ADVERTISEMENT

ಐಪಿಎಲ್‌ನಲ್ಲಿ ‘ಹ್ಯಾಟ್ರಿಕ್‌’ಗೆ ಬಲಿ: ಆ್ಯಶ್ಟನ್‌ ಟರ್ನರ್‌ ‘ದಾಖಲೆ’ ಡಕ್‌

ಒಟ್ಟಾರೆ ಐದು ಬಾರಿ ಶೂನ್ಯ ಸಂಪಾದನೆ

ಏಜೆನ್ಸೀಸ್
Published 23 ಏಪ್ರಿಲ್ 2019, 19:09 IST
Last Updated 23 ಏಪ್ರಿಲ್ 2019, 19:09 IST
ಆ್ಯಶ್ಟನ್‌ ಟರ್ನರ್‌
ಆ್ಯಶ್ಟನ್‌ ಟರ್ನರ್‌   

ನವದೆಹಲಿ: ಸತತ ಐದು ಬಾರಿ ಡಕ್ ಔಟ್‌ ಆದ ಆಸ್ಟ್ರೇಲಿಯಾದ ಆ್ಯಶ್ಟನ್ ಟರ್ನರ್‌ ಡಕ್ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಅಪರೂಪದ ‘ದಾಖಲೆ’ ಬರೆದರು. ಐಪಿಎಲ್‌ನಲ್ಲಿ ಸತತ ಮೂರು ಬಾರಿ ಶೂನ್ಯಕ್ಕೆ ಮರಳಿದ ಟರ್ನರ್‌ ಟ್ವೆಂಟಿ–20ಯಲ್ಲಿ ಸತತವಾಗಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಆಟಗಾರ ಎನಿಸಿಕೊಂಡರು.

ಸೋಮವಾರ ರಾತ್ರಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ನಡೆದಿದ್ದ ಪಂದ್ಯದಲ್ಲಿ ಮಧ್ಯಮ ವೇಗಿ ಇಶಾಂತ್ ಶರ್ಮಾ ಬೌಲಿಂಗ್‌ನಲ್ಲಿ ಶೇರ್ಫಾನ್‌ ರುದರ್‌ಫೋರ್ಡ್‌ ಅವರಿಗೆ ರಾಜಸ್ಥಾನ್ ರಾಯಲ್ಸ್‌ನ ಟರ್ನರ್ ಕ್ಯಾಚ್ ನೀಡಿದ್ದರು. ಹಿಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ನ ಜಸ್‌ಪ್ರೀತ್ ಬೂಮ್ರಾ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಯಲ್ಲಿ ಬಿದ್ದಿದ್ದರು. ಕಿಂಗ್ಸ್ ಇಲೆವನ್ ಎದುರಿನ ಪಂದ್ಯದಲ್ಲಿ ಮುರುಗನ್ ಅಶ್ವಿನ್ ಎಸೆತದಲ್ಲಿ ಡೇವಿಡ್‌ ಮಿಲ್ಲರ್‌ಗೆ ಕ್ಯಾಚ್ ನೀಡಿದ್ದರು. ಮೂರೂ ಪಂದ್ಯಗಳಲ್ಲಿ ‘ಗೋಲ್ಡನ್‌ ಡಕ್‌’ಗೆ (ಮೊದಲ ಎಸೆತದಲ್ಲೇ ವಿಕೆಟ್) ಬಲಿಯಾಗಿದ್ದರು.

ಭಾರತದ ವಿರುದ್ಧ ಶೂನ್ಯ: ಕಳೆದ ಫೆಬ್ರುವರಿಯಲ್ಲಿ ವಿಶಾಖಪಟ್ಟಣದಲ್ಲಿ ನಡೆದಿದ್ದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಟರ್ನರ್‌ ಶೂನ್ಯಕ್ಕೆ ಔಟಾಗಿದ್ದರು. ಅದಕ್ಕೂ ಮೊದಲು ಆಸ್ಟ್ರೇಲಿಯಾದ ಪರ್ತ್‌ನಲ್ಲಿ ನಡೆದಿದ್ದ ಬಿಗ್ ಬ್ಯಾಷ್‌ ಲೀಗ್‌ನ ಅಡಿಲೇಡ್ ಸ್ಟ್ರೈಕರ್ಸ್‌ ಎದುರಿನ ಪಂದ್ಯದಲ್ಲೂ ಶೂನ್ಯ ಸಂಪಾದಿಸಿದ್ದರು. ಪರ್ತ್‌ ಸ್ಕಾರ್ಚರ್ಸ್‌ ಪರ ಟರ್ನರ್ ಆಡಿದ್ದರು.

ADVERTISEMENT

ಸೋಮವಾರದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್‌ಗೆ ಆರು ವಿಕೆಟ್‌ಗಳಿಂದ ಮಣಿದಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ರಾಯಲ್ಸ್ 191 ರನ್‌ ಗಳಿಸಿತ್ತು. ಗುರಿ ಬೆನ್ನತ್ತಿದ ಕ್ಯಾಪಿಟಲ್ಸ್ 19.2 ಓವರ್‌ಗಳಲ್ಲಿ ಜಯ ಸಾಧಿಸಿತ್ತು.

ಪೃಥ್ವಿ ಶಾ (42; 39 ಎಸೆತ, 1 ಸಿಕ್ಸರ್‌, 4 ಬೌಂಡರಿ) ಮತ್ತು ಶಿಖರ್ ಧವನ್‌ (54; 27 ಎ, 2 ಸಿ, 8 ಬೌಂ) ಮೊದಲ ವಿಕೆಟ್‌ಗೆ 72 ರನ್‌ ಸೇರಿಸಿದ್ದರು. ರಿಷಭ್ ಪಂತ್ ಅಜೇಯ 78 (36 ಎಸೆತ; 4 ಸಿ, 6 ಬೌಂ) ರನ್‌ ಗಳಿಸಿ ತಂಡಕ್ಕೆ ಸುಲಭ ಜಯ ಗಳಿಸಿಕೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.