಬೇಕಾದೀತು ಎಂದು ಇಂಗ್ಲೆಂಡ್ ಕ್ರಿಕೆಟ್‌ ತಂಡದ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್‌ ಎಚ್ಚರಿಕೆ ನೀಡಿದ್ದಾರೆ.

ಇಂಗ್ಲೆಂಡ್‌ನ ವೇಗದ ಬೌಲರ್ ಜೊಫ್ರಾ ಆರ್ಚರ್ ಮತ್ತು ಆಲ್‌ರೌಂಡರ್ ಮೋಯಿನ್ ಅಲಿ ಅವರನ್ನು ಗುರಿಯಾಗಿಸಿ ಸಾಮಾಜಿಕ ತಾಣಗಳಲ್ಲಿ ಸಂದೇಶಗಳನ್ನು ಪೋಸ್ಟ್ ಮಾಡಲಾಗಿತ್ತು. ಇದು ತಮಗೆ ನೋವುಂಟುಮಾಡಿದೆ. ಆದ್ದರಿಂದ ಎಲ್ಲರೂ ಬಯಸಿದರೆ ಸಾಮಾಜಿಕ ತಾಣಗಳಿಂದ ದೂರ ಉಳಿಯಬಹುದು ಎಂದು ಬ್ರಾಡ್ ನುಡಿದಿದ್ದಾರೆ.

‘ಸಾಮಾಜಿಕ ಜಾಲತಾಣಗಳಿಂದ ಸಾಕಷ್ಟು ಒಳಿತು ಇದೆ. ಆದರೆ ಅದರ ಮಿತಿಯನ್ನು ಮೀರಿ ವರ್ತಿಸಿದಾಗ ಸಮಸ್ಯೆಗಳು ಉಂಟಾಗುತ್ತವೆ. ಇಂಥ ಅತಿರೇಕಗಳ ವಿರುದ್ಧ ಹೋರಾಡಲು ನಾನು ಸಿದ್ಧ’ ಎಂದು ಬ್ರಾಡ್ ಹೇಳಿದ್ದಾರೆ.

ADVERTISEMENT

‘ಯಾರಾದರೂ ತ‍‍‍ಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳುವ ಕುರಿತು ಡ್ರೆಸಿಂಗ್ ಕೊಠಡಿಯಲ್ಲಿರುವ ಪ್ರಮುಖರು ನಿರ್ಧಾರ ಕೈಗೊಳ್ಳುತ್ತಾರೆ. ಯಾರನ್ನಾದರೂ ಬದಲಿಸಬೇಕು ಎಂದಿದ್ದರೆ ಅವರ ಸ್ಥಾನ ತುಂಬಲು ಸಾಕಷ್ಟು ಅನುಭವಿಗಳು ಇದ್ದಾರೆ. ಇವೆಲ್ಲವೂ ತಂಡ ‍ಪಾಲಿಸಿಕೊಂಡು ಬಂದಿರುವ ಶಿಸ್ತಿನ ಚೌಕಟ್ಟಿನಲ್ಲಿ ನಡೆಯುತ್ತದೆ’ ಎಂದಿರುವ ಬ್ರಾಡ್ ‘ಬಹಿಷ್ಕಾರ ಹಾಕುವ ಮೂಲಕ ಸಂಬಂಧಪಟ್ಟವರಿಗೆ ಬಲವಾದ ಸಂದೇಶ ಕಳುಹಿಸಲು ಸಾಧ್ಯ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಂಗ್ಲೆಂಡ್ ಫುಟ್‌ಬಾಲ್‌ನಲ್ಲೂ ಇದೇ ರೀತಿಯಾಗಿತ್ತು. ಸ್ಕಾಟಿಷ್ ಟೂರ್ನಿಯ ಚಾಂಪಿಯನ್‌ ರೇಂಜರ್ಸ್ ಮತ್ತು ಇಂಗ್ಲಿಷ್ ಎರಡನೇ ದರ್ಜೆಯ ಟೂರ್ನಿಯಲ್ಲಿ ಆಡುವ ಸ್ವನ್ಸಿ ಸಿಟಿ ತಂಡಗಳ ಅನೇಕ ಆಟಗಾರರನ್ನು ಜನಾಂಗೀಯ ನಿಂದನೆಗೆ ಒಳಪಡಿಸಿದ ಕಾರಣದಿಂದ ಒಂದು ವಾರ ಸಾಮಾಜಿಕ ತಾಣಗಳನ್ನು ಬಹಿಷ್ಕರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.