ADVERTISEMENT

ಆಸ್ಟ್ರೇಲಿಯಾ ಕ್ರಿಕೆಟ್‌ನ ಸುವರ್ಣಯುಗಕ್ಕೆ ನಾಂದಿ ಹಾಡಿದ್ದ ದಿಗ್ಗಜ ಸಿಮ್ಸನ್ ನಿಧನ

ರಾಯಿಟರ್ಸ್
Published 16 ಆಗಸ್ಟ್ 2025, 7:05 IST
Last Updated 16 ಆಗಸ್ಟ್ 2025, 7:05 IST
<div class="paragraphs"><p>ಬಾಬ್‌ ಸಿಮ್ಸನ್‌</p></div>

ಬಾಬ್‌ ಸಿಮ್ಸನ್‌

   

ಕೃಪೆ: X / @cricketcomau

ಸಿಡ್ನಿ: ಆಸ್ಟ್ರೇಲಿಯಾ ಟೆಸ್ಟ್‌ ಕ್ರಿಕೆಟ್‌ ತಂಡದ ಮಾಜಿ ನಾಯಕ ಬಾಬ್‌ ಸಿಮ್ಸನ್‌ ಅವರು ನಿಧನರಾಗಿದ್ದಾರೆ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ಶನಿವಾರ ತಿಳಿಸಿದೆ.

ADVERTISEMENT

ಅವರಿಗೆ 89 ವರ್ಷ ವಯಸ್ಸಾಗಿತ್ತು.

ಆಲ್‌ರೌಂಡರ್‌ ಆಗಿದ್ದ ಸಿಮ್ಸನ್‌, ಆಸ್ಟ್ರೇಲಿಯಾ ತಂಡದ ಪರ 1957–78ರ ಅವಧಿಯಲ್ಲಿ 62 ಟೆಸ್ಟ್‌ ಆಡಿದ್ದಾರೆ. 10 ಶತಕ ಸಹಿತ 4,869 ರನ್‌ ಗಳಿಸಿರುವ ಅವರು, 71 ವಿಕೆಟ್‌ಗಳನ್ನೂ ಕಬಳಿಸಿದ್ದರು.

'ಆಸ್ಟ್ರೇಲಿಯಾದ ಶ್ರೇಷ್ಠ ಕ್ರಿಕೆಟಿಗರಲ್ಲಿ ಬಾಬ್‌ ಸಿಮ್ಸನ್‌ ಕೂಡ ಒಬ್ಬರು. ಅವರ ಆಟವನ್ನು ವೀಕ್ಷಿಸಿದ್ದ ಯಾರಿಗೇ ಆದರೂ ಇದು ಅತ್ಯಂತ ದುಃಖದ ದಿನ' ಎಂದು 'ಸಿಎ' ಮುಖ್ಯಸ್ಥ ಮೈಕ್‌ ಬೇರ್ಡ್‌ ಹೇಳಿದ್ದಾರೆ.

'ಪ್ರತಿಭಾವಂತ ಆರಂಭಿಕ ಬ್ಯಾಟರ್‌, ಅತ್ಯುತ್ತಮ ಸ್ಲಿಪ್‌ ಫೀಲ್ಡರ್‌ ಮತ್ತು ಉತ್ತಮ ಸ್ಪಿನ್‌ ಬೌಲರ್‌ ಆಗಿದ್ದ ಸಿಮ್ಸನ್‌, 1960ರ ದಶಕದಲ್ಲಿ ಆಸ್ಟ್ರೇಲಿಯಾದ ಬಲಿಷ್ಠ ತಂಡದ ಪ್ರಮುಖ ಆಟಗಾರನಾಗಿದ್ದರು. ಆಸ್ಟ್ರೇಲಿಯಾ ತಂಡ ಹಾಗೂ ನ್ಯೂ ಸೌತ್‌ ವೇಲ್ಸ್‌ನ ನಾಯಕ ಮತ್ತು ಕೋಚ್‌ ಆಗಿ ಹೊರಹೊಮ್ಮಿದ್ದರು' ಎಂದಿದ್ದಾರೆ.

'ಅವರು ತರಬೇತುದಾರರಾಗಿದ್ದ ಸಂದರ್ಭದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್‌ನ ಸುವರ್ಣಯುಗ ಆರಂಭವಾಯಿತು' ಎಂದೂ ಅಭಿಪ್ರಾಯಪಟ್ಟಿದ್ದಾರೆ.

ತಂಡದಲ್ಲಿ ಶಿಸ್ತು ಮೂಡಿಸಿದ್ದ ಸಿಮ್ಸನ್‌, ಆಸ್ಟ್ರೇಲಿಯಾ ಪಡೆ ಆಲನ್‌ ಬಾರ್ಡರ್‌ ನಾಯಕತ್ವದಲ್ಲಿ 1987ರ ಏಕದಿನ ವಿಶ್ವಕಪ್ ಗೆಲ್ಲಲು ಮತ್ತು ಆ್ಯಷಸ್‌ ಟೂರ್ನಿಯಲ್ಲಿ ಜಯ ಸಾಧಿಸಲು ಕಾರಣರಾಗಿದ್ದರು.

ತಮಗೆ ತರಬೇತಿ ನೀಡಿದ ಕೋಚ್‌ಗಳಲ್ಲಿ ಸಿಮ್ಸನ್ ಅವರೇ ಅತ್ಯುತ್ತಮ ಎಂದು ಹೇಳಿಕೊಂಡಿದ್ದ 'ಸ್ಪಿನ್‌ ದಂತಕತೆ' ಶೇನ್‌ ವಾರ್ನ್‌, ತಮ್ಮ ಏಳಿಗೆಗೂ ಅವರೇ ಕಾರಣ ಎಂದಿದ್ದರು.

'ಬಾಬ್‌ ಸಿಮ್ಸನ್‌ ಅವರ ಅಸಾಧಾರಣ ಸೇವೆಯು ಆಸ್ಟ್ರೇಲಿಯಾ ಕ್ರಿಕೆಟ್‌ ಅನ್ನು ತಲೆಮಾರುಗಳವರೆಗೆ ಆವರಿಸಿದೆ' ಎಂದು ಪ್ರಧಾನಿ ಅಂಥೋನಿ ಅಲ್ಬನೀಸ್‌ ಟ್ವೀಟ್‌ ಮಾಡಿದ್ದಾರೆ.

'ಆಟಗಾರನಾಗಿ, ನಾಯಕನಾಗಿ ಮತ್ತು ಆಸಿಸ್‌ ಕ್ರಿಕೆಟ್‌ನ ಹೊಸ ಯುಗಕ್ಕೆ ನಾಂದಿ ಹಾಡಿದ ಕೋಚ್‌ ಆಗಿ, ಸಿಮ್ಸನ್‌ ಅವರು ತಮ್ಮದೇ ಶ್ರೇಷ್ಠ ಮಾನದಂಡವನ್ನು ರೂಪಿಸಿದ್ದರು. ತಾವು ಪ್ರೀತಿಸಿದ ಆಟದ ಕಾರಣಕ್ಕಾಗಿ ಅವರು ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತಾರೆ' ಎಂದೂ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.