ADVERTISEMENT

ಮಹಿಳಾ ಟೆಸ್ಟ್: ಮಿಥಾಲಿ ಬಳಗಕ್ಕೆ ಶೆಫಾಲಿ ಆಸರೆ

ಇಂಗ್ಲೆಂಡ್ ಮಹಿಳಾ ತಂಡದ ಎದುರಿನ ಏಕೈಕ ಟೆಸ್ಟ್ ಪಂದ್ಯ: ಫಾಲೊ ಆನ್‌ಗೆ ಒಳಗಾದ ಭಾರತ

ಪಿಟಿಐ
Published 18 ಜೂನ್ 2021, 22:49 IST
Last Updated 18 ಜೂನ್ 2021, 22:49 IST
ಶಫಾಲಿ ವರ್ಮಾ ಅರ್ಧಶತಕದ ಸಂಭ್ರಮ –ರಾಯಿಟರ್ಸ್ ಚಿತ್ರ
ಶಫಾಲಿ ವರ್ಮಾ ಅರ್ಧಶತಕದ ಸಂಭ್ರಮ –ರಾಯಿಟರ್ಸ್ ಚಿತ್ರ   

ಬ್ರಿಸ್ಟಲ್: ಮೊದಲ ಇನಿಂಗ್ಸ್‌ ನಲ್ಲಿ ಕುಸಿತ ಕಂಡ ಭಾರತ ಮಹಿಳೆಯರ ತಂಡ ಇಂಗ್ಲೆಂಡ್ ಎದುರಿನ ಏಕೈಕ ಟೆಸ್ಟ್ ಪಂದ್ಯದಲ್ಲಿ ಫಾಲೊ ಆನ್‌ಗೆ ಒಳಗಾಗಿದೆ.

ಮೂರನೇ ದಿನವಾದ ಶುಕ್ರವಾರ ಮೊದಲ ಇನಿಂಗ್ಸ್‌ನಲ್ಲಿ 165 ರನ್‌ಗಳ ಹಿನ್ನಡೆ ಅನುಭವಿಸಿದ ಮಿಥಾಲಿ ರಾಜ್ ಬಳಗ ಎರಡನೇ ಇನಿಂಗ್ಸ್‌ನಲ್ಲಿ ಮಳೆಯಿಂದಾಗಿ ದಿನದಾಟ ಮುಗಿದಾಗ ಒಂದು ವಿಕೆಟ್ ಕಳೆದುಕೊಂಡು 83 ರನ್ ಗಳಿಸಿದೆ. ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಇನ್ನೂ 82 ರನ್‌ ಬೇಕಾಗಿದ್ದು ಅರ್ಧಶತಕ ಗಳಿಸಿರುವ ಶೆಫಾಲಿ ವಾರ್ಮಾ (55; 68 ಎಸೆತ, 11 ಬೌಂಡರಿ) ತಂಡಕ್ಕೆ ಆಸರೆಯಾಗಿದ್ದಾರೆ.

ನಾಲ್ಕು ದಿನಗಳ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ಒಂಬತ್ತು ವಿಕೆಟ್‌ಗಳಿಗೆ 396 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಉತ್ತರವಾಗಿ ಭಾರತ 231 ರನ್‌ಗಳಿಗೆ ಆಲೌಟಾಯಿತು. ಗುರು ವಾರ ಐದು ವಿಕೆಟ್‌ ಕಳೆದುಕೊಂಡಿದ್ದ ತಂಡ ಶುಕ್ರವಾರ 21.2 ಓವರ್‌ಗಳಲ್ಲಿ 44 ರನ್ ಸೇರಿಸುವಷ್ಟರಲ್ಲಿ ಉಳಿದ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು.

ADVERTISEMENT

ಎರಡನೇ ಇನಿಂಗ್ಸ್‌ ಆರಂಭದಲ್ಲೇ ತುಂತುರು ಮಳೆ ಮಳೆ ಸುರಿಯಿತು. ಭೋಜನದ ನಂತರ 30 ನಿಮಿಷ ತಡವಾಗಿ ಆಟ ಮುಂದುವರಿಯಿತು. 57 ರನ್ ಗಳಿಸಿದ್ದಾಗ ಮತ್ತೆ ಮಳೆ ಕಾಡಿತು. ಸ್ವಲ್ಪ ಹೊತ್ತಿನ ನಂತರ ಆಟ ಮುಂದುವರಿದರೂ 83 ರನ್‌ ಗಳಿಸಿದ್ದಾಗ ಮತ್ತೊಮ್ಮೆ ಮಳೆ ಸುರಿಯಿತು. ಆ ನಂತರ ಪಂದ್ಯ ಮುಂದುವರಿಸಲು ಆಗಲಿಲ್ಲ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಇಂಗ್ಲೆಂಡ್‌: 9ಕ್ಕೆ 396 ಡಿಕ್ಲೇರ್‌; ಭಾರತ (ಗುರುವಾರ 60 ಓವರ್‌ಗಳಲ್ಲಿ 5ಕ್ಕೆ187):81.2 ಓವರ್‌ ಗಳಲ್ಲಿ 231 (ದೀಪ್ತಿ ಶರ್ಮಾ ಔಟಾಗದೆ 29, ಪೂಜಾ ವಸ್ತ್ರಕಾರ್ 12; ಸೋಫಿ ಎಕ್ಲೆಸ್ಟೋನ್‌ 88ಕ್ಕೆ4, ಹೀಥರ್ ನೈಟ್ 7ಕ್ಕೆ2); ಎರಡನೇ ಇನಿಂಗ್ಸ್‌: ಭಾರತ (ಫಾಲೊ ಆನ್‌):24.3 ಓವರ್‌ಗಳಲ್ಲಿ 1ಕ್ಕೆ 83 (ಸ್ಮೃತಿ ಮಂದಾನ 8, ಶೆಫಾಲಿ ವರ್ಮಾ ಬ್ಯಾಟಿಂಗ್‌ 55, ದೀಪ್ತಿ ಶರ್ಮಾ ಬ್ಯಾಟಿಂಗ್ 18).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.