ADVERTISEMENT

ಗಾಬಾದಲ್ಲಿ ಮೊದಲ ಟೆಸ್ಟ್; ಪರ್ಥ್‌ಗೆ ತಪ್ಪಿದ ಅವಕಾಶ

ಡಿಸೆಂಬರ್ 3ರಿಂದ ಭಾರತ–ಆಸ್ಟ್ರೇಲಿಯಾ ನಡುವಣ ನಾಲ್ಕು ಟೆಸ್ಟ್‌ಗಳ ಸರಣಿ

ರಾಯಿಟರ್ಸ್
Published 28 ಮೇ 2020, 19:45 IST
Last Updated 28 ಮೇ 2020, 19:45 IST
ವಿರಾಟ್ ಕೊಹ್ಲಿ ಮತ್ತು ಟಿಮ್ ಪೇನ್
ವಿರಾಟ್ ಕೊಹ್ಲಿ ಮತ್ತು ಟಿಮ್ ಪೇನ್   

ಮೆಲ್ಬರ್ನ್: ಆಸ್ಟ್ರೇಲಿಯಾ ಮತ್ತು ಭಾರತ ನಡುವಣ ಟೆಸ್ಟ್‌ ಪಂದ್ಯಕ್ಕೆ ಬ್ರಿಸ್ಟೆನ್‌ನ ಗಾಬಾ ಕ್ರೀಡಾಂಗಣವು ಆತಿಥ್ಯ ವಹಿಸಲಿದೆ. ಆದರೆ ಪರ್ಥ್‌ಗೆ ಅವಕಾಶ ಕೈತಪ್ಪಿದೆ.

ನಾಲ್ಕು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯವನ್ನು ಡಿಸೆಂಬರ್‌ 3ರಿಂದ 7ರವರೆಗೆ ಗಾಬಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗುವುದು. ಡಿ. 11ರಿಂದ ಅಡಿಲೇಡ್ ಓವಲ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ ಹೊನಲು ಬೆಳಕಿನಲ್ಲಿ ನಡೆಯಲಿದೆ. ಭಾರತವು ವಿದೇಶಿ ತಾಣದಲ್ಲಿ ಆಡಲಿರುವ ಮೊದಲ ಪಿಂಕ್ ಬಾಲ್ ಟೆಸ್ಟ್ ಇದಾಗಲಿದೆ.

ಇನ್ನೆರಡು ಟೆಸ್ಟ್ ಪಂದ್ಯಗಳು ಐತಿಹಾಸಿಕ ತಾಣಗಳಾದ ಮೆಲ್ಬರ್ನ್ ಮತ್ತು ಸಿಡ್ನಿಯಲ್ಲಿ ನಡೆಯಲಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕ್ರಿಕೆಟ್ ಆಸ್ಟ್ರೇಲಿಯಾ ಶುಕ್ರವಾರ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.

ADVERTISEMENT

ಮೊದಲ ಟೆಸ್ಟ್‌ ಆಯೋಜನೆಗೆ ಪರ್ಥ್ ಮತ್ತು ಗಾಬಾ ಕ್ರೀಡಾಂಗಣಗಳ ನಡುವಣ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಇದೀಗ ಗಾಬಾ ಮೇಲುಗೈ ಸಾಧಿಸಿದೆ. ಕೊರೊನಾ ವೈರಸ್‌ ಹಾವಳಿಯಿಂದಾಗಿ ಕಳೆದ ಎರಡೂವರೆ ತಿಂಗಳುಗಳಿಂದ ಕ್ರಿಕೆಟ್ ಚಟುವಟಿಕೆಗಳು ಸ್ಥಗಿತಗೊಂಡಿವೆ. ಕ್ರಿಕೆಟ್ ಆಸ್ಟ್ರೇಲಿಯಾ ಅಪಾರ ನಷ್ಟದ ಭೀತಿಯಲ್ಲಿದೆ.

ಆದ್ದರಿಂದ ಭಾರತದ ಎದುರಿನ ಟೆಸ್ಟ್‌ ಸರಣಿಯು ಅದಕ್ಕೆ ಮಹತ್ವದ್ದಾಗಲಿದೆ. ಡಿಸೆಂಬರ್‌ ವೇಳೆಗೆ ಕೊರೊನಾ ಹತೋಟಿಗೆ ಬಂದರೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಸಿಎ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.