ADVERTISEMENT

ಟಿ20 ರ‍್ಯಾಂಕಿಂಗ್‌: ಮಲಾನ್ ದಾಖಲೆ

ಏಜೆನ್ಸೀಸ್
Published 2 ಡಿಸೆಂಬರ್ 2020, 15:05 IST
Last Updated 2 ಡಿಸೆಂಬರ್ 2020, 15:05 IST
ಡೇವಿಡ್ ಮಲಾನ್ -ರಾಯಿಟರ್ಸ್ ಚಿತ್ರ
ಡೇವಿಡ್ ಮಲಾನ್ -ರಾಯಿಟರ್ಸ್ ಚಿತ್ರ   

ಲಂಡನ್‌: ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ಅಮೋಘ ಆಟವಾಡಿದ ಇಂಗ್ಲೆಂಡ್‌ನ ಡೇವಿಡ್ ಮಲಾನ್ ಟಿ20 ರ‍್ಯಾಂಕಿಂಗ್‌ನಲ್ಲಿ ಹೊಸ ದಾಖಲೆ ಬರೆದರು. ಚುಟುಕು ಮಾದರಿಯಲ್ಲಿ ಅತಿ ಹೆಚ್ಚು ರ‍್ಯಾಂಕಿಂಗ್‌ ಪಾಯಿಂಟ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆ ಅವರದಾಯಿತು. ಎಡಗೈ ಬ್ಯಾಟ್ಸ್‌ಮನ್‌, 33 ವರ್ಷದ ಮಲಾನ್ ಅವರ ಖಾತೆಯಲ್ಲಿ ಈಗ 915 ಪಾಯಿಂಟ್‌ಗಳಿದ್ದು ಅಗ್ರ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 824 ಪಾಯಿಂಟ್‌ಗಳೊಂದಿಗೆ ಭಾರತದ ಕೆ.ಎಲ್‌.ರಾಹುಲ್ ನಾಲ್ಕನೇ ಸ್ಥಾನದಲ್ಲಿದ್ದಾರೆ.

900 ಪಾಯಿಂಟ್ ಕಲೆ ಹಾಕಿದ್ದ ಆಸ್ಟ್ರೇಲಿಯಾದ ಆ್ಯರನ್ ಫಿಂಚ್ ಅತಿ ಹೆಚ್ಚು ಪಾಯಿಂಟ್ಸ್ ಗಳಿಸಿದ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಈ ವರೆಗೆ ಹೊಂದಿದ್ದರು. ಈಗ ಅವರು 835 ಪಾಯಿಂಟ್ ಹೊಂದಿದ್ದು ಮೂರನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಬಾಬರ್ ಆಜಂ ಎರಡನೇ ಸ್ಥಾನದಲ್ಲಿದ್ದಾರೆ. ಅವರು 871 ಪಾಯಿಂಟ್ ಹೊಂದಿದ್ದಾರೆ. ಭಾನುವಾರದ ಪಂದ್ಯದಲ್ಲಿ 55 ರನ್ ಗಳಿಸಿದ್ದ ಮಲಾನ್ ಮಂಗಳವಾರ 47 ಎಸೆತಗಳಲ್ಲಿ 99 ರನ್ ಗಳಿಸಿ ಔಟಾಗದೆ ಉಳಿದಿದ್ದರು. ಬುಧವಾರ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ರ‍್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಿದೆ.

19 ಟಿ20 ಪಂದ್ಯಗಳನ್ನು ಆಡಿರುವ 54ರ ಸರಾಸರಿ ಮತ್ತು 150ರ ಸ್ಟ್ರೈಕ್ ರೇಟ್‌ನಲ್ಲಿ 855 ರನ್ ಗಳಿಸಿದ್ದಾರೆ. ಅಜೇಯ 103 ಅವರ ಗರಿಷ್ಠ ರನ್ ಆಗಿದ್ದು ಒಂದು ಶತಕ ಮತ್ತು ಒಂಬತ್ತು ಅರ್ಧಶತಕ ಗಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.