ADVERTISEMENT

IND vs ENG: 3ನೇ ಟಿ20: ಬಟ್ಲರ್ ಸ್ಫೋಟಕ ಆಟ, ಇಂಗ್ಲೆಂಡ್‌ಗೆ 8 ವಿಕೆಟ್‌ ಜಯ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 17:52 IST
Last Updated 16 ಮಾರ್ಚ್ 2021, 17:52 IST
ಜಾನಿ ಬೇರ್ ಸ್ಟೋ(ಎಡ), ಜೋಸ್ ಬಟ್ಲರ್(ಬಲ): ಎಎಫ್‌ಪಿ ಚಿತ್ರ
ಜಾನಿ ಬೇರ್ ಸ್ಟೋ(ಎಡ), ಜೋಸ್ ಬಟ್ಲರ್(ಬಲ): ಎಎಫ್‌ಪಿ ಚಿತ್ರ   

ಅಹಮದಾಬಾದ್: ಇಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಭಾರತವನ್ನು 8 ವಿಕೆಟ್‌ಗಳಿಂದ ಮಣಿಸಿದೆ. ಈ ಮೂಲಕ ಟಿ20 ಸರಣಿಯಲ್ಲಿ 2–1 ಮುನ್ನಡೆ ಪಡೆದಿದೆ.

ಭಾರತ ನೀಡಿದ್ದ 157 ರನ್ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ ಜೋಸ್ ಬಟ್ಲರ್(ಅಜೇಯ 83), ಜಾನಿ ಬೇರ್ ಸ್ಟೋ (ಅಜೇಯ 40 ) ಅವರ ಅಮೋಘ ಆಟದ ನೆರವಿನಿಂದ 18.2 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು158 ರನ್ ಗಳಿಸುವ ಮೂಲಕ ಜಯ ದಾಖಲಿಸಿದೆ.

ಭಾರತ ಗಳಿಸಿದ್ದ 156 ರನ್ ಇಂಗ್ಲೆಂಡ್ ತಂಡಕ್ಕೆ ಯಾವುದೇ ಹಂತದಲ್ಲೂ ಸವಾಲೆನಿಸಲೇ ಇಲ್ಲ. 9 ರನ್‌ಗೆ ಜೇಸನ್ ರಾಯ್ ನಿರ್ಗಮಿಸಿದರಾದರೂ ಬಳಿಕ ಒಂದಾದ ಜೋಸ್ ಬಟ್ಲರ್ ಮತ್ತು ಜಾನಿ ಬೇರ್ ಸ್ಟೋ ಪಂದ್ಯವನ್ನು ಭಾರತದಿಂದ ಕಸಿದುಕೊಂಡರು. 52 ಎಸೆತಗಳಲ್ಲಿ 4 ಸಿಕ್ಸರ್ 5 ಬೌಂಡರಿ ಸಹಿತ 83 ರನ್ ಸಿಡಿಸಿದ ಜೋಸ್ ಬಟ್ಲರ್ ಭಾರತೀಯ ಬೌಲರ್‌ಗಳನ್ನು ಕಂಗೆಡಿಸಿದರು.

ADVERTISEMENT

ಯಾವುದೇ ಹಂತದಲ್ಲೂ ಈ ಜೋಡಿ ಭಾರತಕ್ಕೆ ಕಮ್ ಬ್ಯಾಕ್ ಮಾಡುವ ಅವಕಾಶ ನೀಡಲೇ ಇಲ್ಲ. 5 ಬೌಂಡರಿ ಸಹಿತ 40 ರನ್ ಸಿಡಿಸಿದ ಬೇರ್ ಸ್ಟೋ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಅಹ್ವಾನ ಪಡೆದ ಭಾರತ ತಂಡ ನಾಯಕ ವಿರಾಟ್ ಕೊಹ್ಲಿ ಅವರ ಅಜೇಯ 77 ರನ್ ನೆರವಿನಿಂದ 156 ರನ್ ಪೇರಿಸಿತ್ತು.

5 ಪಂದ್ಯಗಳ ಟಿ–20 ಸರಣಿಯಲ್ಲಿ ಇನ್ನೂ ಎರಡು ಪಂದ್ಯ ಬಾಕಿ ಇದ್ದು, ಭಾರತ ಸರಣಿ ಗೆಲ್ಲಬೇಕಾದರೆ ಮುಂದಿನ ಎರಡೂ ಪಂದ್ಯಗಳಲ್ಲೂ ಗೆಲುವು ದಾಖಲಿಸಬೇಕಿದೆ.

ಸಂಕ್ಷಿಪ್ತ ಸ್ಕೋರ್

ಭಾರತ: 156/6
ವಿರಾಟ್ ಕೊಹ್ಲಿ: ಅಜೇಯ 77

ಇಂಗ್ಲೆಂಡ್: 158/2(18.2 ಓವರ್)
ಜೋಸ್ ಬಟ್ಲರ್: ಅಜೇಯ 83
ಜಾನಿ ಬೇರ್ ಸ್ಟೋ: ಅಜೇಯ 40

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.